Advertisement

ಪ್ರಧಾನಿ ಪ್ರಭಾವವೇ ಕಮಲ ಪಡೆಗೆ ಆಸರೆ

02:05 PM May 13, 2019 | Team Udayavani |

ಬೆಳಗಾವಿ: ಮುಳ್ಳೂರು ಘಾಟ್ ಪ್ರದೇಶದಲ್ಲಿ ಸ್ಥಾಪನೆಗೊಂಡಿರುವ ಬೃಹತ್‌ ಶಿವನ ಪ್ರತಿಮೆಯಿಂದ ಎಲ್ಲರ ಗಮನಸೆಳೆದಿರುವ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಈಗ ಲೋಕಸಭೆ ಚುನಾವಣೆಯ ಮುನ್ನಡೆ ಲೆಕ್ಕಾಚಾರ ಸುದ್ದಿಮಾಡುತ್ತಿದೆ. ಬೃಹದಾಕಾರದಲ್ಲಿ ನೆಲೆ ನಿಂತಿರುವ ಈಶ್ವರನ ಆಶೀರ್ವಾದ ಯಾರ ಮೇಲೆ ಎಂಬ ಚರ್ಚೆ ನಡೆದಿದೆ.

Advertisement

ರಾಮದುರ್ಗ ವಿಧಾನಸಭಾ ಕ್ಷೇತ್ರ ಈಗ ಬಿಜೆಪಿ ಭದ್ರಕೋಟೆ. ಕಳೆದ ಬಾರಿ ಕಾಂಗ್ರೆಸ್‌ ಪರವಾಗಿದ್ದ ಈ ಕ್ಷೇತ್ರ ಈಗ ಬಿಜೆಪಿ ಪಾಲಾಗಿದೆ. ಅದೇ ಲೆಕ್ಕಾಚಾರದ ಮೇಲೆ ತಮಗೆ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಿಗುವುದು ಖಚಿತ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.

ಕ್ಷೇತ್ರದ ಮತದಾರರಿಂದ ಒಂದೇ ತೆರನಾದ ಅಭಿಪ್ರಾಯ ಬಂದಿಲ್ಲ. ಬಿಜೆಪಿ ಇಲ್ಲವೇ ಕಾಂಗ್ರೆಸ್‌ಗೆ ಮುನ್ನಡೆ ಎಂದು ಅದರ ಅಭಿಮಾನಿಗಳು ಹೇಳಿದರೆ ಇನ್ನು ಕೆಲವರು ಎರಡೂ ಪಕ್ಷಕ್ಕೆ ಸಮಾನ ಅವಕಾಶ ಎನ್ನುತ್ತಿದ್ದಾರೆ. ಇದೇ ಸಾಧ್ಯಾಸಾಧ್ಯತೆಗಳ ಮಧ್ಯೆ ಮುನ್ನಡೆಯ ಲೆಕ್ಕಾಚಾರ ನಡೆದಿದೆ. ಆದರೆ ಯಾವ ಪಕ್ಷದವರೂ ಬೆಟ್ಟಿಂಗ್‌ ಕಟ್ಟುವ ಗೋಜಿಗೆ ಹೋಗಿಲ್ಲ.

ಬಿಜೆಪಿಗೆ ತಮ್ಮವರೇ ಶಾಸಕರಾಗಿರುವುದು ಸ್ವಲ್ಪ ಅನುಕೂಲವಾಗಿದೆ. ಇದಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅಲೆಯೇ ದೊಡ್ಡ ಆಸರೆ. ಯುವ ಸಮೂಹ ಸ್ವಯಂ ಪ್ರೇರಣೆಯಿಂದ ಬಿಜೆಪಿ ಪರವಾಗಿ ಬಂದಿದ್ದು ಅನೇಕ ಕಡೆಗಳಲ್ಲಿ ಕಂಡುಬಂದಿದೆ.ಹೀಗಾಗಿ ಕಾರ್ಯಕರ್ತರು ಸಂಸದರ ಕೆಲಸಕ್ಕಿಂತ ಮೋದಿ ನೋಡಿ ಮತಹಾಕಿ ಎಂದು ಪ್ರಚಾರ ಮಾಡಿರುವುದು ಕ್ಷೇತ್ರದಲ್ಲಿ ಎದ್ದುಕಂಡಿತ್ತು. ಈಗ ಅದೇ ವಿಶ್ವಾಸದ ಮೇಲೆ ತಮಗೆ ಮುನ್ನಡೆ ಬರುವದು ಖಚಿತ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.

ಮಾಜಿ ಶಾಸಕರ ಅಭಿವೃದ್ಧಿ ಕೆಲಸಗಳು ನಮಗೆ ಬಹಳ ಅನುಕೂಲಕರ ವಾತಾವರಣ ಕಲ್ಪಿಸಿವೆ. ಆಗ ಶಾಸಕರು ಮಾಡಿದ ಕುಡಿಯುವ ನೀರಿನ ಕಾಮಗಾರಿಗಳಿಂದ ಇವತ್ತು ರಾಮದುರ್ಗದ ಜನ ನೀರಿಗಾಗಿ ಹಾಹಾಕಾರ ಪಡುತ್ತಿಲ್ಲ. ಇದು ನಮ್ಮ ಅಭ್ಯರ್ಥಿಯ ಗೆಲುವಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ.

Advertisement

ಕಳೆದ ಸಲಕ್ಕಿಂತ ಈ ಬಾರಿ ಹೆಚ್ಚು ಮುನ್ನಡೆ ನಿರೀಕ್ಷೆ ಮಾಡಿದ್ದೇವೆ. ಪಕ್ಷದ ಅಭ್ಯರ್ಥಿಗಿಂತ‌ ಪ್ರಧಾನಿ ನರೇಂದ್ರ ಮೋದಿ ಅಲೆ ಬಹಳ ಪರಿಣಾಮಕಾರಿ ಕೆಲಸ ಮಾಡಿದೆ. ಗ್ರಾಮೀಣ ಪ್ರದೇಶದ ಮತದಾರರು ಸಹ ಪಕ್ಷದ ಬಗ್ಗೆ ಒಳ್ಳೆಯ ವ್ಯಕ್ತಪಡಿಸಿದ್ದು ವಾತಾವರಣ ನಮ್ಮ ಪರವಾಗಿದೆ ಎನಿಸಿತು. ಯುವ ಸಮುದಾಯ ಮೋದಿ ಅಲೆಯಿಂದ ಪ್ರಭಾವಿತರಾಗಿದ್ದಾರೆ. ಈ ಎಲ್ಲ ಕಾರಣಗಳು ಬಿಜೆಪಿಗೆ ಅಧಿಕ ಮುನ್ನಡೆ ಪಡೆಯಲು ಸಹಾಯಕವಾಗಲಿವೆ.

• ರಮೇಶ ದೇಶಪಾಂಡೆ,ಬಿಜೆಪಿ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ

ಮೇಲ್ನೋಟಕ್ಕೆ ಬಿಜೆಪಿ ಮುಂದಿದೆ. ಈ ಪಕ್ಷಕ್ಕೆ ಲೀಡ್‌ ಬಂದಿದ್ದೇ ಆದರೆ ಅದಕ್ಕೆ ಮೋದಿ ಅಲೆಯೇ ಕಾರಣ. ಯುವ ಮತದಾರರು ಮೋದಿ ಮಾತುಗಳಿಗೆ ಪ್ರಭಾವಿತರಾಗಿದ್ದಾರೆ. ಕಾಂಗ್ರೆಸ್‌ನ ಹಿಂದಿನ ಶಾಸಕರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಪಕ್ಷದ ಅಭ್ಯರ್ಥಿ ಸಾಧುನವರ ಕ್ಷೇತ್ರಕ್ಕೆ ಅಷ್ಟು ಪರಿಚಿತರೇನಲ್ಲ.

• ಸಹದೇವ ಪವಾರ,ರಾಮದುರ್ಗ

ಒಳ್ಳೆಯ ವಾತಾವರಣ ಕಂಡುಬಂದಿದೆ. ಅದಕ್ಕೆ ತಕ್ಕಂತೆ ನಾವೂ ಸಹ ಪ್ರಯತ್ನ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಅಸಮಾಧಾನ ಇರಲಿಲ್ಲ. ಆದರೆ ಬಿಜೆಪಿಯಲ್ಲಿ ಅಭ್ಯರ್ಥಿಯ ಬಗ್ಗೆ ಅಸಮಾಧಾನ ಇದೆ. ಇದು ನಮಗೆ ಅನುಕೂಲ ಮಾಡಿದೆ. ನಮ್ಮ ಅಭ್ಯರ್ಥಿ ಡಾ.ವಿ.ಎಸ್‌.ಸಾಧುನವರ ಕ್ಷೇತ್ರಕ್ಕೆ ಹೊಸಬರೇನಲ್ಲ. ತಮ್ಮ ಶಿಕ್ಷಣ ಸಂಸ್ಥೆ ಹಾಗೂ ಬ್ಯಾಂಕ್‌ಗಳ ಮೂಲಕ ಇಲ್ಲಿನ ಜನರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.

• ಜಿ.ಬಿ.ರಂಗನಗೌಡರ,ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ

ಮತದಾನದ ಪ್ರಮಾಣ ಹಾಗೂ ವಾತಾವರಣ ನೋಡಿದರೆ ಬಿಜೆಪಿಗೆ ಅನುಕೂಲವಾಗಿರಬಹುದು. ಬಹುತೇಕ ಕಡೆ ಮೋದಿ ಅಲೆ ಬಹಳ ಕೆಲಸ ಮಾಡಿದೆ. ಚುನಾವಣೆಯ ಸಮಯದಲ್ಲಿ ಅವರ ಪ್ರಚಾರ ಸಹ ಬಹಳ ಜೋರಾಗಿತ್ತು. ಮನೆ ಮನೆಗೆ ಹೋಗಿದ್ದರು. ಮೇಲಾಗಿ ಎದುರಾಳಿ ಅಭ್ಯರ್ಥಿ ಸಾಧುನವರ ಕ್ಷೇತ್ರದ ಜನರಿಗೆ ಪರಿಚಿತರೇನಲ್ಲ. ಇದೆಲ್ಲವೂ ಬಿಜೆಪಿಗೆ ಅನುಕೂಲವಾದಂತಿದೆ.

• ಹನುಮಂತ ಜೋಗೆಲ್ಲಪ್ಪನವರ, ರಾಮದುರ್ಗ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next