ಕುಷ್ಟಗಿ: ದುಂಡಾಣು ಅಂಗಮಾರಿ ರೋಗವನ್ನು ಕಾಲ ಕಾಲಕ್ಕೆ ಔಷಧ ಕ್ರಮಗಳಿಂದ ನಿಯಂತ್ರಿಸಿಕೊಂಡು ಈ ಬೆಳೆ ಬೆಳೆಯುವುದು ರೈತರಿಗೆ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಕುಷ್ಟಗಿಯ ರೈತ ರಮೇಶ ಕೊನಸಾಗರ ಅವರು, ದುಂಡಾಣು ಅಂಗಮಾರಿ ನಿಯಂತ್ರಿಸಿಕೊಂಡು ಈ ಬಾರಿ ಭರ್ಜರಿ ದಾಳಿಂಬೆ ಬೆಳೆದಿದ್ದಾರೆ.
ತಾಲೂಕಿನ ನಿಡಶೇಸಿ ಸೀಮಾದಲ್ಲಿ 13 ಎಕರೆ ಜಮೀನಿನಲ್ಲಿ 4 ಎಕರೆ ಪ್ರದೇಶದಲ್ಲಿ ದಾಳಿಂಬೆಗೆ ಕಾಡುವ ದುಂಡಾಣು ಅಂಗಮಾರಿ ರೋಗ ಹಾವಳಿ ಮಧ್ಯೆಯೂ ಉತ್ತಮ ಇಳುವರಿ ಸಾಧ್ಯವಾಗಿದೆ. ಹಿರಿಯ ರೈತರಾದ ಜಗನ್ನಾಥ ಗೋತಗಿ, ಕುಂಬಾರ, ಶಂಕರ್ ಮೊದಲಾದವರ ಮಾರ್ಗದರ್ಶನದಲ್ಲಿ ಈ ಬೆಳೆ ಬೆಳೆದಿದ್ದು ಈ ಬಾರಿ ಸರಾಸರಿ 20 ಟನ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ರಮೇಶ.
ಕಳೆದ 2019ರ ಜೂನ್ ತಿಂಗಳಿನಲ್ಲಿ ಗುಜರಾತ್ ರಾಜ್ಯದ ಕೇಡಲ್‌ನಿಂದ ಪ್ರತಿ ಸಸಿಗೆ 32 ರೂ. ನಂತೆ ಖರೀದಿ ಸಿ 4 ಎಕರೆ ಪ್ರದೇಶದಲ್ಲಿ 1500 ಗಿಡಗಳನ್ನು ನಾಟಿ ಮಾಡಿದ್ದಾರೆ. ಆರಂಭದಿಂದಲೂ ಹಂತ ಹಂತವಾಗಿ ನಿರ್ವಹಣೆ ವೆಚ್ಚ 6 ಲಕ್ಷ ರೂ. ಖರ್ಚಾಗಿದೆ. ಕಳೆದ 2020ರಲ್ಲಿ ವರ್ಷದ ಗಿಡಕ್ಕೆ ದಾಳಿಂಬೆ ಕಾಯಿ ಭಾರ ಆಗದಂತೆ ಹೆಚ್ಚುವರಿ ಕಾಯಿಗಳನ್ನು ತೆಗೆದು ಹಾಕಿದಾಗ್ಯೂ, ಮೊದಲ ಪ್ರಾಯೋಗಿಕ ಕಟಾವಿಗೆ 7 ಟನ್ ಇಳುವರಿಯಲ್ಲಿ ಪ್ರತಿ ಕೆ.ಜಿ. 90ರಿಂದ 100 ರೂ.ವರೆಗೆ 6 ಲಕ್ಷ ರೂ. ಆದಾಯ ಬಂದಿದೆ. ಈ ಬಾರಿ ಪ್ರತಿ ಗಿಡ ಹೊರಲಾರದಂತಹ ಇಳುವರಿ ಕಾಣಬಹುದು.
ಗಿಡಗಳಿಗೆ ಭಾರ ಕವಲು ಕಟ್ಟಿಗೆ ಸಹಾಯದಿಂದ ತಂತಿಗೆ ಎಳೆದು ಕಟ್ಟಿದ್ದರೂ, ಸಹ ಗಿಡಗಳು ಹಣ್ಣಿನ ಬಾರಕ್ಕೆ ಜೋತು ಬಿದ್ದಿವೆ. ದುಂಡಾಣು ಅಂಗಮಾರಿ ರೋಗದ ಮಧ್ಯೆ, ಗಾಳಿ-ಮಳೆ ಸಂದರ್ಭದಲ್ಲಿ ಬೆಳೆ ಕಟಾವು ನಿರ್ವಹಿಸಬೇಕಾದ ಅನಿವಾರ್ಯತೆ ರೈತ ರಮೇಶ ಕೊನಸಾಗರ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ 15 ದಿನಗಳಲ್ಲಿ ಕಟಾವು ಮಾಡಲು ನಿರ್ಧರಿಸಿರುವ ಅವರಿಗೆ ಈಗಾಗಲೇ ಬೆಂಗಳೂರು ಇತರೆಡೆಗಳಿಂದ ಪ್ರತಿ ಕೆಜಿಗೆ 80ರಿಂದ 90 ರೂ.ಗೆ ಖರೀ ದಿಸಲು ಮುಂದಾಗಿದ್ದಾರೆ.