Advertisement

Karnataka: ಮೇಲ್ಮನೆ ವಿಪಕ್ಷ ನಾಯಕ ಸ್ಥಾನಕ್ಕೂ ಲೆಕ್ಕಾಚಾರ

11:19 PM May 25, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದರೂ ಉಭಯ ಸದನದ ವಿಪಕ್ಷ ನಾಯಕ ಸ್ಥಾನದ ಆಯ್ಕೆ ಪ್ರಕ್ರಿಯೆ ಬಗ್ಗೆ ಬಿಜೆಪಿ ಇನ್ನೂ ತಲೆಕೆಡಿಸಿಕೊಳ್ಳದಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಇನ್ನೂ ಹದಿನೈದು ದಿನಗಳ ಕಾಲ ಯಾವುದೇ ತೀರ್ಮಾನವಾಗುವ ಸಾಧ್ಯತೆಯಿಲ್ಲ.

Advertisement

ಬಿಜೆಪಿಯ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರೀ ಟ್ರೋಲ್‌ಗೆ ಒಳಗಾಗುತ್ತಿದೆ. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ವಿಳಂಬವಾದಾಗ ಕಾಂಗ್ರೆಸ್‌ ವರಿಷ್ಠರನ್ನು ಬಿಜೆಪಿ ಪ್ರಶ್ನಿಸಿತ್ತು. ಈಗ ಅದೇ ಮಾರ್ಗ ತುಳಿದಿರುವ ಕಾಂಗ್ರೆಸ್‌ ವಿಪಕ್ಷ ನಾಯಕ ಯಾರು ಎಂದು ಬಿಜೆಪಿಯನ್ನು ಪ್ರಶ್ನಿಸಲಾರಂಭಿಸಿದೆ. ಸಾರ್ವಜನಿಕ ವಲಯದಲ್ಲೂ ಈಗ ಅದೇ ಪ್ರಶ್ನೆ ಮೂಡುತ್ತಿದೆ. ಆದರೆ ಬಿಜೆಪಿ ರಾಜ್ಯ ಘಟಕ ಮಾತ್ರ ಈ ಬಗ್ಗೆ ತುಟಿ ಬಿಚ್ಚುವ ಸ್ಥಿತಿಯಲ್ಲಿಲ್ಲ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಜಾತಿ ಸಮೀಕರಣ ಆಧರಿಸಿ ವರಿಷ್ಠರೇ ಈ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಉನ್ನತ ಮೂಲಗಳ ಪ್ರಕಾರ, ಉಭಯ ಸದನದ ವಿಪಕ್ಷ ನಾಯಕ ಹಾಗೂ ಉಪನಾಯಕನ ಆಯ್ಕೆಗೆ ಇನ್ನು 15 ದಿನಗಳು ಬೇಕಾಗಬಹುದು. ಸದ್ಯಕ್ಕೆ ಅಧಿವೇಶನ ಇಲ್ಲವಾದ್ದರಿಂದ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಲು ವರಿಷ್ಠರು ನಿರ್ಧರಿಸಿದ್ದಾರೆ. ಸದ್ಯದಲ್ಲೇ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಬದಲಾವಣೆಯಾಗಲಿದ್ದು, ಪಕ್ಷದ ನೂತನ ಸಾರಥಿಯ ಜತೆಗೆ ವಿಪಕ್ಷ ನಾಯಕನ ಆಯ್ಕೆಯೂ ನಡೆಯುವ ಸಾಧ್ಯತೆಯಿದೆ.

ಯಾರು ಅಧ್ಯಕ್ಷ?
ವಿಧಾನಸಭೆ ವಿಪಕ್ಷ ನಾಯಕ ಯಾರಾಗುತ್ತಾರೆಂಬ ಆಧಾರದ ಮೇಲೆ ರಾಜ್ಯಾಧ್ಯಕ್ಷರ ಆಯ್ಕೆ ನಿರ್ಧಾರವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಂಸದೀಯ ವ್ಯವಹಾರಗಳನ್ನು ಸಮತೂಕದಿಂದ ನಡೆಸುವುದಕ್ಕೆ ಬಸವರಾಜ ಬೊಮ್ಮಾಯಿ ಅಥವಾ ಸುರೇಶ್‌ ಕುಮಾರ್‌ ಸೂಕ್ತ ಎಂದು ಬಿಜೆಪಿಯ ಒಂದು ವರ್ಗ ಅಭಿಪ್ರಾಯಪಡುತ್ತಿದೆ. ಹಣಕಾಸು, ಇಲಾಖಾವಾರು ಚರ್ಚೆ ಇತ್ಯಾದಿ ದೃಷ್ಟಿಯಿಂದ ಇವರಿಬ್ಬರಿಗೆ ಅನುಭವ ಇರುವ ಕಾರಣ ಯಾರಾದರೊಬ್ಬರ ಆಯ್ಕೆ ಸೂಕ್ತ ಎಂಬ ಮಾತು ಕೇಳಿ ಬಂದಿದೆ. ಆದರೆ ಕಾರ್ಯಕರ್ತರ ವಲಯದಲ್ಲಿ ಬೊಮ್ಮಾಯಿ ಬಗ್ಗೆ ಆಕ್ಷೇಪಗಳಿವೆ. ಹೀಗಾಗಿ ಸಂಘ-ಪರಿವಾರದ ಹಿನ್ನೆಲೆಯುಳ್ಳ ಲಿಂಗಾಯತ ಸಮುದಾಯದವರನ್ನು ವಿಪಕ್ಷ ನಾಯಕ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಬೊಮ್ಮಾಯಿ, ಅರವಿಂದ ಬೆಲ್ಲದ್‌ ಅಥವಾ ಬಸನಗೌಡ ಪಾಟೀಲ್‌ ಯತ್ನಾಳ್‌ ಹೆಸರು ಮುಂಚೂಣಿಯಲ್ಲಿದೆ.

ವಿಧಾನ ಪರಿಷತ್‌ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲೂ ಚರ್ಚೆಗಳು ನಡೆಯುತ್ತಿವೆ. ಬಿ.ಕೆ.ಹರಿಪ್ರಸಾದ್‌ ಅವರಿಗೆ ಸಚಿವ ಸ್ಥಾನ ನೀಡಿ ಅವರನ್ನು ಪರಿಷತ್‌ ಸಭಾನಾಯಕನಾಗಿ ಮಾಡಿದರೆ ಅದೇ ಸಮುದಾಯಕ್ಕೆ ಸೇರಿದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಮೇಲ್ಮನೆ ವಿಪಕ್ಷ ನಾಯಕನಾಗಿ ನೇಮಕ ಮಾಡುವುದು ಸೂಕ್ತ ಎಂಬುದು ಬಿಜೆಪಿ ಹಾಗೂ ಸಂಘ-ಪರಿವಾರದ ಒಂದು ವರ್ಗದ ಅಭಿಪ್ರಾಯ. ಆದರೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ಗಟ್ಟಿ ಧ್ವನಿಯಲ್ಲಿ ಉತ್ತರ ಕೊಟ್ಟು ಮಣಿಸುವುದಕ್ಕೆ ಛಲವಾದಿ ನಾರಾಯಣ ಸ್ವಾಮಿ ಸೂಕ್ತ ವ್ಯಕ್ತಿ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ಈ ಎರಡು ಸ್ಥಾನಗಳಿಗೆ ಯಾರು ಆಯ್ಕೆಯಾಗುತ್ತಾರೆ ಎಂಬುದರ ಮೇಲೆ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ.

Advertisement

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಅಥವಾ ಒಬಿಸಿ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಒಕ್ಕಲಿಗ ಅಥವಾ ಒಬಿಸಿ ಸಮುದಾಯಕ್ಕೆ ಸೇರಿದವರ ಆಯ್ಕೆ ಸಾಧ್ಯತೆ ದಟ್ಟವಾಗಿದೆ. ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಚುನಾವಣ ಫ‌ಲಿತಾಂಶದ ಬಳಿಕ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಹೆಸರು ಒಕ್ಕಲಿಗ ಸಮುದಾಯದ ಪೈಕಿ ಚರ್ಚೆಯಲ್ಲಿದೆ. ಅದೇ ರೀತಿ ರಾಷ್ಟ್ರವ್ಯಾಪಿ ಹಿಂದುಳಿದ ಸಮುದಾಯ ಬಿಜೆಪಿ ಜತೆಗೆ ಭದ್ರವಾಗಿ ನಿಂತಿರುವುದರಿಂದ ಕರ್ನಾಟಕದಲ್ಲೂ ಈ ಪ್ರಯೋಗ ಮಾಡಿದರೆ ಹೇಗೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಹೆಸರು ಮಾತ್ರ ಪರಿಶೀಲನೆಯಲ್ಲಿದೆ. ದಶಕಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ನಾಯಕನ ಹೆಸರು ಪ್ರಸ್ತಾಪವಾಗುತ್ತಿದೆ. ಈ ಹಿಂದೆ ಕೆ.ಎಸ್‌.ಈಶ್ವರಪ್ಪ ಈ ಹುದ್ದೆಯನ್ನು ನಿಭಾಯಿಸಿದ್ದರು.

 ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next