Advertisement

ಬಿಳೇ ಹುಲ್ಲಿಗೆ ಬಂಗಾರದ ಬೆಲೆ

05:37 PM May 25, 2022 | Team Udayavani |

ಶಿರಸಿ: ಅಕ್ಕ ಪಕ್ಕದ ಜಿಲ್ಲೆಯಲ್ಲಿ ಬೆಳೆಯುವ ಪಶು ಆಹಾರವನ್ನೇ ನಂಬಿಕೊಂಡು ಮಲೆನಾಡಿನಲ್ಲಿ ಪಶು ಸಂಗೋಪನೆ ನಡೆಯುತ್ತಿದೆ. ಶಿರಸಿ ಸೀಮೆಗೆ ಕಲಘಟಗಿ, ಹುಬ್ಬಳ್ಳಿ, ತಡಸ, ಸೊರಬ, ತಾಳಗುಪ್ಪ ಭಾಗದಿಂದ ಬಿಳೆ ಹುಲ್ಲು ತಂದು ಪಶು ಸಂಗೋಪನೆ ಮಾಡುತ್ತಿದ್ದರು. ಆದರೆ, ಈ ಬಾರಿ ಬಿಳೆ ಹುಲ್ಲಿಗೇ ಸಂಕಷ್ಟ ಬಂದಿದ್ದು, ಹಣ ನೀಡಿದರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

Advertisement

ಶಿರಸಿ ಸೀಮೆಯ ಪಶ್ಚಿಮ ಭಾಗದಲ್ಲಿ ಭತ್ತದ ಕ್ಷೇತ್ರಗಳು ಕಡಿಮೆ. ಪೂರ್ವ ಭಾಗದಲ್ಲಿ ಭತ್ತ, ಜೋಳದ ಕ್ಷೇತ್ರಗಳು ಇವೆ. ಸಿದ್ದಾಪುಪುರದಲ್ಲೂ ಸಾಗರ, ಸೊರಬದ ಭಾಗದ ಕಡೆಗೆ ಭತ್ತದ ಗದ್ದೆಗಳು ಕಂಡು ಬಂದರೂ ಉಳಿದೆಡೆ ಇಲ್ಲ. ಈ ಕಾರಣದಿಂದ ರೈತರು ಹೈನುಗಾರರೂ ಆಗಿದ್ದರೂ ಒಂದು ಆಕಳಿದ್ದರೆ ಕನಿಷ್ಠ 400 ಸುಗಡು (ಹುಲ್ಲಿನ ಕಟ್ಟು) ಖರೀದಿಸುವುದು ಸಾಮಾನ್ಯವಾಗಿತ್ತು.

ದುಬಾರಿ ಬೆಲೆ: ಕಳೆದ ವರ್ಷ ಒಂದೂವರೆ ಎರಡು ಕೇಜಿ ತೂಕದ ಹುಲ್ಲಿಗೆ 20ರಿಂದ 25 ರೂ. ತನಕ ಮಾರಾಟ ಆಗಿದ್ದರೆ ಈ ಬಾರಿ ಅದೇ ಮಾದರಿ ಹುಲ್ಲಿನ ಕಟ್ಟು 35ರಿಂದ 40 ರೂ. ತನಕ ಆಗಿದೆ. ಹುಲ್ಲೇ ರೈತರ ಬಳಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಗುಣಮಟ್ಟದ, ಮಳೆ ತಾಗದ ಹುಲ್ಲು ಬೇಕೆಂದರೆ ಬಯಲು ಸೀಮೆಯ ಕಘಟಗಿ, ಪಾಳಾ, ತಡಸ, ಬೆನ್ನೂರು ಸೊರಬಗಳ ತನಕ ಹೋದರೂ ಸಿಗುತ್ತಿಲ್ಲ. ಭತ್ತದ ಕೊಯ್ಲಾದ ಬಳಿಕ ಅಥವಾ ಕೋಯ್ಲಿನ ವೇಳೆಯಲ್ಲೇ ಮಳೆ ಬಂದಿದ್ದು ಸಮಸ್ಯೆಗೆ ಮೂಲ ಕಾರಣವಾಗಿದೆ.

ಅಕಾಲಿಕ ಮಳೆ ಇದ್ದ ಬಿಳೆ ಹುಲ್ಲು, ಬೈ ಹುಲ್ಲಿಗೆ ಸಮಸ್ಯೆ ಆದರೂ ಭತ್ತದ ಕೃಷಿಕರು ಭತ್ತದ ಕೃಷಿ ನಷ್ಟ ಎಂದೋ ಅಥವಾ ಅಲ್ಲಿ ಅಡಕೆ ಬೇಸಾಯ ಆರಂಭ ಮಾಡಿಧ್ದೋ, ಅನಾನಸ್‌ ಬೆಳೆಸಿಧ್ದೋ ಪಶು ಸಂಗೋಪನೆಗೆ ತೊಡಕಾಗಿದೆ. ಭತ್ತ ಆಗಿದ್ದರೆ ಭತ್ತದ ಕಾಳು ಮನುಷ್ಯನಿಗೂ, ಹುಲ್ಲು ಜಾನುವಾರಿಗೂ ಆಗುತ್ತಿತ್ತು. ಜೋಳದ ದಂಟು ಒಂದು ಲಾರಿಗೆ 15 ಸಾವಿರದಿಂದ 20 ಸಾವಿರಕ್ಕೆ ಏರಿದೆ. ಇದರ ಪರಿಣಾಮ ಎಂಬಂತೆ ಈ ಬಾರಿ ಹಣ ಕೊಟ್ಟರೂ ಹುಲ್ಲು ಸಿಗುತ್ತಿಲ್ಲ.

Advertisement

ಏರಿದ ದರ: ಈ ಮಧ್ಯೆ ಧಾರವಾಡ ಹಾಲು ಒಕ್ಕೂಟದ ಮೂಲಕ ವಿತರಿಸಲಾಗುವ ಕೆಎಂಎಫ್‌ ಪಶು ಆಹಾರ ಹೊರತುಪಡಿಸಿದರೆ ಉಳಿದೆಲ್ಲ ಪಶು ಆಹಾರಗಳ ಬೆಲೆ ಏರಿದೆ. ಹಾಲಿನ ದರಕ್ಕೂ ಪಶು ಸಂಗೋಪನಾ ವೆಚ್ಚಕ್ಕೂ ಹೋಲಿಸಿದರೆ ಈಗ ಪಶು ಸಂಗೋಪನೆ ದುಬಾರಿ ಆಗುತ್ತಿದೆ. ರೈತರಿಗೆ ಬಿಳೆ ಹುಲ್ಲಿನ ಕೊರತೆ ನೀಗಿಸಿಲು ಬೆಟ್ಟದಲ್ಲಿ, ಖಾಲಿ ಜಾಗದಲ್ಲಿ ಹಸಿ ಹುಲ್ಲು ಬೆಳೆಸುವುದೇ ಪರಿಹಾರ ಎನ್ನುತ್ತಾರೆ. ಆದರೆ, ಊರಲ್ಲಿ ಇರುವ ಕೃಷಿಕರೇ ಕಡಿಮೆ. ಅದರಲ್ಲೂ ವಯಸ್ಸಾದವರೇ ಹೆಚ್ಚು. ಇಂಥ ಸಂಕೀರ್ಣ ಸ್ಥಿತಿಯಲ್ಲಿ ಪಶುಸಂಗೋಪನೆ ಬಿಡಬಾರದು, ಧಾರ್ಮಿಕ ನಂಬಿಕೆ ಎಂದು ಮಾಡಿಕೊಂಡು ಬಂದವರು ಮುನ್ನಡೆಸುತ್ತಿದ್ದಾರೆ. ವೈಜ್ಞಾನಿಕವಾಗಿ ಮಾಡಿದರೆ ಲಾಭವಾದರೂ ಒಂದೆರಡು ಆಕಳು ಕಟ್ಟಿಕೊಂಡವರಿಗೆ ಅಲ್ಲ ಎಂಬುದೂ ಬೇರೆ ಹೇಳಬೇಕಿಲ್ಲ. ಜಾನುವಾರಿನ ಜೊತೆ ಇರುವ ಮಾನಸಿಕ ಸಂಬಂಧ ಪಶುಸಂಗೋಪನೆ ಉಳಿಸಿಕೊಂಡಿದೆ ಎಂಬುದೂ ಸುಳ್ಳಲ್ಲ.

ದಾರಿ ಕಾಣದಾಗಿದೆ: ಪಶು ಸಂಗೋಪನಾದಾರರಿಗೆ ದುಬಾರಿ ಬೆಲೆ ಕೊಟ್ಟು ಪಶು ಆಹಾರ ಖರೀದಿಸಲು ಮುಂದಾದರೂ ಪಶು ಆಹಾರಗಳಿಲ್ಲ. ಬಿಳೆಹುಲ್ಲು, ಜೋಳದ ದಂಟುಗಳು, ತೆನೆಗಳೂ ಸಿಗುತ್ತಿಲ್ಲ. ಗುಣಮಟ್ಟದ್ದು ಬೇಕು ಎಂದರೆ ಓಡಾಟ, ದುಬಾರಿ ಬೆಲೆ ತೆರಬೇಕಾಗಿದೆ.

ನಮ್ಮ ಮನೆಗೇ 3 ಲಾರಿ ಬಿಳೆಹುಲ್ಲು ಬೇಕಿತ್ತು. ಆದರೆ, ಸಿಕ್ಕಿದ್ದು ಒಂದೇ ಲಾರಿ ಎನ್ನುವ ವಿಕಾಸ ಹೆಗಡೆಯಂತಹ ಯುವ ಕೃಷಿಕರು ಕೂಡ ಈ ಕೊರತೆಗೆ ತಲೆಬಿಸಿ ಮಾಡಿಕೊಂಡಿದ್ದಾರೆ.

ಮೊದಲು ಈ ಸೀಸನ್‌ನಲ್ಲಿ ತಿಂಗಳಿಗೆ 200-25 ಟ್ರಿಪ್‌ ಹುಲ್ಲು ತರುತ್ತಿದ್ದೆ. ಆದರೆ, ಈವರೆಗೆ ಕೊಟ್ಟಿದ್ದು ಕೇವಲ 4 ಟ್ರಕ್‌ ಹುಲ್ಲು. ನಮಗೂ ವ್ಯಾಪಾರವಿಲ್ಲ, ಟ್ರಕ್ಕಿಗೂ ಕೆಲಸವಿಲ್ಲ. ಹಣಕೊಟ್ಟರೂ ಹುಲ್ಲಿಲ್ಲ. ಇಷ್ಟು ದುಬಾರಿಗೆ ಈ ಹುಲ್ಲು ನೀಡಿದ್ದು ಇದೇ ಮೊದಲು. –ರಮೇಶ, ಹುಲ್ಲಿನ ವ್ಯಾಪಾರಿ.

35 ರೂ. ಆದರೂ ಹುಲ್ಲಿನ ಕಟ್ಟು ದೊಡ್ಡದಲ್ಲ, ಮಳೆ ತಾಗಿ ಕರ್ರಗಾಗಿದೆ. ಕಹಿ ಆದರೆ ದನವೂ ತಿನ್ನೋದಿಲ್ಲ. ಆದರೂ ಖರೀದಿ ಅನಿವಾರ್ಯ. –ಸೀತಾರಾಮ ಹೆಗಡೆ ಕಲ್ಲಕೈ, ಹೈನುಗಾರ

-ರಾಘವೇಂದ್ರ ಬೆಟ್ಟಕೊಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next