Advertisement

ಮಾರ್ಚ್‌ನಿಂದ ಖರೀದಿ ಹಾಲಿನ ದರ 1 ರೂ. ಹೆಚ್ಚಳ

07:10 AM Feb 05, 2019 | Team Udayavani |

ಚನ್ನಪಟ್ಟಣ: ಮುಂದಿನ ತಿಂಗಳಿನಿಂದ ಲೀಟರ್‌ ಹಾಲಿನ 1 ರೂ. ಹೆಚ್ಚಿಗೆ ನೀಡಲಾಗುವುದು. ತಾಲೂಕಿನ ರೈತರು ಹೈನೋದ್ಯಮದಲ್ಲಿ ಹೆಚ್ಚು ತೊಡಗಿಸಿಕೊಂಡು, ಡೇರಿಗೆ ಗುಣಮಟ್ಟದ ಹಾಲು ಪೂರೈಸುವಂತೆ ಬಮೂಲ್‌ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಕನ್ನಿದೊಡ್ಡಿ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತಾನು ಮೊದಲು ನಿರ್ದೇಶಕನಾಗಿದ್ದಾಗ ತಾಲೂಕಿನಲ್ಲಿ 68 ಡೇರಿಗಳಿದ್ದವು.

ಈಗ 161 ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 85ಕ್ಕೂ ಹೆಚ್ಚು ಸಂಘಗಳು ಸ್ವಂತ ಕಟ್ಟಡ ಹೊಂದಿವೆ. ಹೈನೋದ್ಯಮ ರೈತರನ್ನು ಕೈಹಿಡಿದಿದ್ದು, ಬಮೂಲ್‌ನಿಂದ ತಾಲೂಕಿನ ರೈತರಿಗೆ ತಿಂಗಳಿಗೆ 15 ಕೋಟಿ ರೂ.ಗೂ ಹೆಚ್ಚು ಹಣ ಬಟವಾಡೆಯಾಗುತ್ತಿದೆ ಎಂದು ಹೇಳಿದರು.

ವಿಮೆ ಹಣ: ಸ್ವಂತ ಕಟ್ಟಡಕ್ಕಾಗಿ ಬಮೂಲ್‌ ಮತ್ತು ಇತರೆ ಮೂಲಗಳಿಂದ 8.5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ರಾಸುಗಳ ಮೇವಿಗಾಗಿ ಮತ್ತು ಸದಸ್ಯರ ಜೀವ ವಿಮೆಗಾಗಿ ಬಮೂಲ್‌ ಶೇ.75 ಭಾಗದ ಹಣವನ್ನು ಭರಿಸುತ್ತಿದೆ. ಮೃತಪಟ್ಟ ಸಂಘದ ಸದಸ್ಯರ ಕುಟುಂಬಕ್ಕೆ 2 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಬೇಡಿಕೆ ಹೆಚ್ಚಳ: ರಾಜ್ಯದಲ್ಲಿ 13 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಒಕ್ಕೂಟಗಳಿಗಿಂತ ಹೆಚ್ಚಾಗಿ ಬಮೂಲ್‌ 1 ಲೀಟರ್‌ ಹಾಲಿಗೆ 24 ರೂ. ಹಾಗೂ ಸರ್ಕಾರದ ಪ್ರೋತ್ಸಾಹ ಧನ ಸೇರಿ ಒಟ್ಟು 29 ರೂ. ಕೊಡಲಾಗುತ್ತಿದೆ. ಪಕ್ಕದ ಮಂಡ್ಯದಲ್ಲಿ 1 ಲೀಟರ್‌ ಹಾಲಿಗೆ 19 ರೂ. ಕೊಡುತ್ತಿದೆ. ಕನಕಪುರದ ಬಳಿಯ ಶಿವನಹಳ್ಳಿಯಲ್ಲಿ ಮೆಗಾ ಡೇರಿ ಪ್ರಾರಂಭಗೊಂಡು ಹಾಲಿನ ಪೌಡರ್‌, ಇತರೆ ಉತ್ಪನ್ನ ತಯಾರಿ ಮಾಡುತ್ತಿರುವುದರಿಂದ ನಮ್ಮ ಹಾಲಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಹೇಳಿದರು.

Advertisement

ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಶಿಬಿರದ ಉಪವ್ಯವಸ್ಥಾಪಕ ಡಾ.ಕೆ.ಸಿ.ಶ್ರೀಧರ್‌ ಮಾತನಾಡಿ, ರಾಸುಗಳಿಗೆ ಆರೋಗ್ಯ ಸಮಸ್ಯೆ ಎದುರಾದಾಗಿ ಚಿಕಿತ್ಸೆ ಕೊಡಿಸಿದಾಗ ಒಂದೆರಡು ದಿನ ಡೇರಿಗೆ ಹಾಲು ಹಾಕಬೇಡಿ. ಮನೆಯಲ್ಲೇ ಗಿಡಮೂಲಿಕೆ ಔಷಧಿ ನೀಡಿ ಗುಣಪಡಿಸಿದರೆ ಉತ್ತಮ. ಬಮೂಲ್‌ನಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡಿ ಆರ್ಥಿಕವಾಗಿ ಸಬಲರಾಗಿ ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು ಎಂದರು.

ಸನ್ಮಾನ: ಬಮೂಲ್‌ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ಉಪ ವ್ಯವಸ್ಥಾಪಕ ಡಾ.ಕೆ.ಸಿ.ಶ್ರೀಧರ್‌ ಅವರನ್ನು ಸನ್ಮಾನಿಸಲಾಯಿತು. ಕನ್ನಿದೊಡ್ಡಿ ಡೇರಿ ಅಧ್ಯಕ್ಷ ವಿಷಕಂಠಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಪ್ರಸನ್ನಕುಮಾರ್‌, ವಿಸ್ತರಣಾಧಿಕಾರಿ ರಾಜು, ಪರ್ಹಾ ಜಬೀನ್‌, ಕನ್ನಿದೊಡ್ಡಿ ಎಂಪಿಸಿಎಸ್‌ ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಚಿಕ್ಕತಮ್ಮಯ್ಯ, ನಂಜಯ್ಯ, ಕಾಡಯ್ಯ, ವಿಷಕಂಠಯ್ಯ, ಗುಣಮ್ಮ, ಜಯಮ್ಮ, ಪುಟ್ಟಸ್ವಾಮಿ ಉಪಸ್ಥಿತರಿದ್ದರು. ಹೊಂಗನೂರು ಸಂಘದ ಕಾರ್ಯದರ್ಶಿ ಪುಟ್ಟರಾಜು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next