Advertisement
ಬೆಳ್ತಂಗಡಿ: ಎಸ್‌ಡಿಎಂ ಐಟಿಐನಲ್ಲಿರುವಾಗಲೇ, ಆ ಹುಡುಗನಿಗೆ ಸೇನೆ ಬಗ್ಗೆ ಆಸಕ್ತಿ. ಎನ್‌ಸಿಸಿಯ ಎಲ್ಲ ಕ್ಯಾಂಪ್ ಗಳಿಗೆ ಆಸಕ್ತಿಯಿಂದ ಹೆಸರು ಕೊಡುತ್ತಿದ್ದ ಆ ಹುಡುಗ ಇಂದು ಸೇನೆಯಲ್ಲಿ ಮೇಜರ್ ಸ್ಥಾನಕ್ಕೆ ಏರಿದ್ದಾರೆ. ಅವರೇ ಉಜಿರೆಯ ಮೇ| ಎಂ.ನರಸಿಂಹ ಪ್ರಭು.
ಉಜಿರೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿ ಉನ್ನತ ಶಿಕ್ಷಣಕ್ಕೆ ಕಷ್ಟವಾದ ಕಾರಣ ವೇಣೂರಿನಲ್ಲಿ ಎಸ್ ಡಿಎಂ ಐಟಿಐ ಸೇರಿದರು. ಸೇನೆಗೆ ಹೇಗಾದರೂ ಸೇರಲೇಬೇಕೆಂದು ಅದಮ್ಯ ಆಸೆಯಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದರು. ಸೇನಾ ತರಬೇತಿ ಬಳಿಕ ಟೆಕ್ನಿಕಲ್ ಡಿಪ್ಲೊಮಾ ಪ್ರವೇಶ ಪರೀಕ್ಷೆಯಲ್ಲಿ 1,200 ಮಂದಿ ಪೈಕಿ 26 ಮಂದಿಗಷ್ಟೇ ಅವಕಾಶ ಇದ್ದಾಗ ಮೊದಲಿಗರಾದರು. ಅನಂತರವೂ ಸೇನೆಯಲ್ಲಿ ಪ್ರತಿ ಕ್ಷಣಕ್ಕೂ ತಮ್ಮ ಅರ್ಹತೆಯನ್ನು ಶ್ರುತಪಡಿಸಿ ಎಸ್ ಎಸ್‌ಬಿ ಸಂದರ್ಶನದಲ್ಲಿ ಅಧಿಕಾರಿ ಹುದ್ದೆಗೆ ಆಯ್ಕೆಯಾದರು. ಸ್ವ ಪರಿಶ್ರಮದಿಂದ ರೇಡಿಯೊ ಹಾಗೂ ಟೆಲಿ ಕಮ್ಯುನಿಕೇಶನ್ ಎಂಜಿನಿಯರಿಂಗ್ ಪೂರೈಸಿದ್ದಾರೆ.
Related Articles
ಆಸಕ್ತಿ ಮತ್ತು ಛಲದಿಂದಲೇ ಸೇನೆಗೆ ಸೇರುವ ಒಂದೇ ಗುರಿ ಹೊಂದಿದ್ದವರು ಮೇ| ಪ್ರಭು. ಹಾಗಾಗಿ ಐಟಿಐ ಕಲಿಯುತ್ತಿದ್ದಾಗ ಸೇನೆಗೆ ಸಂಬಂಧಪಟ್ಟ ಎಲ್ಲ ಎನ್‌ಸಿಸಿ ಶಿಬಿರಗಳಲ್ಲಿ ಭಾಗವಹಿಸಿ ಅನುಭವದ ಮೂಟೆಯನ್ನೇ ಹೊತ್ತುಕೊಂಡು ಮಂಗಳೂರಿನ ಸೇನಾ ಆಯ್ಕೆ ಶಿಬಿರಕ್ಕೆ ತೆರಳಿದ್ದರು. ಮೆರಿಟ್‌ನಲ್ಲಿ ಟೆಕ್ನಿಕಲ್ ರೇಡಿಯೋ ಮೆಕ್ಯಾನಿಕ್(ಸಿಗ್ನಲ್‌ಮೆನ್) ಆಗಿ 1990ರ ಅಕ್ಟೋಬರ್‌ನಲ್ಲಿ ಆಯ್ಕೆಯಾದರು. ಅವರೀಗ ಪದೋನ್ನತಿಯಾಗಿ ಮೇಜರ್ ಆಗಿದ್ದಾರೆ.
Advertisement
ಪೋಖರಣ್ ಅಣುಸ್ಪೋಟದಲ್ಲಿ…ರಾಜಸ್ಥಾನದ ಪೋಖರಣ್‌ನಲ್ಲಿ ನಡೆದ ಅಣ್ವಸ್ತ್ರ ಪರೀಕ್ಷೆಯಲ್ಲಿ ಕ್ಷಿಪಣಿತಜ್ಞ, ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜತೆಗೆ ಭಾಗವಹಿಸಿದ್ದ ಕ್ಷಣ ಅವಿಸ್ಮರಣೀಯ ಎನ್ನುತ್ತಾರೆ ಪ್ರಭು. 2003 ಹಾಗೂ 2006ರಲ್ಲಿ ಜೂನಿಯರ್ ಕಮಿಷನ್ಡ್ ಆಫಿಸರ್ ಹಾಗೂ ಕಮಿಷನ್ಡ್ ಆಫಿಸರ್ ಆಗಿರುವಾಗ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪತ್ರ ಪಡೆದ ಹೆಗ್ಗಳಿಕೆ ಅವರದ್ದು. ಲೇಹ್‌ಲಡಾಕ್‌ನಲ್ಲಿ ಭಾರತ ಪಾಕ್ ಗಡಿಯಲ್ಲಿ ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್ (ಜಬ್ ತಕ್ ಹೇ ಜಾನ್) ಸಿನೆನಿಮಾ ಚಿತ್ರಣ ಸಂದರ್ಭ ಜತೆಗಿದ್ದುದೇ ಅಲ್ಲದೇ ಕ್ರಿಕೆಟ್ ತಾರೆ ಎಂ.ಎಸ್. ಧೋನಿ ಅವರ ಪ್ರೊಟೋಕಾಲ್ ಆಫಿಸರ್ ಆಗಿಯೂ ನಿಯುಕ್ತರಾಗಿದ್ದರು. 27 ವರ್ಷಗಳ ಸೇವೆ
ತಮ್ಮ 27 ವರ್ಷಗಳ ಸುದೀರ್ಘ ಸೇನಾ ಸೇವಾವಧಿಯಲ್ಲಿ ಅತ್ಯಧಿಕ ಸಮಯ ಕಳೆದಿದ್ದು, ಚಳಿ ಪ್ರದೇಶದಲ್ಲಿ ಎನ್ನುತ್ತಾರೆ ಮೇ| ಪ್ರಭು. ಒಟ್ಟಾರೆ ಸೇವಾವಧಿಯಲ್ಲಿ 4 ಬಾರಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅಕೂ°ರ್, ರಜೌರಿ, ಶ್ರೀನಗರ, ಅಮರನಾಥ, ದ್ರಾಸ್, ಕಾರ್ಗಿಲ್, ಲೇಹ್ ಲಡಾಕ್‌ನಲ್ಲಿ ಅವರ ಸೇವೆಯನ್ನು ಸೇನೆ ಬಳಸಿಕೊಂಡಿದೆ. ಇದರೊಂದಿಗೆ ಮಧ್ಯಪ್ರದೇಶದ ಮೊವ್‌ನಲ್ಲಿ ಮಿಲಿಟರಿ ಕಾಲೇಜ್‌ನಲ್ಲಿ ತರಬೇತುದಾರರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಜಬಲ್‌ಪುರ, ಗುಜರಾತ್‌ನ ಅಹ್ಮಮದಾಬಾದ್, ಅಸ್ಸಾಂನ ತೇಜಪುರ್ ಬಳಿಕ ಈಗ ಸಿಕ್ಕಿಂನ ಡೋಕ್ಲಾಂ ಸಮೀಪ ಸುಕನ ಎಂಬಲ್ಲಿ ಮಿಲಿಟರಿ ಸ್ಟೇಶನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವ್ಯಾಪಾರಿ ಕುಟುಂಬ
ಬೆಳ್ತಂಗಡಿ ತಾಲೂಕಿನ ಉಜಿರೆಯ ಮಧ್ಯಮ ವರ್ಗದ ವ್ಯಾಪಾರಿ ಕುಟುಂಬದ ಹಿನ್ನೆಲೆಯವರು ಮೇ| ಪ್ರಭು. ತಂದೆ ಮೂರ್ಜೆ ವಾಸುದೇವ ಪ್ರಭು. ತಾಯಿ ಮನೋರಮಾ. ಮೂವರು ಪುತ್ರರಲ್ಲಿ ಮೇ| ಪ್ರಭು ಎರಡನೆಯವರು. ಅವರ ಪತ್ನಿ ಪ್ರತಿಮಾ ಹೆಗ್ಡೆ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿ. ಪ್ರಿಯಾ ಹಾಗೂ ಪ್ರೀತಮ್ ಪ್ರಭು ಮಕ್ಕಳು.
ವಾಸುದೇವ ಪ್ರಭು ಮತ್ತು ಮನೋರಮಾ ಪ್ರಭು. ಸೇನೆಗೆ ಸೇರಿ
ಸೇನೆಯ ಕುರಿತು ದ.ಕ. ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ಈಗಿನ ಸೇನೆಯಲ್ಲಿ ಹೊಸ ತಂತ್ರಜ್ಞಾನ ಇರುವುದರಿಂದ ತಾಂತ್ರಿಕ ಶಿಕ್ಷಣ ಕಲಿತವರಿಗೂ ಸಾಕಷ್ಟು ಅವಕಾಶ ಇದೆ. ಪ್ರತಿ ಮನೆಯಿಂದ ಒಬ್ಬರಾದರೂ ಸೇನೆಗೆ ಸೇರುವಂತಾಗಬೇಕು.
– ಮೇ| ನರಸಿಂಹ ಪ್ರಭು ಉದಯವಾಣಿಗೆ ಸಲಾಂ
ಸೈನಿಕರಿಗೆ ಸಲಾಂ ಎಂಬ ಅಂಕಣ ಮೂಲಕ ದೇಶಸೇವೆ ಹಾಗೂ ಯೋಧರ ಕುರಿತು ಸಮಗ್ರ ಮಾಹಿತಿ ನೀಡಿ ಯುವಜನರಿಗೆ ಸ್ಫೂರ್ತಿ ನೀಡುವ ಕಾರ್ಯವನ್ನು ಉದಯವಾಣಿ ಮಾಡುತ್ತಿದೆ. ಇದು ಪ್ರಶಂಸನೀಯ. ನರಸಿಂಹ ಪ್ರಭು ನನ್ನ ಆತ್ಮೀಯರಾಗಿದ್ದು ಅವರ ಬೆಳವಣಿಗೆಯನ್ನು ಪ್ರತಿ ಹಂತದಲ್ಲೂ ನಾನು ಗಮನಿಸುತ್ತಿದ್ದೇನೆ.
– ರಾಜೇಶ್ ಪೈ, ಉಜಿರೆ ದೇಶದ ಸೈನಿಕ ಪರಿವಾರ ಉದ್ಧಾರಕ
ದೇಶ ಸೇವೆಗೆ ಸೇನೆ ಸೇರಿದ ಸೈನಿಕರು ತಮ್ಮ ಕುಟುಂಬದೊಂದಿಗೆ ತಾವು ಕಲಿತ ಶಾಲೆ, ಕಾಲೇಜು, ಊರಿಗೂ ಗೌರವ ತರುತ್ತಾರೆ. ಜನನಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಸೇನೆಗೆ ಸೇರುವುದೆಂದರೆ ಆತ್ಮಗೌರವಕ್ಕೆ ಸಮ್ಮಾನ ಮಾಡಿದಂತೆ.
– ಮನೋರಮಾ ಪ್ರಭು, ತಾಯಿ ಲಕ್ಷ್ಮೀ ಮಚ್ಚಿನ