ಮಂಗಳೂರು: ದೇಶದ ಮುಖ್ಯಸ್ಥರು, ಯಾವುದಾದರೂ ದೇಶದ ಪ್ರಧಾನಿ ಆಗಮಿಸುತ್ತಾರೆ ಎಂದರೆ ಅತ್ಯಂತ ಬಿಗು ಭದ್ರತೆ ಕಾರ್ಯಕ್ರಮ ಇತ್ಯಾದಿ ಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿದ್ದಲ್ಲ!
ಆದರೆ ಶ್ರೀ ಕ್ಷೇತ್ರ ಕೊಲ್ಲೂರು ದೇಗುಲಕ್ಕೆ ಆಗಮಿಸಿದ ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಅವರು ಅಲ್ಲಿಂದ ಮಂಗಳೂರಿಗೆ ಬಂದು ತಂಗಿದ್ದು, ಮಂಗಳೂರಿನ ಹೊರ ಜಗತ್ತಿಗೆ ಗೊತ್ತೇ ಆಗಿಲ್ಲ. ಅಷ್ಟೇ ಅಲ್ಲದೆ, ಇಲ್ಲಿನ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೇಟ್ ವೇ ಹೊಟೇಲ್‌ನಲ್ಲಿ ವಾಸ್ತವ್ಯ: ಶ್ರೀಲಂಕಾ ದಿಂದ ಆಗಮಿಸಿದ ಸಿಂಘೆ ಅವರು ಮಂಗಳವಾರ ಬೆಳಗ್ಗೆ 7.05ಕ್ಕೆ ಬೆಂಗಳೂರಿನಿಂದ ಜೆಟ್ ಏರ್‌ವೆàಸ್ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಅವರು 16 ಬೆಂಗಾವಲು ಪಡೆ ಕಾರುಗಳೊಂದಿಗೆ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಳಿಯಿರುವ ಗೇಟ್‌ವೇ ಹೊಟೇಲ್‌ಗೆ ಆಗಮಿಸಿದರು. ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಬಳಿಕ ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ 9.20ಕ್ಕೆ ಕೊಲ್ಲೂರಿಗೆ ತೆರಳಿದರು. ದೇಗುಲ ಭೇಟಿ ಬಳಿಕ ಮಧ್ಯಾಹ್ನ 2.20ರ ವೇಳೆಗೆ ಮತ್ತೆ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಆಗಮಿಸಿ, ಹೊಟೇಲ್‌ನಲ್ಲಿ ತಂಗಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆಗೆ ಅವರು ಹೊಸದಿಲ್ಲಿಗೆ ಪ್ರಯಾಣಿಸಲಿದ್ದಾರೆ.
ಒಂದು ಅಂತಸ್ತು ಪ್ರಧಾನಿಗೆ ಮೀಸಲು: ಸಿಂಘೆ ಅವರ ಆಗಮನ ಹಿನ್ನೆಲೆಯಲ್ಲಿ ಹೊಟೇಲ್‌ನ ಒಂದು ಅಂತಸ್ತನ್ನು ಸಂಪೂರ್ಣ ಅವರಿಗೆ ಮೀಸಲಿರಿಸಲಾಗಿದೆ. ಅಲ್ಲಿ ವಾಸ್ತವ್ಯ ಇದ್ದವರನ್ನು ಬೇರೆಡೆ ಸ್ಥಳಾಂತರಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಮೊಬೈಲ್ ಜಾಮರ್ ಅಳವಡಿಸಲಾಗಿದ್ದು, ಉನ್ನತ ಮಟ್ಟದ ಭದ್ರತೆ ನೀಡಲಾಗಿದೆ. ಇಡೀ ಹೊಟೇಲ್ ಪೊಲೀಸ್, ಭದ್ರತಾ ದಳದ ಮಂದಿಯಿಂದ ತುಂಬಿದೆ. ಮಂಗಳೂರು ನಗರದಲ್ಲೂ ಬಿಗು ಪಹರೆ ಇದ್ದು, ಕೆಎಸ್‌ಆರ್‌ಪಿ, ಸಶಸ್ತ್ರ ದಳ, ಪೊಲೀಸರನ್ನು ನಿಯೋಜಿಸಲಾಗಿದೆ.
ತಂಗಿದ ಮೊದಲ ವಿದೇಶಿ ಪ್ರಧಾನಿ: ವಿದೇಶದ ಪ್ರಧಾನಿಯೊಬ್ಬರು ಮಂಗಳೂರಿಗೆ ಆಗಮಿಸಿ ಇಲ್ಲೇ ಒಂದು ದಿನ ಉಳಿದುಕೊಂಡ ಉದಾಹರಣೆ ಇಲ್ಲಿಯವರೆಗೆ ಇಲ್ಲ. ಮಂಗಳೂರಿಗೆ ಆಗಮಿಸಿದ ಗಣ್ಯಾತಿಗಣ್ಯರ ಪಟ್ಟಿಯಲ್ಲಿ ನೇಪಾಲದ ದೊರೆ ಬೀರೇಂದ್ರ, ಹಿಂದಿನ ಪೋಪ್ ದ್ವಿತೀಯ ಜಾನ್‌ಪಾಲ್ ಇದ್ದಾರೆ.
ಕಾಣೆ ಮೀನಿಗೆ ಫಿದಾ: ಶ್ರೀಲಂಕಾ ಪ್ರಧಾನಿಗೆ ದಕ್ಷಿಣ ಭಾರತದ, ಅದರಲ್ಲೂ ಮಂಗಳೂರಿನ ಖಾದ್ಯಗಳ ಮೆನು ಸಿದ್ಧಪಡಿಸಲಾಗಿದೆ. ಅವರ ಭೇಟಿಗೆ ಮುನ್ನ ಶ್ರೀಲಂಕಾ ಖಾದ್ಯಗಳ ಮೆನು ತರಿಸಲಾಗಿತ್ತಾದರೂ ಸ್ಥಳೀಯ ಖಾದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಂಗಳೂರಿನ ಕಾಣೆ, ಮಾಂಜಿ ಮೀನು ಸೇರಿದಂತೆ ಕರಾವಳಿಯ ಬಗೆ ಬಗೆಯ ಖಾದ್ಯಗಳನ್ನು ಪ್ರಧಾನಿ ಅವರು ಸವಿದಿದ್ದು, ಟೇಸ್ಟ್‌ಗೆ ಮಾರು ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.
ದಿನೇಶ್ ಇರಾ