ರಾಯಚೂರು: ಅನುಕಂಪ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ ಸಡಿಲಗೊಳಿಸಿ ಸರ್ಕಾರ ಸೆ.17ರಂದು ಆದೇಶ ಹೊರಡಿಸಿದ್ದು, ಇಲ್ಲಿನ ಆರ್ ಟಿಪಿಎಸ್, ವೈಟಿಪಿಎಸ್ ಹುದ್ದೆ ಆಕಾಂಕ್ಷಿಗಳಿಗೆ ಆಸೆ ಚಿಗುರೊಡೆದಿದೆ. ಆದರೆ ಇಂಥ ಆದೇಶ ಮುಂಚೆಯೂ ಮಾಡಿದ್ದರೂ ಕೆಪಿಸಿ ಮಾತ್ರ ಉದ್ಯೋಗ ನೀಡದೆ ಕುಂಟು ನೆಪ ಹೇಳಿದ್ದು ಈ ಬಾರಿಯಾದರೂ ನಮ್ಮ ಸಮಸ್ಯೆಗೆ ಸ್ಪಂದಿಸುವುದೇ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಇಲ್ಲಿನ ವೈಟಿಪಿಎಸ್, ಆರ್ ಟಿಪಿಎಸ್‌ನಲ್ಲಿ ಸುಮಾರು 50ಕ್ಕೂ ಅಧಿ ಕ ಹುದ್ದೆಗಳನ್ನು ಅನುಕಂಪದ ಆಧಾರದಡಿ ನೀಡಬೇಕಿದೆ. ಆದರೆ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರು ವಿದ್ಯಾರ್ಹತೆ ಕಾರಣಕ್ಕೆ ಹುದ್ದೆ ನೀಡದೆ ವಿಳಂಬ ಮಾಡುತ್ತಿದ್ದಾರೆ. ಅದರಲ್ಲೂ ಗ್ರೂಪ್ ಸಿ ಮತ್ತು ಡಿ ಹುದ್ದೆಗಳನ್ನು ನೀಡಲು ಅನಗತ್ಯ ಕಾರಣವೊಡ್ಡಲಾಗುತ್ತಿದೆ. ತಾಂತ್ರಿಕ ಹುದ್ದೆಗಳಿದ್ದರೆ ಮಾತ್ರ ನೀಡುತ್ತಿದ್ದು, ಐಟಿಐ, ಡಿಪ್ಲೊಮಾ ಹೊಂದಿದವರಿಗೆ ಮಾತ್ರ ಪರಿಗಣಿಸಿ, ಎಸ್ಸೆಸ್ಸೆಲ್ಸಿ ಅಥವಾ
ಅದಕ್ಕಿಂತ ಕಡಿಮೆ ವ್ಯಾಸಂಗ ಮಾಡಿದವರಿಗೆ ಉದ್ಯೋಗವಕಾಶ ನೀಡಿಲ್ಲವೆಂಬುದು ಆಕಾಂಕ್ಷಿಗಳ ದೂರಾಗಿದೆ.
ಸರ್ಕಾರದಿಂದ ಆದೇಶ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಶೇಷ ಕೋಶದ ಅಧೀನ ಕಾರ್ಯದರ್ಶಿ ಈಗ ಮತ್ತೂಮ್ಮೆ ಆದೇಶ ಹೊರಡಿಸಿದ್ದು, ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು, 1996ರ ನಿಯಮ 43 ಮತ್ತು 14) ನೇಮಕಾತಿಗಾಗಿ ಅಗತ್ಯ ವಿದ್ಯಾರ್ಹತೆ ಬಗ್ಗೆ ತಿಳಿಸಲಾಗಿದೆ. ಅದರ ಅನುಸಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದಲ್ಲಿ ಅಥವಾ ಹೊಂದದೇ ಇದ್ದಲ್ಲಿಯೂ ಸಹ ಗ್ರೂಪ್ ಡಿ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪದವಿ ಪೂರ್ವ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದಲ್ಲಿ ಗ್ರೂಪ್ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ/ಕಿರಿಯ ಸಹಾಯಕ ಹುದ್ದೆಗೆ ನೇಮಿಸಬಹುದು ಎಂದು ಉಲ್ಲೇಖೀಸಲಾಗಿದೆ. ಕೋವಿಡ್-19ರ ಸಾಂಕ್ರಾಮಿಕ ಸೋಂಕಿನ ಕಾರಣಕ್ಕೆ 2019-2020ನೇ ಸಾಲಿನಲ್ಲಿ ಪದವಿ ಪೂರ್ವ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗಿದೆ. ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದು, 1990 ನಿಯಮಗಳನ್ನು ಆತನ ಅವಲಂಬಿತರಲ್ಲಿ ಒಬ್ಬರು ನಿಗದಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿದ ಪಕ್ಷದಲ್ಲಿ ಹಾಗೂ ಅಂತಹ ಅವಲಂಬಿತ ವ್ಯಕ್ತಿಯ ಪದವಿ ಪೂರ್ವ ಪರೀಕ್ಷಾ ಫಲಿತಾಂಶ ವಿಳಂಬವಾಗಿದ್ದಲ್ಲಿ
ಅಂತಹ ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಎಲ್ಲ ಸಕ್ಷಮ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ. ಈ ಬಾರಿಯಾದರೂ ಕೆಪಿಸಿ ಆರ್‌ಟಿಪಿಎಸ್, ವೈಟಿಪಿಎಸ್ ನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಿ ಎಂಬುದು ಆಕಾಂಕ್ಷಿಗಳ ಒತ್ತಾಯ.
ಕೆಪಿಸಿ ವಿರುದ್ಧ ಆಕ್ರೋಶ: ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಂಡ್ ಸಂಸ್ಥೆ ವಿರುದ್ಧ ಈ ಭಾಗದ ಆಕ್ರೋಶ ಹೆಚ್ಚಾಗುತ್ತಿದೆ. ಆರ್‌ಟಿಪಿಎಸ್, ವೈಟಿಪಿಎಸ್‌ಗೆ ಭೂಮಿ ನೀಡಿದ ಸಂತ್ರಸ್ತರ ಕುಟುಂಬಗಳಿಗೆ ಕೆಲಸ ನೀಡುತ್ತಿಲ್ಲ ಎನ್ನುವ ಆರೋಪ ಭೂ ಸಂತ್ರಸ್ತರದ್ದು. ಭೂಮಿ ಪಡೆಯುವಾಗ ಇಲ್ಲದ ಷರತ್ತುಗಳನ್ನು ಈಗ ಒಡ್ಡುತ್ತಿದ್ದು, ಕೆಲಸ ನೀಡದೆ ಸತಾಯಿಸುತ್ತಿದ್ದಾರೆ. ಒಂದು ಕುಟುಂಬಕ್ಕೆ 1+1 ಆಧಾರದಡಿ ಹುದ್ದೆ ನೀಡುವ ಬೇಡಿಕೆಯೂ ಈಡೇರುತ್ತಿಲ್ಲ. ಅನುಕಂಪದ
ಆಧಾರದಡಿ ಕೆಲಸ ನೀಡಲು ಮೀನಾಮೇಷ ಎಣಿಸಲಾಗುತ್ತಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂಧನ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಕೆಪಿಸಿ ಅಧಿಕಾರಿಗಳು ಮಾತ್ರ ಸ್ಪಷ್ಟ ನಿಲುವು ವ್ಯಕ್ತಪಡಿಸದೆ ಕುಂಟು ನೆಪ ಹೇಳುತ್ತಾರೆಂದು ಬೇಸರ ವ್ಯಕ್ತಪಡಿಸುತ್ತಾರೆ ಹುದ್ದೆ ಆಕಾಂಕ್ಷಿಗಳು.
ಅನುಕಂಪದ ಆಧಾರದಡಿ ಹುದ್ದೆ ನೀಡಲು ವಿದ್ಯಾರ್ಹತೆ ಸಡಿಲಗೊಳಿಸಿ ಸರ್ಕಾರ ಮತ್ತೂಮ್ಮೆ ಆದೇಶ ಹೊರಡಿಸಿದೆ. ಆರ್‌ಟಿಪಿಎಸ್, ವೈಟಿಪಿಎಸ್ ನಲ್ಲಿ ಸಾಕಷ್ಟು ಜನರಿಗೆ ಅನುಕಂಪದ ಆಧಾರದಡಿ ಕೆಲಸ ನೀಡಬೇಕಿದ್ದರೂ ಕೆಪಿಸಿ ಅನಗತ್ಯ ಕಾಲಕ್ಷೇಪ ಮಾಡುತ್ತಿದೆ. ಈ ಹಿಂದೆ ಕೂಡ ಸರ್ಕಾರದ ಇಂಥ ಆದೇಶ ಹೊರಡಿಸಿದರೂ ಕೆಪಿಸಿ ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಾರಿಯಾದರೂ ಸರ್ಕಾರದ ಆದೇಶದನ್ವಯ ಅನುಕಂಪದ ಆಧಾರದಡಿ ಹುದ್ದೆಗಳನ್ನು ನೀಡಲಿ.
ಆರ್‌ಟಿಪಿಎಸ್, ನೌಕರರ ಸಂಘದ ಸದಸ್ಯರು
*ಸಿದ್ಧಯ್ಯಸ್ವಾಮಿ ಕುಕನೂರು