ಮಂಗಳೂರು: ತುಳುನಾಡಿನ ವೀರ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಜನ್ಮ ತಾಳಿದ ಪುಣ್ಯ ಸ್ಥಳ ಪುತ್ತೂರು ಕ್ಷೇತ್ರದ ಪಡುಮಲೆ ಎನ್ನುವ ಹೆಮ್ಮೆ ಮತ್ತು ಭಕ್ತಿಯಿಂದ ಬಿಜೆಪಿ ವೇದಿಕೆಯಲ್ಲಿ ಅವರ ಭಾವಚಿತ್ರವನ್ನು ಅಳವಡಿಸಲಾಗಿತ್ತು. ಇದರಲ್ಲಿ ಅವಮಾನ ಮಾಡುವ ಅಥವಾ ರಾಜಕೀಯ ದುರುದ್ದೇಶ ಇಲ್ಲ. ಮುಂದಕ್ಕೆ ವೀರ ಪುರುಷರ ಭಾವಚಿತ್ರ ಬಳಸಿಕೊಳ್ಳುವ ಉದ್ದೇಶವೂ ಪಕ್ಷಕ್ಕೆ ಇಲ್ಲ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆ ಅಭಿಪ್ರಾಯ ಸಂಗ್ರಹ ಸಭೆಯ ವೇದಿಕೆಯಲ್ಲಿ ಸರ್ವ ಜಾತಿ, ಜನಾಂಗದವರಿಂದ ಆರಾಧಿಸಲ್ಪಡುವ ಕೋಟಿ ಚೆನ್ನಯರ ಭಾವಚಿತ್ರ ಅಳವಡಿಸಲಾಗಿತ್ತು. ಇದರಿಂದ ಜನರ ಭಾವನೆಗಳಿಗೆ ನೋವಾಗಿದೆ ಎಂದು ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಕೆಲವು ಸಂಘಟನೆಗಳು ಹೇಳಿಕೆ
ನೀಡಿದ್ದವು. ಅವರ ಹೇಳಿಕೆಯನ್ನು ಬಿಜೆಪಿ ಗೌರವ ದಿಂದ ಸ್ವೀಕರಿಸಿದೆ.
ಆದರೆ ಬಂಟ್ವಾಳದಲ್ಲಿ ಇತ್ತೀಚೆಗೆ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕ್ರಮದ ಸ್ವಾಗತ ಫಲಕಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಸ್ತುವಾರಿ ಸಚಿವ ರಮಾನಾಥ ರೈ ಅವರ ಭಾವಚಿತ್ರದ ಜತೆ ನಾರಾಯಣ ಗುರುಗಳ ಭಾವಚಿತ್ರ ಹಾಕಿದ್ದು ಅವಮಾನವಲ್ಲವೇ ? ಇದನ್ನು ಯಾಕೆ ವಿರೋಧಿಸಿಲ್ಲ ? ಪಡುಮಲೆಯ ದೇಯಿ ಬೈದ್ಯೆತಿ ಔಷಧ ವನದಲ್ಲಿ ದೇಯಿ ಬೈದ್ಯೆತಿ ಅವರ ಪ್ರತಿಮೆಗೆ ಮತಾಂಧರು ಅವಮಾನ ಮಾಡಿದಾಗ ಕಾಂಗ್ರೆಸ್‌ನವರು ಯಾಕೆ ಖಂಡಿಸಿಲ್ಲ ಎಂದು ಹರಿಕೃಷ್ಣ ಪ್ರಕಟನೆಯಲ್ಲಿ ಪ್ರಶ್ನಿಸಿದ್ದಾರೆ.