Advertisement

ಮುಧೋಳ: ಕೊರವಂಜಿ ವೇಷಧಾರಿ ವಿದ್ಯಾರ್ಥಿನಿ ನುಡಿದ ಭವಿಷ್ಯ ನಿಜವಾಯ್ತು!

04:08 PM May 17, 2023 | Team Udayavani |

ಮುಧೋಳ: ಕೆಲ ಸಾರಿ ನಾವಾಡುವ ಮಾತುಗಳೇ ಅಕ್ಷರಶಃ ಸತ್ಯವಾಗುವ ಮೂಲಕ ಆಶ್ಚರ್ಯವನ್ನುಂಟು ಮಾಡುತ್ತವೆ.
ಕೆಲ ತಿಂಗಳ ಹಿಂದೆ ಸಮೀಪದ ಶಿರೋಳ ಗ್ರಾಮದ ರಮೇಶಣ್ಣ ಗಡದನ್ನವರ ಚೈತನ್ಯಧಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಕೊರವಂಜಿ ವೇಷ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಶಾಸಕ, ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಅವರ ಬಳಿ ತೆರಳಿ ನುಡಿದಿದ್ದ ಭವಿಷ್ಯ ಅಕ್ಷರಶಃ ಈಗ ಸತ್ಯವಾಗಿದ್ದು, ಕ್ಷೇತ್ರದ ತುಂಬೆಲ್ಲ ಆ ಮಾತಿನದ್ದೇ ಚರ್ಚೆಯಾಗುತ್ತಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಆ ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ ಬಂದು ವಿದ್ಯಾರ್ಥಿ ಮಾತುಗಳೇ ಇದೀಗ ಟ್ರೆಂಡ್‌ ಆಗಿದೆ.

Advertisement

ವಿದ್ಯಾರ್ಥಿನಿ ಹೇಳಿದ್ದೇನು ?: ಶಾಲೆಯ ವಿದ್ಯಾರ್ಥಿನಿ ಕೊರವಂಜಿ ವೇಷದಲ್ಲಿ ಕೋಲು ಹಿಡಿದುಕೊಂಡು ತಿಮ್ಮಾಪುರ ಬಳಿ ಬಂದು ನಿಮಗೆ 2022ರಲ್ಲಿ ಕೊಂಚ ಕಂಟಕವಿತ್ತು. ಅದೀಗ ದೂರವಾಗಿದೆ. ನಾನು ಹೇಳುವುದು ಸುಳ್ಳಾಗಲ್ಲ. ನಮ್ಮ ಮುಧೋಳದ ಮುಂದಿನ ಎಂಎಲ್‌ಎ ಆಗುತ್ತೀರಿ, ಮಂತ್ರಿಯಾಗುತ್ತೀರಿ ಎಂದು ಹೇಳಿಕೆ ನೀಡಿದ್ದಳು. ವಿದ್ಯಾರ್ಥಿನಿ ಮಾತಿಗೆ ಮುಗುಳುನಕ್ಕಿದ್ದ ಶಾಸಕ ಆರ್‌.ಬಿ. ತಿಮ್ಮಾಪುರ ಅವರು ವಿದ್ಯಾರ್ಥಿನಿಗೆ ಧನ್ಯವಾದ ಅರ್ಪಿಸಿದ್ದರು. ಅಂದು ಆ ವಿದ್ಯಾರ್ಥಿನಿ ಹೇಳಿದ್ದ ಆ ಮಾತುಗಳು ಎಲ್ಲರಲ್ಲಿಯೂ ನಗೆ ಉಕ್ಕಿಸಿದ್ದವು.

ಮತ್ತೆ ಮುನ್ನೆಲೆಗೆ ಬಂದ ವಿಡಿಯೋ: ಚುನಾವಣೆ ಘೋಷಣೆಗೂ ಮುನ್ನ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತಾದರೂ ಹೆಚ್ಚಿಗೆ ಸದ್ದು ಮಾಡಿರಲಿಲ್ಲ. ಬಿಜೆಪಿಯ ಭದ್ರಕೋಟೆ ಅದರಲ್ಲೂ ಮುಧೋಳ ಮತಕ್ಷೇತ್ರದಲ್ಲಿ ಅನುದಾನದ ಹೊಳೆ ಹರಿಸಿದ್ದ ಗೋವಿಂದ ಕಾರಜೋಳ ಸೋಲುತ್ತಾರೆಂದು ಯಾರೂ ಊಹಿಸಿರಲಿಲ್ಲ. ಆದರೆ ಚುನಾವಣೆ ಫಲಿತಾಂಶದಲ್ಲಿ ಎರಡು ದಶಕದ ಬಳಿಕ ಆರ್‌.ಬಿ.ತಿಮ್ಮಾಪುರ ಅವರು ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಫಲಿತಾಂಶ ಹೊರ ಬಿದ್ದಿದ್ದೇ ತಡ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿ ನುಡಿದಿದ್ದ ಭವಿಷ್ಯದ ವಿಡಿಯೋ ಹೆಚ್ಚಿಗೆ ಸದ್ದು ಮಾಡಲಾರಂಭಿಸಿದೆ.

ಬದಲಾದ ಚಿತ್ರಣ: ಇನ್ನು ಚುನಾವಣೆ ವಿಚಾರಕ್ಕೆ ಬರುವುದಾದರೆ ಆರ್‌.ಬಿ. ತಿಮ್ಮಾಪುರ ಅವರಿಗೆ ಪ್ರತಿ ಚುನಾವಣೆಯಲ್ಲೂ ಶಿರೋಳದಲ್ಲಿ ಹಿನ್ನಡೆಯುಂಟಾಗುತ್ತಿತ್ತು. ಈ ಬಗ್ಗೆ ಅವರು ಹಲವಾರು ಬಾರಿ ಹೇಳಿಕೊಂಡಿರುವುದು ಉಂಟು. ಆದರೆ ಈ ಬಾರಿ ಚುನಾವಣೆಯಲ್ಲಿ ತಿಮ್ಮಾಪುರ ಅವರಿಗೆ ಮೊದಲ ಬಾರಿಗೆ ಎರಡು ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ತಂದು
ಕೊಟ್ಟಿರುವುದು ಒಂದು ಕಾಕತಾಳೀಯ ಸಂಗತಿ ಎಂದೇ ಬಿಂಬಿಸಲಾಗುತ್ತಿದೆ.

ಮಂತ್ರಿಯಾಗುತ್ತಾರಾ ತಿಮ್ಮಾಪುರ?: ಇನ್ನು ವಿದ್ಯಾರ್ಥಿನಿ ಭವಿಷ್ಯದ ಪ್ರಕಾರ ತಿಮ್ಮಾಪುರ ಅವರು ಮಂತ್ರಿಯಾಗ್ತಾರಾ? ಮುಂದಿನ ದಿನಗಳಲ್ಲಿ ಆ ಮಾತು ನಿಜವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Advertisement

ಶಾಲೆಯ ಕಾರ್ಯಕ್ರಮಕ್ಕಾಗಿ ಶಿರೋಳದ ಶಾಲೆಗೆ ತೆರಳಿದ್ದಾಗ ವಿದ್ಯಾರ್ಥಿಯ ಮಾತುಗಳು ಖುಷಿ ನೀಡಿದ್ದವು. ಅವಳ ಮಾತಿನಂತೆ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ನನ್ನಲ್ಲಿನ ಸಂತಸ ಇಮ್ಮಡಿಗೊಂಡಿದೆ.
∙ಆರ್‌.ಬಿ. ತಿಮ್ಮಾಪುರ ಮುಧೋಳ ಮತಕ್ಷೇತ್ರದ ಶಾಸಕ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next