ಬೀದರ: ಶಕ್ತಿ ದೇವತೆ ಆರಾಧನೆಗಾಗಿ ಆಚರಿಸಲ್ಪಡುವ “ನವರಾತ್ರಿ’ ಉತ್ಸವಕ್ಕೆ ಬೀದರ ನಗರ ಸೇರಿದಂತೆ ಜಿಲ್ಲೆಯ ದೇವಿ ಮಂದಿರಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕೋವಿಡ್ ಹಿನ್ನೆಲೆ ಕಳೆದ ವರ್ಷ ನವರಾತ್ರಿಯನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ, ಈ ಬಾರಿ ಸೋಂಕು ಇಳಿಮುಖ ಕಾರಣ ಮಾರ್ಗಸೂಚಿಯಂತೆ ಅರ್ಥಪೂರ್ಣ ಉತ್ಸವಕ್ಕೆ ಸಕಲ ವ್ಯವಸ್ಥೆಗಳು ಶುರುವಾಗಿವೆ. ನವರಾತ್ರಿ ಹಬ್ಬ ಧರಿನಾಡು ಬೀದರನ ಮುಖ್ಯ ಹಬ್ಬವಾಗಿದೆ.
ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಪೂಜೆ ನಡೆಯುವಂತೆ ಗಡಿ ಜಿಲ್ಲೆಯಲ್ಲೂ ದಸರಾವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅಧಿದೇವತೆಗಳ ದೇಗುಲಗಳಲ್ಲಿ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವೈಭವೋಪೇತವಾಗಿ ಸಿಂಗರಿಸಿ ಒಂಭತ್ತು ದಿನಗಳ ಕಾಲ ಭಕ್ತಿಯಿಂದ ಪೂಜಿಸಿ ಆರಾಧಿಸಲಾಗುತ್ತದೆ. ಅ.6ರಿಂದ ಪ್ರಾರಂಭಗೊಳ್ಳುವ ನವರಾತ್ರಿಯ ಉತ್ಸವದ ಆಚರಣೆಗಳು ಅ.14ರವರೆಗೂ ನಡೆಯಲಿದೆ.
ಎಲ್ಲೆಡೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಉತ್ಸವಕ್ಕಾಗಿ ದೇಗುಲಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ, ಹೂವುಗಳಿಂದ ಸಿಂಗರಿಸುವುದು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಆಡಳಿತ ಮಂಡಳಿಗಳಿಂದ ಮಾಡಿಕೊಳ್ಳಲಾಗುತ್ತಿದೆ. ನಗರ ಸಮೀಪದ ಸುಪ್ರಸಿದ್ಧ ಬೆನಕನಳ್ಳಿ ಗ್ರಾಮದಲ್ಲಿರುವ ಮಾತಾ ಮಹಿಷಾಸುರ ಮರ್ದಿನಿ (ಭವಾನಿ) ಮಂದಿರದಲ್ಲಿ ನವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಘಟ ಸ್ಥಾಪನೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಸಿಂಹಾಸನ ಪೂಜೆ, ಮಹಾ ಪೂಜೆ, ಆಯುಧ ಪೂಜೆ, ಅಲಂಕಾರ ಪೂಜೆ, ಪಕ್ಷ ಪೂಜೆ, ಕಳಶ ಪೂಜೆ ಮತ್ತು ಮಹಾಮಂಗಳಾರತಿ ಸೇರಿದ ವಿವಿಧ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಜಿಲ್ಲೆ ಮಾತ್ರವಲ್ಲದೇ ನೆರೆ ಮಹಾರಾಷ್ಟ್ರ ಮತ್ತು ತೆಲಂಗಾಣದ ಭಕ್ತರು ಭೇಟಿ ನೀಡುತ್ತಾರೆ. ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮ ಬಳಿಯ ಜೈ ಅಂಬಾ ಭವಾನಿ (ಹಿಂಗುಲಾಂಬಿಕಾ) ಮಂದಿರದಲ್ಲಿ ವಿಜಯದಶಮಿ ಸಂಭ್ರಮ ಹೆಚ್ಚಿರುತ್ತದೆ. ಇತಿಹಾಸ ಪ್ರಸಿದ್ಧ ಈ ದೇಗುಲ ಇಂದಿಗೂ ಜಾಗೃತ ದೇವಿಯ ಮಂದಿರ ಎಂದೇ ಖ್ಯಾತಿ ಪಡೆದಿದೆ. ನಿತ್ಯವೂ ಅಭಿಷೇಕ, ಪೂಜೆ ಸೇರಿ ಧಾರ್ಮಿಕ ವಿಧಿ-ವಿಧಾನಗಳು, ದೇವಿ ಪುರಾಣ, ಭಜನೆ ಕಾರ್ಯಕ್ರಮ
ಜರುಗುತ್ತವೆ.
ಇದರೊಂದಿಗೆ ನಗರದ ಕುಂಬಾರವಾಡಾದ ಭವಾನಿ ಮಂದಿರ, ದೇವಿ ಕಾಲೋನಿಯ ದೇವಿ ಮಂದಿರ, ಸರ್ವಿಸ್ ಸ್ಟ್ಯಾಂಡ್ ಭವಾನಿ ಮಂದಿರ, ಮಂಗಲಪೇಟ್ ಭವಾನಿ ಮಾತಾ ಮಂದಿರ, ಹಳ್ಳದಕೇರಿ ಜಗದಂಬಾ ಮಂದಿರ ಸೇರಿ ವಿವಿಧೆಡೆ ನವರಾತ್ರಿ ಉತ್ಸವವನ್ನು ಶ್ರದ್ಧೆಯೊಂದಿಗೆ ಆಚರಿಸಲಾಗುತ್ತದೆ. ದಸರಾ ಹಬ್ಬದಲ್ಲಿ ದೇವಿ ಪ್ರತೀಕವಾಗಿ ಘಟ ಸ್ಥಾಪನೆ ಮಾಡಲಾಗುತ್ತದೆ. ಹುತ್ತದ ಮಣ್ಣು ಅಥವಾ ಹೊಲದಲ್ಲಿನ ಉತ್ತಮ ಮಣ್ಣು ತಂದು ನವ ಧಾನ್ಯಗಳನ್ನು ಅದರಲ್ಲಿ ಬೆರೆಸಿ ಬಳಿಕ ಅದರ ಮೇಲೆ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿ ಎಲೆ ಇಡಲಾಗುತ್ತದೆ. ಕುಡಿಕೆ ನಡುವೆ ತಾಯಿ ವಿಗ್ರಹ ಪ್ರತಿಷ್ಠಾಪಿಸಿ ಶ್ರದ್ಧೆ-ಭಕ್ತಿಯಿಂದ ಆರಾಧಿಸುವ ವಾಡಿಕೆ ಇಲ್ಲಿದೆ.