Advertisement

ಬಂಟರ ಸಮುದಾಯದ ಶಕ್ತಿ ಅಗಾಧ

11:42 AM Jan 14, 2018 | |

ಬೆಂಗಳೂರು: ಬಂಟರ ಸಮುದಾಯ ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಅಗಾಧ ಶಕ್ತಿ ಹೊಂದಿದೆ. ಬ್ಯಾಂಕಿಂಗ್‌, ಉದ್ಯಮ, ರಾಜಕೀಯ ಮತ್ತು ಸಿನಿಮಾ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಮುದಾಯದವರು ಸಾಧನೆ ಮಾಡಿದ್ದಾರೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಬೆಂಗಳೂರು ಬಂಟರ ಸಂಘದ ಯುವ ಘಟಕ ವತಿಯಿಂದ ಶನಿವಾರ ವಿಜಯನಗರದ ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದ ಸಮುದಾಯದ ಯುವಜನತೆಯ ರಾಷ್ಟ್ರೀಯ ಸಮಾವೇಶ “ಯುವೈಕ್ಯ-2018′ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಭಾಗದಲ್ಲಿ ಬಂಟರ  ಸಮುದಾಯ ಪ್ರಬಲವಾಗಿದೆ.

ರೈತರಾಗಿದ್ದ ಈ ಸಮುದಾಯ ಭೂ ಸುಧಾರಣೆ ಕಾಯ್ದೆಯ ನಂತರ ಜಮೀನು ಕಳೆದುಕೊಂಡು ವಿವಿಧ ಉದ್ಯಮಗಳನ್ನು ಆರಂಭಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು. ಬಂಟರ ಸಮುದಾಯದ ಕರ್ನಾಟಕವಷ್ಟೇ ಅಲ್ಲದೆ ಹೊರ ರಾಜ್ಯದಲ್ಲೂ ಪ್ರಭಾವ ಹೊಂದಿದ್ದು, ಮುಂಬೈನಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಬಂಟರ ಸಮುದಾಯವರಿದ್ದಾರೆ. ಆ ಪೈಕಿ ಶೇ.90ರಷ್ಟು ಮಂದಿ ಹೋಟೆಲ್‌ ಉದ್ಯಮದಲ್ಲಿದ್ದಾರೆ ಎಂದರು.

ಬೆಂಗಳೂರಿನಲ್ಲೂ ಸುಮಾರು 2 ಲಕ್ಷ  ಮಂದಿ ಬಂಟರ ಸಮುದಾಯವರಿದ್ದು ಸ್ವ ಉದ್ಯೋಗದ ಮೂಲಕ ಬೇರೆಯವರಿಗೆ ಉದ್ಯೋಗ ಕಲ್ಪಿಸುತ್ತಿದ್ದಾರೆ. ಕೈಗಾರಿಕೆಗಳನ್ನು ಆರಂಭಿಸುತ್ತಿದ್ದಾರೆ. ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲೂ ಬಂಟರ ಶಕ್ತಿ ಹಾಗೂ ಪ್ರಾಬಲ್ಯ ಇದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆ ಅಧಿಕ ಮಳೆ ಬೀಳುವ, ಹಸಿರು ತುಂಬಿರುವ ನಾಡಾಗಿದೆ. ಪರಿಸರ ಮಾಲಿನ್ಯ ದಕ್ಷಿಣ ಕನ್ನಡ ಸೇರಿದಂತೆ ಎಲ್ಲಡೆ ಹೆಚ್ಚಾಗುತ್ತಿದೆ. ಪರಿಸರ ಉಳಿಸಲು ಯುವಜನತೆ ಮುಂದಾಗಬೇಕು. ಮಾಲಿನ್ಯ ತಡೆಗಾಗಿ ಗಿಡ ಮರಗಳನ್ನು ನಡೆವ ಅಭಿಯಾನ ಕೈಗೆತ್ತಿಕೊಳ್ಳಬೇಕು.

Advertisement

ಘನತಾಜ್ಯ ನಿರ್ವಹಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಳ್ಳಿಗಳು ಪಟ್ಟಣವಾಗುತ್ತಿದೆ. ಪಟ್ಟಣ ನಗರವಾಗಿ, ನಗರ ಮಹಾನಗರವಾಗಿ ಮಾರ್ಪಾಡಾಗುತ್ತಿದೆ ಮತ್ತು ಮಾಲಿನ್ಯವೂ ಹೆಚ್ಚುತ್ತಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಬಂಟ್ಸ್‌ ಯಾನೆ ನಾಡವರ ಮಾತೃ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಮಾತನಾಡಿ, ನಮ್ಮಲ್ಲಿರುವ ಯುವ ಸಂಪತ್ತಿನ ಸದ್ಬಳಕೆಯಾಗಬೇಕು. ಸಮುದಾಯದ ಅಭಿವೃದ್ಧಿಯ ಜತೆಗೆ ದೇಶದ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ಮಾಡಬೇಕು.

ಯುವ ಪೀಳಿಗೆಗೆ ಉದ್ಯೋಗದ ಜತೆಗೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಬೇಕಾದ ಶಿಕ್ಷಣ ನೀಡಬೇಕು ಎಂದು ಹೇಳಿದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಿ.ಚಂದ್ರಹಾಸ್‌ ರೈ, ಉದ್ಯಮಿಗಳಾದ ಕೆ.ಪ್ರಕಾಶ್‌ ಶೆಟ್ಟಿ, ಉದಯ ಕುಮಾರ್‌ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next