Advertisement

ಪೂರ್ವ ಪ್ರಾಥಮಿಕ ಶಾಲೆ ಅಂಗನವಾಡಿಯಲ್ಲಿರಲಿ

12:01 PM Jul 11, 2018 | Team Udayavani |

ಬೆಂಗಳೂರು: ಸರ್ಕಾರ ಆರಂಭಿಸಲು ಉದ್ದೇಶಿಸಿರುವ ಪೂರ್ವ ಪ್ರಾಥಮಿಕ ಶಾಲೆಗಳನ್ನೂ ಅಂಗನವಾಡಿಗಳಲ್ಲೇ ಪ್ರಾರಂಭಿಸಬೇಕು ಹಾಗೂ ಇನ್ನೂ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆ ನಡೆಸಿದರು.

Advertisement

ಮಂಗಳವಾರ ನಗರದ ಪುರಭವನದ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷೆ ಲೀಲಾವತಿ ಮಾತನಾಡಿ, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ ಯುಕೆಜೆ) ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ.

ಅಂಗವನಾಡಿಗೆ 3 ವರ್ಷದಿಂದ ಒಟ್ಟು 6 ವರ್ಷದ ಮಕ್ಕಳು ಬರುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆದರೆ 3 ವರ್ಷ 10 ತಿಂಗಳು ತುಂಬಿರುವ ಮಕ್ಕಳು ಅಲ್ಲಿಗೆ ಹೋಗುತ್ತಾರೆ. ಇಲ್ಲಿ ಕೇವಲ 3 ವರ್ಷ 10 ತಿಂಗಳೊಳಗಿನ ಮಕ್ಕಳು ಬರುತ್ತಾರೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕೆಲಸ ಇಲ್ಲದಂತಾಗುತ್ತದೆ ಎಂದರು.

ರಾಜ್ಯದಲ್ಲಿ 33 ಸಾವಿರಕ್ಕೂ ಅಧಿಕ ಮಿನಿ ಅಂಗನವಾಡಿಗಳಿವೆ. ಇಲ್ಲಿ ಸಹಾಯಕಿಯರು ಇರುವುದಿಲ್ಲ. ಕಾರ್ಯಕರ್ತೆಯರೇ ಎಲ್ಲ ಕೆಲಸ ಮಾಡಬೇಕಾಗುತ್ತದೆ. ಮಕ್ಕಳಿಗೆ ಅಡುಗೆ ಮಾಡುವುದು, ಮಾತೃಪೂರ್ಣ ಯೋಜನೆಯಡಿ ಬರುವ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ಹಾಗೂ ಮಕ್ಕಳನ್ನು ಸಂಬಾಳಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ನೇರವಾಗಿ ಮಕ್ಕಳ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಾಯೋಗಿಕ ಯೋಜನೆಯನ್ನು ರಾಜ್ಯದ 4 ಜಿಲ್ಲೆಗಳಲ್ಲಿ ತರಲು ಮುಂದಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಬಾರದು. 26 ದಿನಗಳಿಗೆ 69.16 ರೂ. ನೇರವಾಗಿ ಮಕ್ಕಳ ಖಾತೆಗೆ ವರ್ಗಾಯಿಸಿದರೆ ಮಕ್ಕಳು ಅಂಗನವಾಡಿಗಳಿಗೆ ಬಾರದೆ ಮನೆಯಲ್ಲೇ ಇರುತ್ತಾರೆ.

Advertisement

ಹೀಗಾಗಿ ಕೇಂದ್ರ ಸರ್ಕಾರ ಮಕ್ಕಳ ಖಾತೆಗೆ ನೇರವಾಗಿ ಹಣ ವರ್ಗಾಯಿಸಬಾರದು ಎಂದರು. ತಮಿಳುನಾಡು ಹಾಗೂ ಕೇರಳದಲ್ಲಿ ಅಂಗನವಾಡಿ ನೌಕರರಿಗೆ 11 ರಿಂದ 12 ಸಾವಿರ ರೂ. ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೂ ಅಂಗನವಾಡಿ ನೌಕಕರಿಗೂ ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು ಎಂದು ಮನವಿ ಮಾಡಿದರು.

ಸೆ.5ರಂದು ಸಂಸತ್‌ ಚಲೋ: ಕಳೆದ ಕೆಲವು ತಿಂಗಳಿನಿಂದ ಐದಾರು ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದಸ ಹಲವು ಯೋಜನೆಗಳು ರಾಜ್ಯದ ಅಂಗನವಾಡಿ ನೌಕಕರಿಗೆ ಪೂರಕವಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಗಮನ ಸೆಳೆಯಲು ಸೆ.5ರಂದು ಸಂಸತ್ತು ಚಲೋ ನಡೆಸಲಾಗುವುದು. ಕೇಂದ್ರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆ ಮನೇಕಾ ಗಾಂಧಿ ಅವರಿಗೆ ಸಮಸ್ಯೆಗಳನ್ನು ತಿಳಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿ ವೀರಸ್ವಾಮಿ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಈಗ ವಿಧಾನಸಭೆ ಕಲಾಪ ನಡೆಯುತ್ತಿರುವುದರಿಂದ ಮೇಲಧಿಕಾರಿಗಳು ಬರಲು ಸಾಧ್ಯವಾಗುತ್ತಿಲ್ಲ. ಅಧಿವೇಶನ ಮುಗಿದ ತಕ್ಷಣ ಬೇಡಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next