Advertisement

ಬೆಂಗಳೂರು ವಿವಿ ಪಿಎಚ್‌.ಡಿ ಪ್ರವೇಶ ತಡವಾಗುವ ಸಾಧ್ಯತೆ

04:01 PM Oct 13, 2018 | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಪಿಎಚ್‌.ಡಿ ಪ್ರವೇಶ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಬೆಂವಿವಿ ತ್ರಿಭಜನೆಯ ನಂತರ ಇದೇ ಮೊದಲ ಬಾರಿಗೆ ಮೂರು ವಿವಿಯಿಂದಲೂ ಪ್ರತ್ಯೇಕವಾಗಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಬೇಕಿದೆ. ಮೂರು ವಿವಿಯಿಂದಲೂ ಈ ಸಂಬಂಧ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಆದರೆ, ಪಿಎಚ್‌.ಡಿ ಪ್ರವೇಶ ಬಯಸುವ ಅಭ್ಯರ್ಥಿಗಳು ಮೂರರಲ್ಲಿ ಯಾವ ವಿವಿ ಬೇಕಾದರೂ ಸೇರಿಕೊಳ್ಳಬಹುದು. ಪಿಎಚ್‌.ಡಿ ಪ್ರವೇಶಕ್ಕಾಗಿ ಸಾವಿರಾರು ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ. 

Advertisement

ರಾಜ್ಯಪಾಲರ ಕಚೇರಿ ಹಾಗೂ ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ನಂತರವಷ್ಟೇ ಪ್ರವೇಶ ಪ್ರಕ್ರಿಯೆ
ಆರಂಭಿಸಲು ಸಾಧ್ಯ. ಪ್ರತಿ ವರ್ಷ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ತಿಂಗಳಲ್ಲಿ ಪಿಎಚ್‌.ಡಿ ಪ್ರವೇಶ ಪ್ರಕ್ರಿಯೆ ಆರಂಭವಾಗುತಿತ್ತು. ಪ್ರಸಕ್ತ ಸಾಲಿನಲ್ಲಿ ಪಿಎಚ್‌ಡಿ ಸಂಬಂಧ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಪಿಎಚ್‌.ಡಿಗೆ ಸೇರಿ ಕೊಳ್ಳಬೇಕೆಂದಿರುವ ಅಭ್ಯರ್ಥಿಗಳಿಗೆ ಯಾವ ಮಾಹಿತಿಯೂ ಇಲ್ಲದಾಗಿದೆ.

ಯುಜಿಸಿ ಮಾರ್ಗಸೂಚಿಯಂತೆ ಪ್ರತಿ ವಿಭಾಗದಲ್ಲಿ ಇರುವ ಪ್ರಾಧ್ಯಾಪಕರು ಮಾರ್ಗದರ್ಶನಕ್ಕಾಗಿ 8 ಮಂದಿ ಪಿಎಚ್‌
.ಡಿ ಅಧ್ಯಯನ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳಬಹುದು. ಸಹ ಪ್ರಾಧ್ಯಾಪಕರು 6 ಮಂದಿ ಹಾಗೂ ಸಹಾಯಕ ಪ್ರಾಧ್ಯಾಪಕರು 4ಮಂದಿ ಪಿಎಚ್‌.ಡಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದು.

ಬೆಂವಿವಿಯಲ್ಲಿ 50ಕ್ಕೂ ಅಧಿಕ ವಿಭಾಗಗಳಿವೆ. ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಯುಜಿಸಿ ಸೂಚಿಸಿರುವ ಸಂಖ್ಯಾನುಸಾರ ಪಿಎಚ್‌.ಡಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರೆ, 250ಕ್ಕೂ ಅಧಿಕ ಅಭ್ಯರ್ಥಿಗಳು ಪ್ರಸಕ್ತ ಸಾಲಿನಲ್ಲಿ ಬೆಂವಿವಿಯಲ್ಲಿ ಪಿಎಚ್‌.ಡಿಗೆ ಸೇರಿಕೊಳ್ಳಲಿದ್ದಾರೆ. ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ವಿವಿಯಲ್ಲಿ ಈ ಸಂಖ್ಯೆ ಕಡಿಮೆಯಾಗಲಿದೆ ಎಂದು ಬೆಂವಿವಿ ಹಿರಿಯ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

ಖಾಲಿ ಹುದ್ದೆ ಹೆಚ್ಚಿದೆ: ಬೆಂವಿವಿಯ ಬಹುತೇಕ ವಿಭಾಗಗಳಲ್ಲಿ ಪ್ರಾಧ್ಯಾಪಕ, ಸಹ ಹಾಗೂ ಸಹಾಯಕ ಪ್ರಾಧ್ಯಾಪಕ
ಹುದ್ದೆ ಖಾಲಿ ಇದೆ. ಹುದ್ದೆ ಭರ್ತಿ ಮಾಡಿಕೊಳ್ಳದೇ ಪಿಎಚ್‌ಡಿ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹುದ್ದೆ ಖಾಲಿ ಇರುವುದ ರಿಂದ ಸರ್ಕಾರ ಹಾಗೂ ರಾಜ್ಯಪಾಲರಿಗೆ ಪಿಎಚ್‌.ಡಿ ಅನುಮತಿ ಪ್ರಸ್ತಾವನೆ ಸಲ್ಲಿಸಲು ವಿವಿಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ವಿವಿಗಳಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿ ಹುದ್ದೆ ಭರ್ತಿಗೆ ಸರ್ಕಾರದಿಂದ ಕ್ರಮ ಕೂಡ ಆಗಿಲ್ಲ. ಹೀಗಾಗಿ ಬಹುತೇಕ ವಿಭಾಗದಲ್ಲಿ ಪಿಎಚ್‌.ಡಿ ಅಭ್ಯರ್ಥಿಗಳಿಗೆ ಪ್ರವೇಶ ನೀಡುವುದು ಕಷ್ಟಸಾಧ್ಯವಾಗಿದೆ.

Advertisement

ಪಿಎಚ್‌.ಡಿ ಪ್ರವೇಶ ಸಂಬಂಧ ಅತಿ ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಸರ್ಕಾರದಿಂದ ಅನುಮತಿ ಪಡೆದು, ರಾಜ್ಯಪಾಲರು ನಿರ್ದೇಶನದಂತೆ ಡಿಸೆಂಬರ್‌ ಅಂತ್ಯದೊಳಗೆ ಪಿಎಚ್‌.ಡಿ ಪ್ರವೇಶ ಪ್ರಕ್ರಿಯೆ
ಆರಂಭಿಸಲಿದ್ದೇವೆ. 
 ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂವಿವಿ ಕುಲಪತಿ

 ರಾಜುಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next