Advertisement

ಭಾರತೀಯ ವೀರ ಯೋಧರ ಶಕ್ತಿಗೆ ಮಿಗಿಲಾದುದಿಲ್ಲ!

12:50 AM Jan 15, 2021 | Team Udayavani |

ಭಾರತದಲ್ಲಿ ಪ್ರತೀ ವರ್ಷ ಜನವರಿ 15 ಅನ್ನು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಧರ ಶೌರ್ಯ, ಸಾಹಸಗಳನ್ನು ಪ್ರಶಂಸಿಸಿ ಅವರನ್ನು ಗೌರವಿಸುವ ಜತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಗೆ ಸಮರ್ಪಿತವಾದ ದಿನ ಇದಾಗಿದೆ. ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ದಿನವನ್ನು ಆಚರಿಸಲಾಗುತ್ತಿದೆ.  ಸೇನಾ ದಿನದ ವಿಶೇಷತೆಯೇನು?  ಸ್ವಾತಂತ್ರ್ಯನಂತರ ಭಾರತೀಯ ಸೇನೆಯ ಸಾಮರ್ಥ್ಯ ಹೇಗೆ ವೃದ್ಧಿಸಿದೆ? ಇಲ್ಲಿದೆ ಮಾಹಿತಿ.

Advertisement

ಜನವರಿ 15ರಂದೇ ಏಕೆ? :

ಸ್ವಾತಂತ್ರ್ಯನಂತರ ದೇಶದಲ್ಲಿ ಹೈದರಾಬಾದ್‌ ಸೇರಿದಂತೆ ಅನೇಕ ಸಂಸ್ಥಾನಗಳಿಂದ ತೊಂದರೆ ಎದುರಾಗಲಾರಂಭಿಸಿದ್ದಾಗ, ಸಮಸ್ಯೆಬಗೆಹರಿಸಲು ಸೇನೆಯು ಮುಂದೆ ಬರಬೇಕಾಯಿತು. ಆ ಸಮಯದಲ್ಲೂ ಭಾರತೀಯ ಸೇನೆಯ ಮುಖ್ಯಸ್ಥರು ಬ್ರಿಟಿಷ್‌ ಮೂಲದವರೇ ಆಗಿದ್ದರು. 15 ಜನವರಿ 1949ರಂದು ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಸೇನಾ ಪ್ರಮುಖರಾದರು. ಅನಂತರದಿಂದ ಪ್ರತೀ ವರ್ಷವೂ ಜನವರಿ 15ರಂದು ಸೇನಾ ದಿವಸವನ್ನು ಆಚರಿಸುತ್ತಾ ಬರಲಾಗುತ್ತಿದೆ. ಆ ಸಮಯದಲ್ಲಿ ಸೇನೆಯಲ್ಲಿ ಸುಮಾರು 2 ಲಕ್ಷದಷ್ಟು ಸೈನಿಕರಿದ್ದರು.

2014ರಿಂದ ಬದಲಾಗುತ್ತಿದೆ ಸಶಸ್ತ್ರ ಪಡೆಗಳ ಬಲ :

2014ರಿಂದ ಭಾರತೀಯ ಸಶಸ್ತ್ರಪಡೆಯ ಬಲ ಗಣನೀಯವಾಗಿ ವೃದ್ಧಿಸುತ್ತಿದೆ  ರಫೇಲ್‌ನಂಥ ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿ, ದೇಶೀಯ ತೇಜಸ್‌ ಯುದ್ಧ ವಿಮಾನಗಳ ಉನ್ನತೀಕರಣ, ಕ್ಷಿಪಣಿಗಳು, ಜಲಾಂತರ್ಗಾಮಿ ವಿರೋಧಿ ವಿಮಾನಗಳ ಮೂಲಕ ಸಶಸ್ತ್ರಪಡೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿವೆ. 2016ರ ಸೆಪ್ಟಂಬರ್‌ ತಿಂಗಳಲ್ಲಿ ಪಾಕಿಸ್ಥಾನದ ನೆಲಕ್ಕೇ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದು, 2017ರಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಡೋಕ್ಲಾಂ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಎದುರು ನಿಂತು ಅವರನ್ನು ಹಿಮ್ಮೆಟ್ಟಿಸಿದ್ದು, 2019ರಲ್ಲಿ ಪಠಾಣ್‌ಕೋಟ್‌ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ಥಾನದ ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸಿದ್ದು, 2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನದ ಸೈನಿಕರ ಹೆಡೆಮುರಿಕಟ್ಟಿರುವುದು, ಈಗಲೂ ಲಕ್ಷಾಂತರ ಸಂಖ್ಯೆಯಲ್ಲಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ, ಶೀತಗಾಳಿಯ ನಡುವೆ ಭಾರತೀಯ ಸೇನೆಯು ತನ್ನ ಸೈನಿಕರನ್ನು ನಿಯೋಜಿಸಿರುವುದೆಲ್ಲ, ಬದಲಾದ ಭಾರತೀಯ ಸೇನೆಯ ಬಲಕ್ಕೆ ಪ್ರತೀಕ.

Advertisement

ಹಲವು  ಬಿಕ್ಕಟ್ಟು-ಯುದ್ಧಗಳನ್ನು  ಎದುರಿಸುತ್ತಾ… :

ಭಾರತೀಯ ಸೇನೆಯು ದಶಕಗಳಿಂದ ಪಾಕಿಸ್ಥಾನ ಹಾಗೂ ಚೀನದೊಂದಿಗೆ ಗಡಿ ಭಾಗದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವುದರಿಂದ, ವಿವಿಧ ಪರಿಸ್ಥಿತಿಗಳಲ್ಲಿ, ವಾತಾವರಣಗಳಲ್ಲಿ ಹೋರಾಡುವ ಅದರ ಶಕ್ತಿ ವೃದ್ಧಿಸಿದೆ. ಆರಂಭಿಕ ಹಂತದಲ್ಲಿ  ಸೇನೆಯು ಮುಖ್ಯ ಗುರಿ ಗಡಿ ಭಾಗದ ರಕ್ಷಣೆಯಾಗಿತ್ತು. ಆದರೆ ಅನಂತರದ ವರ್ಷಗಳಲ್ಲಿ ಸೇನೆಯು ಆಂತರಿಕ  ಭದ್ರತೆ ನೀಡುವಲ್ಲಿ(ಮುಖ್ಯವಾಗಿ ಪ್ರತ್ಯೇಕತಾವಾದ  ಹೆಚ್ಚಿದ್ದ ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ) ತನ್ನ ಗಮನ ಹರಿಸಿತು. ಭಾರತೀಯ ಸೇನೆಯು ಇದುವರೆಗೂ 1947-48ರ ಭಾರತ ಪಾಕ್‌ ಯುದ್ಧ, 1948ರಲ್ಲಿ ಹೈದರಾಬಾದ್‌ ನಿಜಾಮನ ವಿರುದ್ಧ ಆಪರೇಷನ್‌ ಪೋಲೋ, 1962ರಲ್ಲಿ ಚೀನ ವಿರುದ್ಧದ  ಯುದ್ಧ, 1965ರಲ್ಲಿ ಪಾಕ್‌ ವಿರುದ್ಧ, 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧ(ಈ ವಿಜಯಕ್ಕೀಗ 50 ವರ್ಷ), 1998ರಲ್ಲಿ ಕಾರ್ಗಿಲ್‌ ಯುದ್ಧವನ್ನು ಎದುರಿಸಿದೆ.

ರಕ್ಷಣ  ಪರಿಕರಗಳ ರಫ್ತು ಹೆಚ್ಚಳ :

ಸೇನೆಗೆ ಅಗತ್ಯವಿರುವ ರಕ್ಷಣ ಪರಿಕರಗಳ ಸ್ವದೇಶಿ ಉತ್ಪಾದನೆಗೆ  ಕೆಲವು ವರ್ಷಗಳಿಂದ ಒತ್ತು ನೀಡಲಾಗುತ್ತಿದೆ. ಗಮನಾರ್ಹ ಸಂಗತಿಯೆಂದರೆ, 2014ರಲ್ಲಿ 2000 ಕೋಟಿಯಷ್ಟಿದ್ದ ರಕ್ಷಣ ಪರಿಕರಗಳ ರಫ್ತು, ಕಳೆದ ಎರಡು ವರ್ಷಗಳಲ್ಲಿ 17 ಸಾವಿರ ಕೋಟಿಗೆ ಏರಿದೆ. ಮುಂದಿನ ಐದು ವರ್ಷಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ನಿರ್ಮಾಣಗಳ ಮೂಲಕ ರಫ್ತು ಪ್ರಮಾಣವನ್ನು  35,000 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ.

ಕೊರೆವ ಚಳಿಯಲ್ಲೂ..! :

ಭಾರತೀಯ ಸೇನಾಪಡೆಯ ಯೋಧರು ಸಿಯಾಚಿನ್‌ನ ಭೀಕರ ಚಳಿಯಲ್ಲೂ ಗಡಿಗಳನ್ನು ಕಾಯುತ್ತಾರೆ. ಇಲ್ಲಿನ ಸರಾಸರಿ ತಾಪಮಾನವು -50 ಡಿಗ್ರಿಗಳಷ್ಟಾಗಿರುತ್ತದೆ. ಹಿಮ ಮತ್ತು ತಂಪಾದ ಗಾಳಿ ಕೂಡ ದೊಡ್ಡ ಅಪಾಯವನ್ನುಂಟು­ಮಾಡುತ್ತದೆ. ಸಿಯಾಚಿನ್‌ ಭೂಮಿಯ ಮೇಲಿನ ಅತೀ ಎತ್ತರದ ಯುದ್ಧ ಭೂಮಿಗಳಲ್ಲಿ ಒಂದು. ಈ ಪ್ರದೇಶದ ಎತ್ತರ ಸಮುದ್ರ ಮಟ್ಟದಿಂದ 6,000 ಮೀಟರ್‌ (20,000 ಅಡಿ).

ವಿಶ್ವಸಂಸ್ಥೆಯ ಶಾಂತಿಪಾಲನೆ ಕಾರ್ಯಾಚರಣೆಗಳಲ್ಲಿ :

ಭಾರತ ಸೇನೆಯು ಆಂತರಿಕ ಕಲಹ ಎದುರಿಸುತ್ತಿದ್ದ ಅನೇಕ ರಾಷ್ಟ್ರಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯ ಭಾಗವಾಗಿ ಅನೇಕ ಬಾರಿ ಭಾಗವಹಿಸಿದೆ. ಸಿಪ್ರಸ್‌, ಲೆಬನಾನ್‌, ಕಾಂಗೋ, ಅಂಗೋಲಾ, ಕಾಂಬೋಡಿಯಾ, ವಿಯೆಟ್ನಾಂ, ನಮೀಬಿಯಾ, ಲೈಬೀರಿಯಾ, ಮೊಜಾಂಬಿಕ್‌ ಮತ್ತು ಸೊಮಾಲಿಯಾಗಳಲ್ಲಿ ಭಾರತೀಯ ಸೇನೆಯು ವಿಶ್ವಸಂಸ್ಥೆಯ ಪರವಾಗಿ ಶಾಂತಿಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇತಿಹಾಸವಿದೆ. ಇನ್ನು ಕೊರಿಯನ್‌ ಯುದ್ಧ ಸಂದರ್ಭದಲ್ಲೂ ಗಾಯಗೊಂಡವರಿಗೆ ಶುಶ್ರೂಶೆ ನೀಡಲು ಪ್ಯಾರಾಮೆಡಿಕಲ್‌ ಸಿಬಂದಿಯನ್ನೂ ಕಳುಹಿಸಿಕೊಟ್ಟಿತ್ತು ಭಾರತ.

ಅತೀದೊಡ್ಡ ಸೇನೆಗಳು :

1) ಚೀನ 2) ಭಾರತ 3) ಅಮೆರಿಕ

4) ಉ.ಕೊರಿಯಾ 5) ರಷ್ಯಾ

ಭಾರತದ ಒಟ್ಟು  ಸೈನಿಕರು :

35,44,000

ಕಾರ್ಯನಿರ್ವಹಿಸುತ್ತಿರುವವರು :

14,44,000

ಮೀಸಲು ಸೈನಿಕರು :

21,00,000

Advertisement

Udayavani is now on Telegram. Click here to join our channel and stay updated with the latest news.

Next