ಇಡೀ ದೇಶದ ಮೂಲೆ ಮೂಲೆಯ ಪರಿಚಯ ಹೊಂದಿರುವ ಖ್ಯಾತಿ ಹೊಂದಿರುವ ಅಂಚೆ ಇಲಾಖೆ ಒಂದೊಮ್ಮೆ ಪತ್ರ ಬಟವಾಡೆ, ಮನಿಆರ್ಡರ್ ಮತ್ತು ಕೆಲವೊಂದು ಸರಕಾರದ ಸಹಾಯಧನ ವಿತರಣೆ ಮಾತ್ರ ಮಾಡುತ್ತಿತ್ತು. ಆದರೆ ಈಗ ಅಂಚೆ ಇಲಾಖೆ ಆಮೂಲಾಗ್ರವಾಗಿ ಬದಲಾವಣೆಯಾಗಿದೆ. ವಿಮೆಯಿಂದ ಹಿಡಿದು ಒಂದು ಬ್ಯಾಂಕ್ ನಡೆಸುವ ಹೆಚ್ಚಿನ ಕೆಲಸ ಕಾರ್ಯಗಳನ್ನು ನಿಮ್ಮ ಮನೆ ಬಾಗಿಲಿನಲ್ಲಿಯೇ ನಡೆಸಿಕೊಡುವ ತಾಂತ್ರಿಕತೆಯನ್ನು ಹೊಂದಿದೆ. ನೀವು ಯಾವುದೇ ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿದ್ದರೂ ನಿಮ್ಮ ಮನೆ ಬಾಗಿಲಿಗೆ ಬರುವ ಅಂಚೆಯಣ್ಣ ಅದರಿಂದ ಹಣ ತೆಗೆದುಕೊಡುತ್ತಾನೆ. ಇದಲ್ಲದೆ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ಮೂಲ ಸೌಕರ್ಯಗಳೆಲ್ಲದರ ಪಾವತಿಯನ್ನು ಅಂಚೆಯಣ್ಣನ ಮೂಲಕ ನಡೆಸಬಹುದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯ ಕಾಲ ಘಟ್ಟದಲ್ಲಿ ಮನೆಯಲ್ಲಿಯೇ ಇದ್ದು ಇದನ್ನೆಲ್ಲ ನಿರ್ವಹಿಸಲು ಸಾಧ್ಯವಿದೆ. ತಾಂತ್ರಿಕತೆಯ ಅರಿವಿಲ್ಲದಿದ್ದರೆ ಅದನ್ನೂ ಅಂಚೆಯಣ್ಣನೇ ನಿಮಗೆ ಕಲಿಸುತ್ತಾನೆ.
ಅಂಚೆ ಇಲಾಖೆ ಇಂದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಪರ್ಯಾಯವಾಗಿ ಬೆಳೆದಿದೆ. ಮಾತ್ರವಲ್ಲದೆ ಗ್ರಾಮೀಣ ಭಾರತದ ಮೂಲೆ ಮೂಲೆಯಲ್ಲಿಯೂ ಸೇವೆ ನೀಡುವ ವ್ಯವಸ್ಥೆಯನ್ನು ಹೊಂದಿದೆ. ಗ್ರಾಹಕರಿಗೆ ಮನೆ ಬಾಗಿಲಿನಲ್ಲಿಯೇ ಸೇವೆ ನೀಡುತ್ತಿದೆ. ನೀವು ಇಲ್ಲಿ ಯಾವ ರೀತಿ ವ್ಯವಹರಿಸಬಹುದು. ಇಲ್ಲಿದೆ ಮಾಹಿತಿ.
ಅಂಚೆ ಕಚೇರಿ ಜಾರಿಗೆ ತಂದ “ಅಂಚೆ ಮಿತ್ರ’ ವೆಬ್ ಅಪ್ಲಿಕೇಷನ್
(https://karnatakapost.gov.in/AncheMitra) ಮೂಲಕ ಜನರು ಅಗತ್ಯ ಸೇವೆಗಳ ವಿನಂತಿ ಕಳುಹಿಸಿದರೆ ಪೋಸ್ಟ್‌ಮನ್ ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆಗಳನ್ನು ಒದಗಿಸುತ್ತಾರೆ.
ಅಂಗವಿಕಲ, ವಿಧವಾ, ವೃದ್ಧಾಪ್ಯವೇತನ, ನರೇಗ ಯೋಜನೆಯ ಹಣವನ್ನು ಅಂಚೆ ಕಚೇರಿ ಆರಂಭಿಸಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಕಕಆ) ಖಾತೆ ಮೂಲಕ ಪಡೆಯಲು ಬಯಸಿದರೆ ಹಣ ಡ್ರಾ ಮಾಡಿ ಫಲಾನುಭವಿಗಳ ಮನೆಗೆ ನಗದು ರೂಪದಲ್ಲಿ ಪೋಸ್ಟ್‌ಮನ್ ತಲುಪಿಸುತ್ತಾರೆ.
ವಿದ್ಯುತ್ ಬಿಲ್, ಎಲ್‌ಐಸಿ ಕಂತು ಪಾವತಿ, ಆರ್‌ಡಿ ಖಾತೆಯ ಹಣ ಕಟ್ಟಲು ಸಹಿತ ವಿವಿಧ ರೀತಿಯ ಹಣ ಪಾವತಿಗಳನ್ನು ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದರಿಂದ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಸುಲಭವಾಗಿ ನಡೆಸಬಹುದಾಗಿದೆ. “ಅಂಚೆ ಮಿತ್ರ’ದಲ್ಲಿ ಮಾಹಿತಿ ಇದೆ.
ಮನೆಯಿಂದಲೇ ಔಷಧ ಸಹಿತ ಇನ್ನಿತರ ವಸ್ತುಗಳನ್ನು ಪಾರ್ಸೆಲ್ ಕಳುಹಿಸಬಹುದು. ಅಲ್ಲದೆ ತಮ್ಮ ಸೇವಾ ವಿನಂತಿಯ ಸ್ಥಿತಿಯನ್ನು ಕೂಡ ಆ ವೆಬ್ ಅಪ್ಲಿಕೇಷನ್ ಮೂಲಕ ಪರಿಶೀಲಿಸಬಹುದು. ಅಂಚೆಮಿತ್ರ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಸಲಹೆ ನೀಡುತ್ತದೆ.
ಇಷ್ಟೆಲ್ಲದರ ಹೊರತಾಗಿಯೂ ಅಂಚೆ ಕಚೇರಿಗೆ ಹೋಗುವುದು ಅನಿವಾರ್ಯವಾದರೆ ಮಾಸ್ಕ್ ಧರಿಸಿ ಹೋಗಿ. ಅಲ್ಲಿ ಸರದಿ ಪ್ರಕಾರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಹಾಗೇ ಕೌಂಟರ್‌ಗಳ ಬಳಿ ಒಂದು ಮೀಟರ್ ಅಂತರ ಕಾಯ್ದುಕೊಂಡು ವ್ಯವಹರ ನಡೆಸುವುದಕ್ಕೆ ಅವಕಾಶವಿರುವುದು.
ಶೀತ, ಜ್ವರ, ಉಸಿರಾಟದ ತೊಂದರೆ ಇರುವವರಿಗೆ ಅಂಚೆ ಕಚೇರಿಗೆ ಪ್ರವೇಶಾವಕಾಶ ಇರುವುದಿಲ್ಲ. ಕಚೇರಿಯ, ಬಾಗಿಲು, ರಾಡ್, ಗೋಡೆ, ಕೌಂಟರ್‌ಗಳ ಗ್ಲಾಸ್, ಇತ್ಯಾದಿಗಳನ್ನು ಮುಟ್ಟಬೇಡಿ. ನಿಮ್ಮದೆ ಪೆನ್ ಕೊಂಡೊಯ್ಯಿರಿ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ.
9148594259