ಬೆಂಗಳೂರು: ಹಲವು ಕ್ಷೇತ್ರಗಳ ಬದಲು ಕೇವಲ ಸಾಹಿತ್ಯ ಕೃಷಿಯಲ್ಲಿ ಮಾತ್ರ ತೊಡಗಿದ್ದರೆ ಪೂರ್ಣಚಂದ್ರ ತೇಜಸ್ವಿ ಅವರು ಬಹುದೊಡ್ಡ ಸಾಹಿತಿಯಾಗುತ್ತಿದ್ದರು ಎಂದು ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅನಿಕೇತನ ಕನ್ನಡ ಬಳಗ ವತಿಯಿಂದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಸ್ಮರಣಾರ್ಥ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ತೇಜಸ್ವಿಯವರು ಯಾವುದೇ ಪ್ರಶಸ್ತಿಗಳ ಬೆನ್ನುಹತ್ತದೆ ಸಾಹಿತ್ಯ ಕೃಷಿಯಲ್ಲಿ ಅವರು ಸಾಕಷ್ಟು ಸಾಧಿಸಿದ್ದಾರೆ. ಫೋಟೋಗ್ರಫಿ, ಕೃಷಿ, ಹೋರಾಟ ಇತ್ಯಾದಿಗಳ ಕಡೆಗೆ ಹೆಚ್ಚು ನೀಡಿದ್ದರು ಎಂದು ಹೇಳಿದರು.
ತೇಜಸ್ವಿಯವರು ಸಾಹಿತ್ಯಕ್ಕೆ ಮಾತ್ರ ಮೀಸಲಾಗಿದ್ದರೆ, ಕನ್ನಡ ಸಾರಸ್ವತ ಲೋಕ ಮತ್ತಷ್ಟು ಶ್ರೀಮಂತಗೊಳ್ಳುತ್ತಿತ್ತು. ಅವರೊಬ್ಬ ಅಪರೂಪದ ಲೇಖಕ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿರುವ ಕೊಡುಗೆ ಮರೆಯುವಂತಿಲ್ಲ. ಯುವ ಸಮುದಾಯವನ್ನು ಅತ್ಯಂತ ಹೆಚ್ಚು ಆಕರ್ಷಿಸುವಲ್ಲಿ ಅವರ ಬರಹಗಳು ಯಶಸ್ವಿಯಾಗಿವೆ. ಇನ್ನು ಹೆಚ್ಚು ಕಾಲ ನಮ್ಮೊಂದಿಗೆ ಅವರು ಇರಬೇಕಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾಯಾಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ರವಿಕೃಷ್ಣಾರೆಡ್ಡಿ, ಭಾರತ್ ಶಿಕ್ಷಣ ಸೊಸೈಟಿಯ ಕೃಷ್ಣದಾಸ್, ಕಸಾಪ ಗೌರವ ಕಾರ್ಯದರ್ಶಿ ಸಿ.ಮಲ್ಲಿಕಾರ್ಜುನಪ್ಪ ಮತ್ತಿತರರು ಇದ್ದರು.
ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರರಾವ್, ಕೆಎಸ್‌ಆರ್‌ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಹಾಗೂ ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ ಅವರಿಗೆ ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.