Advertisement
ಕುಡಾ ಸ್ವಾಧೀನಪಡಿಸಿಕೊಂಡ ಕೋಟನೂರ ಡಿ ಗ್ರಾಮದ 150 ಎಕರೆ ಭೂಮಿಗೆ ಚದರ ಅಡಿ ಭೂಮಿಗೆ 195 ರೂ. ಪರಿಹಾರ ನೀಡುವಂತೆ ಇಲ್ಲಿನ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಮಹತ್ವದ ಆದೇಶ ನೀಡಿದೆ.
Related Articles
Advertisement
ತಾವು ನೀಡಿದ ಭೂಮಿಗೆ ತಕ್ಕ ಪರಿಹಾರ ಬೇಕು ಎಂಬುದಾಗಿ ನ್ಯಾಯಾಲಯದಲ್ಲಿ ಕಳೆದ 14 ವರ್ಷಗಳಿಂದ ರೈತರು ಮಾಡುತ್ತಿರುವ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ. ಆದರೆ ಕುಡಾಗೆ ಭಾರಿ ಪೆಟ್ಟು ಬಿದ್ದಿದೆ. ಕುಸನೂರದ ಕುಡಾ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಒಪ್ಪಂದದ ಮೇರೆಗೆ ಎಕರೆಗೆ 48 ಲಕ್ಷ ರೂ ಪರಿಹಾರ ನೀಡಿದ್ದರೆ ಹಾಗರಗಾ ಬಡಾವಣೆಯನ್ನು 50:50 ಆಧಾರದ ಮೇಲೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕುಡಾಗೆ ಅತ್ಯಂತ ಪ್ರತಿಷ್ಠೆ ಹಾಗೂ ದುಬಾರಿಯಾಗಿದ್ದೇ ಈ ಕೋಟನೂರ ಬಡಾವಣೆ. ಕುಡಾದ ಪರವಾಗಿ ಎಎಜಿ ಆರ್. ಸುಬ್ರಹ್ಮಣ್ಯ, ಅಮೀತ್ ಕುಮಾರ ದೇಶಪಾಂಡೆ, ಶಿವಕುಮಾರ ಟೆಂಗಳಿ ವಾದಿಸಿದರೆ ರೈತರ ಪರವಾಗಿ ಶಿವಾನಂದ ಪಾಟೀಲ ವಾದಿಸಿದ್ದರು.
ಇದನ್ನೂ ಓದಿ:ಚಾರ್ಮಾಡಿ ಘಾಟ್: ಬಸ್ ನಿರ್ವಾಹಕ ಹೃದಯಾಘಾತದಿಂದ ಸಾವು
ಮತ್ತೆ ಹಣ ತುಂಬಿ ಎಂದರೆ ಹೇಗೆ?
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ 150 ಎಕರೆ ಭೂಮಿಯಲ್ಲಿ ಅಂದಾಜು 200 ನಿವೇಶನಗಳ ಪೈಕಿ ನಿವೇಶನ ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ. ನಿವೇಶನ ಪಡೆದವರು ಕುಡಾಗೆ ದುಡ್ಡು ತುಂಬಿದ್ದಾರೆ. ಆದರೆ ಈಗ ತುಂಬಲಾಗಿರುವಷ್ಟೇ, ಇಲ್ಲವೇ ಅದಕ್ಕಿಂತ ಹೆಚ್ಚಿನ ಮೊತ್ತ ತುಂಬು ಎಂದರೆ ಯಾರಿಂದಲೂ ಸಾಧ್ಯವಿಲ್ಲ. ಹೈಕೋರ್ಟ್ ಆದೇಶದಿಂದ ನಿವೇಶನದಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಷ್ಟಪಟ್ಟು ಈಗಾಗಲೇ ಹಣ ತುಂಬಲಾಗಿದೆ. ಮನೆ ಕಟ್ಟಬೇಕು ಎಂದಿದ್ದೆವು. ಆದರೆ ನಿವೇಶನಕ್ಕೆ ಮತ್ತಷ್ಟು ಹಣ ತುಂಬಿ ಎಂದರೆ ಎಲ್ಲಿಗೆ ಹೋಗಬೇಕು. ತಮ್ಮ ಮೇಲೆ ಮತ್ತಷ್ಟು ಭಾರ ಬಿದ್ದರೆ ಸಹಿಸಿಕೊಳ್ಳಲು ಆಗುವುದಿಲ್ಲ. ರೈಲ್ವೆ ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವ ಭೂಮಿಗೆ ಸರ್ಕಾರವೇ ಪರಿಹಾರ ನೀಡುತ್ತದೆ. ಆದರೆ ಸಂಸ್ಥೆಯೊಂದು ಇಷ್ಟು ಪರಿಹಾರ ನೀಡುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿ ಕುಡಾಗೆ ಇನ್ನೂ ಬಂದಿಲ್ಲ. ಆದರೆ ಆದೇಶ ಗೊತ್ತಾಗಿದೆ. ಮೇಲ್ಮನವಿ ಹೋಗುವುದರ ಕುರಿತು ಹಿರಿಯ ನ್ಯಾಯವಾದಿಗಳೊಂದಿಗೆ ಚರ್ಚಿಸಲಾಗುವುದು. ಒಟ್ಟಾರೆ ವ್ಯಾಪಕವಾಗಿ ಕಾನೂನಾತ್ಮಕ ಸಲಹೆ ಪಡೆದು ದೃಢ ಹೆಜ್ಜೆ ಇಡಲಾಗುವುದು. ನ್ಯಾಯಾಲಯ ಆದೇಶದಿಂದ ಕುಡಾ ಹಾಗೂ ನಿವೇಶನದಾರರ ಮೇಲೆ ಹೆಚ್ಚಿನ ಭಾರ ಬೀಳುತ್ತದೆ. -ದಯಾಘನ್ ಧಾರವಾಡಕರ್, ಅಧ್ಯಕ್ಷ, ಕುಡಾ
ಭೂಮಿ ನೀಡಿದ ತಮಗೆ ಸೂಕ್ತ ಪರಿಹಾರ ನೀಡುವಂತೆ 14 ವರ್ಷದಿಂದ ನಡೆಸಲಾಗುತ್ತಿರುವ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ. ಕಾನೂನು ಹೋರಾಟದಲ್ಲಿ ಜಯ ದೊರಕಿದೆ. -ಶಿವರಾಜ ಕೋಟನೂರ ಭೂಮಿ ನೀಡಿದ ರೈತ
ಚದರ ಅಡಿಗೆ 196 ರೂ. ಪರಿಹಾರ ನಿಗದಿ ಮಾಡಿ ಹೊರಡಿಸಲಾದ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಜತೆಗೆ ರಿಮ್ಯಾಂಡ್ ಬ್ಯಾಕ್ ಹೋಗಿ ವಾಸ್ತವ ಸ್ಥಿತಿ ಮನವರಿಕೆ ಮಾಡಲಾಗುವುದು. ಆದೇಶದ ಅನ್ವಯ ಪರಿಹಾರ ನೀಡುವುದು ಕಷ್ಟಸಾಧ್ಯ. ಮುಖ್ಯವಾಗಿ ಭೂಮಿ ನೀಡಿದ ರೈತರೊಂದಿಗೂ ಸಮಾಲೋಚನೆ ನಡೆಸಲಾಗುವುದು. 50:50 ಸೂತ್ರ ಎಲ್ಲದಕ್ಕೂ ಪರಿಹಾರವಾಗಿದೆ. -ಎಂ. ರಾಚಪ್ಪ ಆಯುಕ್ತರು,ಕುಡಾ
-ಹಣಮಂತರಾವ ಭೈರಾಮಡಗಿ