Advertisement

ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸೋದೇ ಪ್ರತಿಷ್ಠೆ

03:45 PM Jul 07, 2019 | Suhan S |

ಬ್ಯಾಡಗಿ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿದ್ದರೂ ಮಕ್ಕಳನ್ನು ಖಾಸಗಿ ಶಾಲೆಗೆ ಸೇರುಸುವುದನ್ನೇ ಪ್ರತಿಷ್ಠೆ ಮಾಡಿಕೊಂಡ ಪಾಲಕರು, ಸರ್ಕಾರದ ಉಚಿತ ಸೌಲಭ್ಯಗಳ ಹೊರತಾಗಿಯೂ ಇತ್ತಕಡೆ ಮುಖ ಮಾಡುತ್ತಿಲ್ಲ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್‌.ಬಾರ್ಕಿ ಕರೆ ನೀಡಿದರು.

Advertisement

ಶಿಡೇನೂರಿನ ಎಸ್‌ಜಿಬಿಡಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಸರ್‌ ಸಿ.ವಿ.ರಾಮನ್‌ ವಿಜ್ಞಾನ ವೇದಿಕೆ ತಾಲೂಕು ಘಟಕಗಳ ಆಶ್ರಯದಲ್ಲಿ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕರಿಗಾಗಿ ಏರ್ಪಡಿಸಿದ್ದ ‘ಗುರುಪ್ರೇರಣಾ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿನ ಮೋಹದಿಂದಾಗಿ ವ್ಯವಸ್ಥೆಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು, ಇನ್ನಾದರೂ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಕುರಿತು ಕಲಿಕಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಕಳೆದೊಂದು ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಖಾಸಗಿ ಶಾಲೆಗಳ ಬಣ್ಣಬಣ್ಣದ ಕಟ್ಟಡಗಳಿಂದ ಆಕರ್ಷಣೆಗೊಳಗಾದ ಪಾಲಕರು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಿದ್ದಾರೆ. ಇನ್ನಾದರೂ ನಮ್ಮ ಸರ್ಕಾರಿ ಶಾಲೆಗಳ ಶಿಕ್ಷಕರು ಶಾಲೆಯ ವಾತಾವರಣವನ್ನು ಉತ್ತಮವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದರು.

ಶಿಕ್ಷಕರಲ್ಲೇ ನೂರೆಂಟು ಸಂಘಟನೆಗಳನ್ನು ಹುಟ್ಟುಹಾಕಿಕೊಳ್ಳಲಾಗಿದ್ದು, ಶಿಕ್ಷಕರ ನಡುವೆ ಗುಂಪುಗಾರಿಕೆ ಆರಂಭವಾಗಲು ಕಾರಣವಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದ್ದು, ಭೋದನೆಗೆ ನಡೆಯಬೇಕಾಗಿದ್ದ ಪೈಪೋಟಿ ಬದಲಾಗಿ ಅಧಿಕಾರಕ್ಕಾಗಿ ನಡೆಯುತ್ತಿದೆ. ಗುಣಾತ್ಮಕ ಶಿಕ್ಷಣವೆಂಬುದು ನಮ್ಮಲ್ಲೇ ದೊರೆಯುತ್ತಿದೆ. ಅದಾಗ್ಯೂ ಬಹುತೇಕ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಖಾಸಗಿ ಶಾಲೆ ಆಡಳಿತ ಮಂಡಳಿಗಳು ಆಶ್ಚರ್ಯ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಸರ್ಕಾರಿ ಶಾಲೆ ಮಕ್ಕಳ ಫಲಿತಾಂಶ ಬರಬೇಕು. ಒಂದು ವೇಳೆ ನಿರೀಕ್ಷಿತ ಫಲಿತಾಂಶ ಬರದೇ ಹೋದಲ್ಲಿ ಮುಖ್ಯಶಿಕ್ಷಕರು ಮತ್ತು ಅಲ್ಲಿನ ಸಹಶಿಕ್ಷಕರು ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಇದನ್ನು ಬಿಟ್ಟು ಸಂಬಂಧವಿರದ ಕಾರಣಗಳನ್ನು ಮುಂದೊಡ್ಡಿ ತಮ್ಮ ಮೇಲಿನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವಾಗಬಾರದು ಎಂದರು.

Advertisement

ಎಸ್‌ಜಿಬಿಡಿ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಎಸ್‌.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸರ್‌ ಸಿ.ವಿ.ರಾಮನ್‌ ವಿಜ್ಞಾನ ವೇದಿಕೆಯ ಅಧ್ಯಕ್ಷ ಜೆ.ಎಸ್‌.ಹೇರೂರ, ರಮೇಶ ಮಳವಳ್ಳಿ, ರವಿ ಆನ್ವೇರಿ, ಸಿ.ಶಿವಕುಮಾರ, ಜಿ.ಬಿ.ಬೂದಿಹಾಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next