Advertisement

ಪರಿಸ್ಥಿತಿ ವಿಷಮಿಸಲು ಪ್ರಧಾನಿಯೇ ಕಾರಣ

12:30 AM Mar 01, 2019 | Team Udayavani |

ಕಾಶ್ಮೀರದಲ್ಲಿ  ಉಗ್ರಗಾಮಿಗಳ ಉಪಟಳ ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಣೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಆರೋಪಿಸಿದ್ದಾರೆ. 

Advertisement

ಹಾಸನದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ  ನಾಲ್ಕೂ ಮುಕ್ಕಾಲು ವರ್ಷದಲ್ಲಿ ಕಾಶ್ಮೀರದಲ್ಲಿ ಮೂರು ಸರಕಾರಗಳು ಬದಲಾಗಿವೆ. ಈಗ ರಾಜ್ಯಪಾಲರ ಆಡಳಿತವಿದೆ. ಅಲ್ಲಿ ಈಗ ನಿಷೇಧಾಜ್ಞೆ ಜಾರಿ ಮಾಡಿಕೊಂಡು ಆಡಳಿತ ನಡೆಸುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಅಲ್ಲಿನ ಯುವ ಜನರು ಭದ್ರತಾ ಪಡೆಗಳ ಮೇಲೆ ಬೀದಿಯಲ್ಲಿ ಕಲ್ಲು ಹೊಡೆಯುತ್ತಾರೆ. ಇಂಥ ಪರಿಸ್ಥಿತಿ ನಿರ್ಮಾಣ ವಾಗಿದ್ದೇಕೆ? ಇದಕ್ಕೆ ಮೋದಿ ಅವರ ಸರಕಾರ ಹೊಣೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ವರ್ಷದ ಹಿಂದೆ ಸರ್ಜಿಕಲ್‌ ದಾಳಿ ಆಯಿತು. ಈಗ ವಾಯು ದಾಳಿ ನಡೆದಿದೆ. ಇಂತಹ ಸಂದರ್ಭದಲ್ಲಿ  ದೇಶದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ದೇಶದ ಪರ ನಿಲ್ಲಲೇಬೇಕು. ವಿಪಕ್ಷಗಳೂ ಸರಕಾರದ ನಡೆಯನ್ನು ಬೆಂಬಲಿಸುತ್ತಿವೆ. ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಉಗ್ರಗಾಮಿಗಳು ದೇಶಕ್ಕೆ ನುಸುಳುತ್ತಿದ್ದಾರೆ.  ಅವರನ್ನು ಸದೆ ಬಡಿಯಲು ಎಲ್ಲರೂ ಸಹಕಾರ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಸರಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತದ ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ ಮೋದಿ ಅವರು ವಿಪಕ್ಷಗಳನ್ನು, ಮುಖ್ಯವಾಗಿ ಕಾಂಗ್ರೆಸ್‌ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ದೇವೇಗೌಡರು ದೂರಿದ್ದಾರೆ. ದಿಲ್ಲಿಯಲ್ಲಿ ಸೈನಿಕರ ಸ್ಮಾರಕ ಲೋಕಾರ್ಪಣೆ ವೇಳೆ ಪ್ರಧಾನಿಯವರಿಂದ ದೇಶ ವಿಶೇಷ ಸಂದೇಶವನ್ನು ನಿರೀಕ್ಷಿಸಿತ್ತು. ಸ್ಮಾರಕ ನಿರ್ಮಾಣ ಸ್ವಾಗತಾರ್ಹ.

ಹುತಾತ್ಮರ ಹೆಸರನ್ನು ದಾಖಲಿಸಿದ್ದೂ ಒಳ್ಳೆಯ ಕೆಲಸ. ಆದರೆ, ಅಲ್ಲಿ  ಪ್ರಧಾನಿಯವರು ಪ್ರಮುಖ ರಾಜಕೀಯ ಎದುರಾಳಿಯನ್ನು ಹತ್ತಿಕ್ಕುವ, ವಿಶೇಷವಾಗಿ ನೆಹರೂ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ಅಪಹಾಸ್ಯದ ಮಾತುಗಳನ್ನು ಆಡಿದ್ದು ಸರಿಯಲ್ಲ. ಇದನ್ನು ರಾಷ್ಟ್ರದ ಜನರು ಗಮನಿಸುತ್ತಿರುತ್ತಾರೆ. ತೀರ್ಮಾನವನ್ನೂ ತೆಗೆದುಕೊಳ್ಳುವುದು ಜನರಿಗೆ ಗೊತ್ತಿರುತ್ತದೆ ಎಂದೂ ದೇವೇಗೌಡರು ಹೇಳಿದ್ದಾರೆ.

ಪಾಕಿಸ್ಥಾನದಲ್ಲಿ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆದ ನಂತರ ಕೈಗೊಂಡ ರಾಜತಾಂತ್ರಿಕ ಕ್ರಮಗಳು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಕ್ರಮಗಳು ಸ್ವಾಗತಾರ್ಹ. ಇನ್ನು ಮುಂದೆಯೂ ಇಂತಹ ರಾಜತಾಂತ್ರಿಕ ಕ್ರಮಗಳನ್ನು ಮುಂದುವರಿಸಿ, ನಮ್ಮ ವೀರ ಯೋಧ ಅಭಿನಂದನ್‌ರನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ಕೆಲಸ ಆಗಬೇಕು. ನಾವು ಪಾಕಿಸ್ಥಾನದೊಂದಿಗೆ ಯುದ್ದವನ್ನು ಎದುರಿಸಲು ಸಮರ್ಥರಿದ್ದೇವೆ. ಆದರೆ  ಪಾಕಿಸ್ಥಾನಕ್ಕೂ ನೆರವಾಗುವ ಬಾಹ್ಯ ಶಕ್ತಿಗಳಿವೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಇದುವರೆಗೂ ಪಾಕಿಸ್ಥಾನದೊಂದಿಗೆ ನಡೆದ ಯುದ್ಧಗಳಲ್ಲಿ ಜಯ, ಯಶಸ್ವಿ ಸರ್ಜಿಕಲ್‌ ದಾಳಿಯ ಕೀರ್ತಿ ನಮ್ಮ ಸೈನಿಕರಿಗೆ ಹೋಗಬೇಕೇ ವಿನಾ ಯಾವುದೇ ರಾಜಕಾರಣಿಗಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next