ಬೆಂಗಳೂರು:ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅಡುಗೆ ಆನಿಲ ಸಿಲಿಂಡರ್ ಬೆಲೆ ಕನಿಷ್ಟ 150 ರೂ. ಇಳಿಕೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ಜನವಿರೋಧಿ ನೀತಿ-ನಿರ್ಧಾರಗಳ ವಿರುದ್ದ ”ಒಂದು ಪ್ರಶ್ನೆ’ ಸರಣಿ ಮೂಲಕ ಜನಾಭಿಪ್ರಾಯ ಮೂಡಿಸುತ್ತಿದ್ದು ಜನರ ಅಭಿಪ್ರಾಯ ಅಡುಗೆ ಅನಿಲ ಇಳಿಸಬೇಕು ಎಂಬುದಾಗಿದೆ ಎಂದು ಹೇಳಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಗೃಹಿಣಿಯರಿಗೆ ಅಡುಗೆ ಅನಿಲ ಬೆಲೆ ಏರಿಕೆ ಬಿಸಿ ತಾಕಿದೆ. ಗೃಹ ಬಳಕೆಯ ಅಡುಗೆ ಅನಿಲ 900 ರೂ. ಗಡಿ ತಲುಪಿದ್ದು, ಬೀದರ್ ಜಿಲ್ಲೆಯಲ್ಲಿ ಶನಿವಾರ 956 ರೂ. ಇದೆ. ಸದ್ಯದಲ್ಲೇ ಒಂದು ಸಾವಿರ ರೂ. ತಲುಪಬಹುದು. ತಕ್ಷಣ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಲಿ : ರಾಷ್ಟ್ರಪತಿ
ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆ ಸಾಧ್ಯವಾಗದೆ ಜನ ಆತ್ಮಹತ್ಯೆ ದಾರಿ ಉಳಿಯುತ್ತಿರುವ ಈ ಸಂಕಟದ ಕಾಲದಲ್ಲಿ ಸರ್ಕಾರ ನಿರಂತರವಾಗಿ ಅಡುಗೆ ಆನಿಲ ಬೆಲೆ ಏರಿಕೆ ಮಾಡುತ್ತಿರುವುದು ಜನವಿರೋಧಿ ಮಾತ್ರವಲ್ಲ, ಅಮಾನವೀಯ ಕೂಡ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಫೇಸ್ ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.