ಸಿಂಧನೂರು: ನಗರದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ, ಕುಡಿಯುವ ನೀರು ಮತ್ತು ನಗರೋತ್ಥಾನ ಯೋಜನೆಯಡಿ ರಸ್ತೆಗಳು ಕಳಪೆ ಆಗಿದ್ದು, ಈ ಎಲ್ಲ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ನಗರಾಭಿವೃದ್ಧಿ ಹೋರಾಟ ಸಮಿತಿ ಕಾರ್ಯಕರ್ತರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಹಳೆ ಬಜಾರ್ ಮುಖಾಂತರ ನಗರಸಭೆ ತಲುಪಿತು. ಇದಕ್ಕೂ ಮುನ್ನ ಮಹಾತ್ಮಗಾಂಧಿ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾಕಾರರು ನಗರಸಭೆ ಮುತ್ತಿಗೆ ಹಾಕಲು ಯತ್ನಿಸಿದರು, ಆದರೆ ಪೊಲೀಸರು ಇವರನ್ನು ತಡೆದರು. ನಗರಾಭಿವೃದ್ಧಿ ಹೋರಾಟ ಸಮಿತಿ ಸಮಿತಿ ಸಂಚಾಲಕ ಎಸ್.ದೇವೇಂದ್ರಗೌಡ ಮಾತನಾಡಿ, ಕಾಮಗಾರಿಗಳು ಪ್ರಾರಂಭವಾದಾಗಿನಿಂದ ಗುಣಮಟ್ಟದ ಕೆಲಸ ಮಾಡುವಂತೆ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಒತ್ತಾಯಿಸುತ್ತಾ ಬಂದಿದ್ದರೂ ಇಲಾಖೆಗಳು ಮತ್ತು ಗುತ್ತಿಗೆದಾರರು ಗಮನಕ್ಕೆ ತೆಗೆದುಕೊಳ್ಳದೆ ಯಥಾಸ್ಥಿತಿ ತಮ್ಮ ಅವ್ಯವಹಾರ ಮುಂದುವರೆಸಿದ್ದಾರೆ. ಕಾಮಗಾರಿಗಳ ಮೇಲ್ವಿಚಾರಣೆ
ಮಾಡುವ ನಗರಸಭೆ ಆಡಳಿತ ಮಂಡಳಿ ಸಹ ನಿರ್ಲಕ್ಷ ತಾಳಿದೆ. ಕಳೆದ ಎರಡು ದಿನದ ಹಿಂದೆ ಒಳಚರಂಡಿ, ಕುಡಿಯುವ ನೀರು ಮತ್ತು ನಗರೋತ್ಥಾನ ಯೋಜನೆಯ ಅಧಿಕಾರಿಗಳು ನಗರಾಭಿವೃದ್ಧಿ ಹೋರಾಟ ಸಮಿತಿಯೊಂದಿಗೆ ನಡೆಸಿದ ಚರ್ಚೆಯಲ್ಲಿ ಸಮರ್ಪಕ ಉತ್ತರ ನೀಡದೆ ನುಸುಳಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿ ಸಂಚಾಲಕ ಡಿ.ಎಚ್.ಕಂಬಳಿ ಮಾತನಾಡಿ, ಸಿಂಧನೂರಿನ ಮಹತ್ವಾಕಾಂಕ್ಷೆಯ ಈ ಯೋಜನೆಗಳ ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲಾಖೆಗೆ ಸಂಬಂಧವಿರದ ತಂತ್ರಜ್ಞರನ್ನು ತನಿಖಾ ಸಮಿತಿಗೆ ನೇಮಿಸಬೇಕು. ಪ್ರತಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಯೋಜನೆ ಕುರಿತಾದ ಮಾಹಿತಿ ಫಲಕ ಅಳವಡಿಸಬೇಕು. ನಗರದ ಜನರಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಸಬೇಕು. ಇಲ್ಲದಿದ್ದರೆ ಮುತ್ತಿಗೆ ಚಳವಳಿಯನ್ನು ಮುಂದುವರಿಸುವುದಾಗಿ ಎಚ್ಚರಿಸಿದರು. ಪ್ರತಿಭಟನಾ ನಿರತರು ಪೌರಾಯುಕ್ತರ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿ ಕಾರಿಗಳು ಸ್ಥಳಕ್ಕೆ ಬರುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು. ನಂತರ ತಹಶೀಲ್ದಾರ ಶಂಶಾಲಂ, ಸಿಪಿಐ ನಾಗರಾಜ ನೇತೃತ್ವದಲ್ಲಿ ಸಹಾಯಕ ಆಯುಕ್ತರಿಗೆ ದೂರವಾಣಿಯಲ್ಲಿ ಕರೆ ಮಾಡಿಸಿ ಜು.19ರಂದು ಸಭೆ ನಡೆಸಿ, ತನಿಖಾ ಸಮಿತಿ ರಚನೆ ಮಾಡುವುದಾಗಿ ಹೇಳಿಕೆ ನೀಡಲಾಯಿತು. ಸಮಿತಿಯ ಸಂಚಾಲಕ ಚಂದ್ರಶೇಖರ ಗೊರೇಬಾಳ, ಮುಖಂಡರಾದ ಖಾನ್‌ಸಾಬ, ವೆಂಕನಗೌಡ ಗದ್ರಟಗಿ, ನಾರಾಯಣ ಬೆಳಗುರ್ಕಿ, ಡಾ| ತಾಹೇರ್‌ಅಲಿ, ಬಸವರಾಜ ಬಾದರ್ಲಿ, ಗುಂಡಪ್ಪ ಬಳಿಗಾರ, ಯಾಕೂಬ್‌ಅಲಿ, ಗಂಗಣ್ಣ ಡಿಶ್, ದಾವಲಸಾಬ ದೊಡ್ಮನಿ, ಕರೇಗೌಡ ಕುರಕುಂದಿ, ಶಂಕರ ಗುರಿಕಾರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.