Advertisement

ಅಂಚೆ ಇಲಾಖೆ ಈಗ ಔಷಧ ರವಾನೆಗೂ ಸೈ

10:08 PM Apr 15, 2020 | Sriram |

ಮಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಅಂಚೆ ಇಲಾಖೆಯು ಅಗತ್ಯ ಸೇವೆಗಳನ್ನು ನೀಡುತ್ತಿದ್ದು, ಮಂಗಳೂರು ವಿಭಾಗದಲ್ಲಿ ಎಲ್ಲ ಇಲಾಖಾ ಮತ್ತು ಶಾಖಾ ಅಂಚೆ ಕಚೇರಿಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.

Advertisement

ಔಷಧ ಇತ್ಯಾದಿ ತುರ್ತು ಅಗತ್ಯದ ಸೇವೆಗಳು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಯಾವುದೇ ಊರಿಗೆ ಅಂಚೆ ಮೂಲಕ ಔಷಧ ಮತ್ತು ತುರ್ತು ಅಗತ್ಯದ ವಸ್ತುಗಳನ್ನು ರವಾನಿಸಬಹುದಾಗಿದೆ. ಸಮೀಪದ ಜಿಲ್ಲೆಗಳಾದ ಶಿವಮೊಗ್ಗ, ಮೈಸೂರು, ಕೊಡಗು ಹಾಗೂ ಚಿಕ್ಕ ಮಗಳೂರು ಇತ್ಯಾದಿ ಊರುಗಳಿಗೂ ಔಷಧ ಮತ್ತು ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ತಲುಪಿಸಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆದರೆ ನೆರೆಯ ಹಾಗೂ ಇತರ ರಾಜ್ಯಗಳಿಗೆ ಮಂಗಳೂರಿನಿಂದ ನೇರ ಸಾಗಾಣಿಕೆ ಇಲ್ಲದಿರುವುದರಿಂದ ಮಂಗಳೂರಿನಿಂದ ಬೆಂಗಳೂರಿನ ಮೂಲಕ ಕಳುಹಿಸಲಾಗುತ್ತಿದೆ. ಇದರಿಂದ ವಿಳಂಬವಾಗುವ ಸಾಧ್ಯತೆ ಇದೆ. ಇವುಗಳನ್ನು ರವಾನಿಸುವಾಗ ಅಂಚೆ ಕಚೇರಿಗೆ ತುರ್ತು ಅಗತ್ಯದ ಬಗ್ಗೆ ತಿಳಿಸಿದರೆ, ಶೀಘ್ರ ರವಾನೆ ಹಾಗೂ ಬಟವಾಡೆಯ ವ್ಯವಸ್ಥೆಗಳನ್ನು ಮಾಡಲು ಸಹಾಯಕವಾಗುತ್ತದೆ.

ಇ ಮನಿಯಾರ್ಡರ್‌ ಸೇವೆ
ಲಾಕ್‌ಡೌನ್‌ ಸಂದರ್ಭ ಕುಟುಂಬಿಕರಿಗೆ ಹಣ ಕಳಿಸುವ ಅಗತ್ಯ ಎಲ್ಲರಿಗೂ ಬರಬಹುದು. ಇದಕ್ಕಾಗಿ ಅಂಚೆ ಕಚೇರಿ ಯಲ್ಲಿ ವಿಶೇಷವಾದ ಇ ಮನಿಯಾರ್ಡರ್‌ ಸೇವೆ ಲಭ್ಯವಿದೆ. ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು ಈ ಸೇವೆಯ ಮೇಲೆ ಪರಿಣಾಮ ಬೀರುವುದಿಲ್ಲ. ಎಲೆಕ್ಟ್ರಾನಿಕ್‌ ತಂತ್ರಜ್ಞಾನದ ಮೂಲಕ ಪಿನ್‌ ಕೋಡ್‌ ಆಧಾರಿತವಾಗಿ ಕಳುಹಿಸುವ ವ್ಯವಸ್ಥೆ ಇರುವುದರಿಂದ ದೇಶದ ಯಾವುದೇ ಭಾಗಕ್ಕೂ ಇ ಮನಿಯಾರ್ಡರ್‌ ಮಾಡ ಬಹುದು. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಇ ಮನಿಯಾರ್ಡರ್‌ ಹಾಗೂ ಅಂಚೆ ಉಳಿತಾಯ ಖಾತೆ ಮೂಲಕ ಸಂಬಂಧಿಸಿದ ಫಲಾನುಭವಿ ಗಳಿಗೆ ಹಣವು ಅಂಚೆ ಕಚೇರಿಗಳಲ್ಲಿ ಪಾವತಿ ಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಸುಮಾರು 5,500 ಫಲಾನುಭವಿಗಳಿಗೆ ಇ ಮನಿಯಾರ್ಡರ್‌ಗಳನ್ನು ಮಂಗಳೂರು ವಿಭಾಗದಲ್ಲಿ ವಿತರಿಸಲಾಗಿದೆ. ಇನ್ನೂ ಸುಮಾರು 24,000 ಫಲಾನುಭವಿಗಳಿಗೆ ಈ ವಾರ ಇ ಮನಿಯಾರ್ಡರ್‌ಗಳನ್ನು ತಲುಪಿಸಲಾಗುವುದು.

ಸಾರ್ವಜನಿಕರಿಗೆ ಮತ್ತು ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಇಲಾಖೆ ಕಾಳಜಿ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕು. ಹೆಚ್ಚಿನ ಮಾಹಿತಿಗೆ ಬಲ್ಮಠ ವಿಭಾಗೀಯ ಕಚೇರಿಯ
ವಾಟ್ಸ್‌ಪ್‌ ಸಂಖ್ಯೆ 9448291072ಗೆ ಸಂದೇಶ ಕಳುಹಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟನೆ ತಿಳಿಸಿದೆ.

ಮೊಬೈಲ್‌, ಡಿ.ಟಿ.ಎಚ್‌. ರೀಚಾರ್ಜ್‌
ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿರು ವುದರಿಂದ ಮೊಬೈಲ್‌/ಡಿ.ಟಿ.ಎಚ್‌. ರೀಚಾರ್ಜ್‌ ಸೌಲಭ್ಯ ಗಳು ಕೂಡ ಅಂಚೆ ಕಚೇರಿಯಲ್ಲಿ ಲಭ್ಯವಿವೆ. ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಖಾತೆಯ ಮೂಲಕ ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ರೀಚಾರ್ಜ್‌ ಮಾಡಬಹುದು. ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ಮನೆ ಯಲ್ಲೇ ಈ ಸೌಲಭ್ಯ ಪಡೆಯಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Advertisement

ವಿದ್ಯುತ್‌ ಬಿಲ್‌ ಪಾವತಿ
ಮಂಗಳೂರು ಅಂಚೆ ವಿಭಾಗದ ಎಲ್ಲ ಇಲಾಖಾ ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿ ಸೇವೆ ಲಭ್ಯವಿದೆ. ಲಾಕ್‌ಡೌನ್‌ ಅವಧಿಯಲ್ಲಿ ಮೆಸ್ಕಾಂ ಬಿಲ್‌ ಬಾರದಿದ್ದರೂ ಗ್ರಾಹಕರು ತಮ್ಮ ಆರ್‌.ಆರ್‌. ನಂಬರ್‌ ಹಾಗೂ ಮೆಸ್ಕಾಂ ಸಬ್‌ ಡಿವಿಷನ್‌ ಮಾಹಿತಿಯನ್ನು ಅಂಚೆ ಕಚೇರಿಯಲ್ಲಿ ನೀಡಿ ಬಿಲ್‌ ಪಾವತಿಯನ್ನು ಮಾಡಬಹುದು.

ಬೆಳಗ್ಗೆ 10ರಿಂದ ಅಪರಾಹ್ನ 2ರ ವರೆಗೆ ಅಗತ್ಯ ಸೇವೆ
ವ್ಯವಹಾರದ ಸಂದರ್ಭ ಸಾರ್ವ ಜನಿಕರು ಅಂಚೆ ಕಚೇರಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಹಾಗೂ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ಅಂಚೆ ಕಚೇರಿಗಳಲ್ಲಿ ಸದ್ಯಕ್ಕೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಅಗತ್ಯ ಅಂಚೆ ಸೇವೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next