ಕುಂದಾಪುರ: ಈ ಬಾರಿಯ ಮುಂಗಾರು ತಡವಾಗಿ ಆರಂಭವಾಗಿರುವುದರಿಂದ ನಾಡದೋಣಿ ಮೀನುಗಾರಿಕೆ ಮೇಲೆಯೂ ಇದರ ಬಿಸಿ ತಟ್ಟಿದ್ದು, ಎಲ್ಲ ತರಹದ ಮೀನಿನ ಬೆಲೆ ಗಗನಕ್ಕೇರಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಬೂತಾಯಿ (ಬೈಗೆ) ಮೀನಿಗೂ ಈಗ ಭಾರೀ ಹಣ ನೀಡುವಂತಾಗಿದೆ.
ಯಾಂತ್ರೀಕೃತ ಮೀನುಗಾರಿಕಾ ಋತು ಮೇ 31ಕ್ಕೆ ಅಂತ್ಯವಾದ ಬಳಿಕ ಗಂಗೊಳ್ಳಿ, ಮರವಂತೆ, ಕೊಡೇರಿ, ಶಿರೂರು ಸಹಿತ ಎಲ್ಲ ಬಂದರುಗಳಲ್ಲಿ ಯಾವುದೇ ಮೀನುಗಾರಿಕೆ ನಡೆಯುತ್ತಿಲ್ಲ. ಮಳೆಗಾಲದಲ್ಲಿ ನಡೆಯುವ ನಾಡದೋಣಿ ಮೀನುಗಾರಿಕೆ ಕೂಡ ಇನ್ನೂ ಆರಂಭಗೊಂಡಿಲ್ಲ. ಇದರಿಂದ ಮೀನಿನ ದರ ನಿರೀಕ್ಷೆಗೂ ಮೀರಿ ಹೆಚ್ಚಳವಾದಂತಾಗಿದೆ.
ಕುಂದಾಪುರ, ಗಂಗೊಳ್ಳಿ ಭಾಗದಲ್ಲಿ ಒಂದು ಕೆ.ಜಿ. ಬೂತಾಯಿಗೆ 200 ರೂ.ಗಿಂತಲೂ ಹೆಚ್ಚಿದೆ. 12 ಬೂತಾಯಿಗೆ 100 ರೂ.ಗೆ ಕೆಲವೆಡೆಗಳಲ್ಲಿ ಮಾರಾಟವಾಗುತ್ತಿದೆ. ಇದನ್ನು ದೂರದ ಚೆನ್ನೈ ಯಿಂದ ಇಲ್ಲಿಗೆ ಪೂರೈಕೆ ಮಾಡಲಾಗುತ್ತಿದೆ. ಇನ್ನು 4 ಬಂಗುಡೆಗೆ 100 ರೂ. ಇದ್ದರೆ, ಕೊಡ್ಡಾಯಿ (ಕೊಡ್ವಾಯಿ)ಗೆ 1 ಕೆ.ಜಿ.ಗೆ 130ರಿಂದ 170 ರೂ. ವರೆಗೆ ಮಾರಾಟವಾಗುತ್ತಿದೆ. ಅಂಜಲ್, ಸಹಿತ ಇನ್ನಿತರ ಮೀನುಗಳು ಸಿಗುತ್ತಲೇ ಇಲ್ಲ.
ಮೀನಿನ ಖಾದ್ಯವೂ ದುಬಾರಿ
ಮೀನಿನ ಬೆಲೆ ಹೆಚ್ಚಳವಾದುದರಿಂದ ಸರ್ವೆ ಸಾಮಾನ್ಯ ವಾಗಿ ಹೊಟೇಲ್ಗಳಲ್ಲಿ ತಯಾರಿಸುವ ಮೀನಿನ ಖಾದ್ಯಗಳು ಕೂಡ ದುಬಾರಿಯಾಗಿದೆ. ಮೀನಿನ ಖಾದ್ಯಗಳ ದರ ಏಕಾಏಕಿ ಏರಿಕೆಯಾಗಿದ್ದು, ಮತ್ಸ್ಯಪ್ರಿಯರಿಗೆ ಸ್ವಲ್ಪ ಮಟ್ಟಿಗೆ ಕಹಿಯನ್ನುಂಟು ಮಾಡಿದೆ.
ಆರಂಭವಾಗದ ನಾಡದೋಣಿ ಮೀನುಗಾರಿಕೆ
ಮುಂಗಾರು ಮಳೆ ಈಗಿನ್ನು ನಿಧಾನಕ್ಕೆ ಬಿರುಸು ಪಡೆದುಕೊಳ್ಳುತ್ತಿದ್ದು, ಸಮುದ್ರದಲ್ಲಿ ತೂಫಾನ್ ಕಾಣಿಸಿ ಕೊಂಡು, ಅದು ಶಾಂತವಾದ ಬಳಿಕವಷ್ಟೇ ನಾಡದೋಣಿ ಮೀನುಗಾರರು ಕಡಲಿಗಿಳಿಯುತ್ತಾರೆ. ಆದರೆ ಜುಲೈ ಮೊದಲ ವಾರದಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.