Advertisement

ಸಂಘಟನೆಯಿಂದ ಸಮಸ್ಯೆ ಎದುರಿಸುವ ಶಕ್ತಿ

08:48 AM Aug 05, 2019 | Suhan S |

ಹುಬ್ಬಳ್ಳಿ: ಸಂಘಟನೆ ಇದ್ದರೆ ಶಕ್ತಿ, ಇಲ್ಲದಿದ್ದರೇ ಏನೂ ಇಲ್ಲ ಎನ್ನುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ಕೆಬಿಆರ್‌ ಡ್ರಾಮಾ ಕಂಪನಿಯಲ್ಲಿ ರವಿವಾರ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ 2019-20ನೇ ಸಾಲಿನ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಸಣ್ಣ ಕೆಲಸ ಮಾಡಬೇಕೆಂದರೂ ಇಂದು ಸಂಘಟನೆ ಅವಶ್ಯ. ಸಂಘಟನೆ ಒಂದಿದ್ದರೆ ಎಂತಹ ಸಮಸ್ಯೆಗಳು ಬಂದರೂ ಧೈರ್ಯದಿಂದ ಮುನ್ನಡೆಯಬಹುದು ಎಂದರು. ಭಿಕ್ಷುಕರ ಸಂಘಟನೆ, ಹಮಾಲಿ ಕಾರ್ಮಿಕರ ಸಂಘಟನೆ, ಚಮ್ಮಾರ ಸಂಘಟನೆ, ಐಎಎಸ್‌ ಅಧಿಕಾರಿಗಳ ಸಂಘಟನೆ, ವಕೀಲರ ಸಂಘಟನೆ, ಪೊಲೀಸ್‌ ಅಧಿಕಾರಿಗಳ ಸಂಘಟನೆ ಹೀಗೆ ಎಲ್ಲರ ಸಂಘಟನೆಗಳಿದೆ. ಅದರೊಂದಿಗೆ ಇದೀಗ ವೃತ್ತಿ ರಂಗಭೂಮಿ ಕಲಾವಿದರ ಸಂಘಟನೆಯೂ ಆರಂಭವಾಗಿರುವುದು ಶ್ಲಾಘನೀಯ ಎಂದರು.

2015ರಲ್ಲಿ ಆರಂಭಗೊಂಡಿರುವ ವೃತ್ತಿ ರಂಗಭೂಮಿ ಕಲಾವಿದರ ಸಂಘಟನೆ ಕೆಲವು ಅಡೆತಡೆಗಳಿಂದ ನಿಂತು ಹೋಗಿದ್ದು, ಇದೀಗ ಮತ್ತೆ ಆರಂಭಗೊಂಡಿರುವುದು ಉತ್ತಮ ಕಾರ್ಯ. ಇನ್ನು ಮುಂದೆ ಸಂಘಟನೆ ಎಂದಿಗೂ ನಿಲ್ಲದೇ ಸದಾ ಕಾರ್ಯ ಚಟುವಟಿಕೆಗಳಿಂದ ಕೂಡಿರಲಿ ಎಂದರು.

ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ವೃತ್ತಿ ರಂಗಭೂಮಿ ಕಲಾವಿದರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ನಾವೆಲ್ಲರೂ ಒಂದು ಎಂದು ತೋರಿಸಿಕೊಡಬೇಕು. ಬೇರೆ ಬೇರೆಯಾದರೆ ತುಳಿದು ಬಿಡುತ್ತಾರೆ. ಆದ್ದರಿಂದ ಕಲಾವಿದರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘಟನೆ ಮುನ್ನಡೆಸಬೇಕೆಂದರು.

Advertisement

ರಂಗಭೂಮಿ ಕಟ್ಟಲು ಹುಬ್ಬಳ್ಳಿಗೆ ಬಡತನ ಬಂದಿದ್ದು, ಬಸವರಾಜ ಹೊರಟ್ಟಿ ಅವರು ನೇತೃತ್ವ ವಹಿಸಿಕೊಳ್ಳುವ ಮೂಲಕ ಹುಬ್ಬಳ್ಳಿಯಲ್ಲಿ ಸುಸಜ್ಜಿತ ರಂಗಭೂಮಿ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಡಾ| ಗೋವಿಂದ ಮಣ್ಣೂರ ಮಾತನಾಡಿ, ನಾಟಕ ಪ್ರದರ್ಶನ, ಕಲಾವಿದರ ಜೀವನ, ಸಂಘಟನೆ ಮಾಡುವುದು ಕಷ್ಟದ ಕೆಲಸಗಳು. ಈ ಹಿಂದೆ ನಮ್ಮಲ್ಲಿ ರಂಗಭೂಮಿ ಕಲಾವಿದರು ಇಲ್ಲದೇ ಇರುವುದರಿಂದ ಮಹಾರಾಷ್ಟ್ರದ ನಾಟಕ ಕಂಪನಿಗಳು ಇಲ್ಲಿಗೆ ಆಗಮಿಸಿ ನಾಟಕ ಪ್ರದರ್ಶನ ನೀಡುತ್ತಿದ್ದವು. ನಮ್ಮಲ್ಲಿ ನಾಟಕ ಕಂಪನಿಗಳು ಆರಂಭವಾದ ನಂತರ ಅವುಗಳ ಪ್ರದರ್ಶನ ನಿಂತಿತು. ಆದರೆ ಇಂದು ನಮ್ಮಲ್ಲಿರುವ ನಾಟಕ ಕಂಪನಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವುಗಳನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ ಎಂದರು.

ವೃತ್ತಿ ರಂಗಭೂಮಿ ಕಲಾವಿದರ ಸಂಘದ ಫೈಯಾಜ್‌ ಕರ್ಜಗಿ, ಉಪಾಧ್ಯಕ್ಷ ಮಾಲತಿ ಸುಧೀರ ಇನ್ನಿತರರು ಮಾತನಾಡಿದರು. ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ ಅಧ್ಯಕ್ಷತೆ ವಹಿಸಿದ್ದರು. ಮಂಟೇಶ ದಂಡೀನ, ಮಲ್ಲಿಕಾರ್ಜುನ ಮಡ್ಡೆ, ಪ್ರವೀಣಕುಮಾರ, ನಾಗರತ್ನಮ್ಮಾ ಚಿಕ್ಕಮಠ ಮೊದಲಾದವರು ಇದ್ದರು. ರಾಜಣ್ಣ ಜೇವರ್ಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next