Advertisement

ಉಪವಾಸವಿದ್ದು ದೇವರದರ್ಶನ ಪಡೆದ ಪ್ರಧಾನಿ

08:19 AM Oct 30, 2017 | Team Udayavani |

ಬೆಂಗಳೂರು: “ದೇಶಕ್ಕಾಗಿ 18 ಗಂಟೆ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಬೆಳಗ್ಗೆ ಏನನ್ನೂ ತಿನ್ನದೆ, ಖಾಲಿ ಹೊಟ್ಟೆಯಲ್ಲಿದ್ದು ದರ್ಶನ ಪಡೆದಿದ್ದಾರೆ. ಆದರೆ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಕ್ಷೇತ್ರದಲ್ಲಿ ಧಾರ್ಮಿಕ ಭಾವನೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ.

Advertisement

ಇದು, ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಇರುವ ವ್ಯತ್ಯಾಸ…’ -ಇದು ಇತ್ತೀಚೆಗೆ ಮೀನೂಟ ಸೇವಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಪರೋಕ್ಷ ವಾಗ್ಧಾಳಿ ಮಾಡಿದ ಪರಿ. ಎಚ್‌ ಎಎಲ್‌ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರ ಸಾರ್ವಜನಿಕ ಸ್ವಾಗತ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ. ಇದರ ನಡುವೆ ದಸರಾ ಸಂದರ್ಭದಲ್ಲಿ 9 ದಿನ ಉಪವಾಸ ವ್ರತ ಕೈಗೊಳ್ಳುತ್ತಾರೆ. ದೇವರು, ಪುಣ್ಯಕ್ಷೇತ್ರಗಳ ಬಗ್ಗೆ ಅವರಿಗೆ ಎಷ್ಟು ಗೌರವ, ಶ್ರದ್ಧೆ ಇದೆ ಎಂಬುದು ಧರ್ಮಸ್ಥಳ ಭೇಟಿಯ ಸಂದರ್ಭದಲ್ಲಿ ಗೊತ್ತಾಗಿದೆ. ಬೆಳಗ್ಗಿನಿಂದ ಉಪವಾಸವಿದ್ದು, ದೆಹಲಿಯಿಂದ ಹೊರಟು ಬಂದು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪೂಜಾಕಾರ್ಯ ಮುಗಿಸಿದ ನಂತರವಷ್ಟೇ ಉಪಾಹಾರ ಸೇವಿಸಿದರು. ಇದು ಪ್ರಧಾನಿ ಹಾಗೂ ನಮ್ಮ ಮುಖ್ಯಮಂತ್ರಿಗಳಿಗೆ ಇರುವ ವ್ಯತ್ಯಾಸ ಎಂದು ವಿವರಿಸಿದರು.

ಜಾಲತಾಣದಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಮೀನು ಊಟ ಸೇವಿಸಿ ಧರ್ಮಸ್ಥಳಕ್ಕೆ ಪ್ರವೇಶ ಮಾಡಿದ್ದರು. ಇದಕ್ಕೆ ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ, ವಿರೋಧ ವ್ಯಕ್ತವಾಗಿತ್ತು. ಆದರೆ ಮುಖ್ಯಮಂತ್ರಿಯವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಭಾನುವಾರ ಪ್ರಧಾನಿ ಮೋದಿಯವರು ಉಪವಾಸ ಇದ್ದು, ಧರ್ಮಸ್ಥಳ ಶ್ರೀ ಮಂಜುನಾಥ ಸ್ಥಾಮಿಯ ದರ್ಶನ ಪಡೆದಿದ್ದಾರೆ ಎನ್ನುವುದನ್ನೇ ಕೇಂದ್ರವಾಗಿಟ್ಟುಕೊಂಡು ಬಿಜೆಪಿಯವರು ಸಿಎಂ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಯವರ ನಡೆಯ ಪರವಿರೋಧ ಚರ್ಚೆಗಳು ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next