ಲಿಂಗಸುಗೂರು: ದಾಳಿಂಬೆ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ತಾಲೂಕಿನ ದಾಳಿಂಬೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಒಂದೆಡೆ ಬರಗಾಲದಿಂದ ಸಂಪ್ರದಾಯಿಕ ಬೆಳೆ ಬೆಳೆಯುವ ರೈತರು ಆತಂಕದಲ್ಲಿದ್ದರೆ, ದಾಳಿಂಬೆ ಬೆಳೆ ಉತ್ತಮ ಇಳುವರಿ ಮೂಲಕ ಹೆಚ್ಚಿನ ಬೆಳೆ ತಂದು ಕೊಟ್ಟಿದೆ. ತಾಲೂಕಿನಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಕೃಷಿ ಮಾಡಲಾಗಿದೆ. ಪ್ರತಿ ಎಕರೆಗೆ 12ರಿಂದ 14 ಟನ್ ವರಿಗೆ ಇಳುವರಿ ಬಂದಿದೆ. ತಾಲೂಕಿನಿಂದ ಈಗಾಗಲೇ ಶೇ.50ರಷ್ಟು ದಾಳಿಂಬೆ ಮಾರುಕಟ್ಟೆಗೆ ರವಾನೆ ಮಾಡಲಾಗಿದೆ.
ಕಳೆದ ಬಾರಿ ಕೆಜಿಗೆ 30-35 ರೂ. ಇತ್ತು. ಸದ್ಯ 55-60 ರೂ. ವರೆಗೆ ಇದೆ. ಫೆಬ್ರವರಿ ತಿಂಗಳಲ್ಲಿ ಇನ್ನೂ 70 ರೂ. ರಿಂದ 80 ರೂ.ಗೆ ಬೆಲೆ ಸಿಗಲಿದೆ. ಬೆಳೆಗಾರರು ತಾವು ಪಟ್ಟ ಕಷ್ಟಕ್ಕೆ ಲಕ್ಷ ಲಕ್ಷ ರೂ.ಲಾಭದ ಮುಖ ನೋಡುವಂತಾಗಿದೆ. ಚೆನ್ನೈ ಮೂಲದ ವ್ಯಾಪಾರಸ್ಥರು ತಾಲೂಕಿಗೆ ಆಗಮಿಸಿ ಹಣ್ಣು ಖರೀದಿಸುತ್ತಿದ್ದಾರೆ. ಅಲ್ಲಿಂದ ಬಾಂಗ್ಲಾದೇಶ, ಕತಾರ್, ಕುವೈತ್ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ದಾಳಿಂಬೆ ಹಣ್ಣು ಕಡಿಮೆಯಾಗುತ್ತಿದ್ದಂತೆ ಇಲ್ಲಿನ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಇದರಿಂದ ಕೆಲ ರೈತರು ಹಣ್ಣು ಕಟಾವು ಮಾಡಿಲ್ಲ. ಸಾಮಾನ್ಯವಾಗಿ ತಾಲೂಕಿನಲ್ಲಿ ಭಗವಾ ತಳಿ ಬೆಳೆಯಲಾಗುತ್ತಿದೆ.
ತಳಿ ಗಾತ್ರ ಆಕರ್ಷಕ ಬಣ್ಣ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿಸಿದೆ. ತಾಲೂಕಿನ ನೀರಲಕೇರಾ, ಕರಡಕಲ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತೋಟದಲ್ಲಿ ಹಣ್ಣುಗಳ ಪ್ಯಾಕಿಂಗ್ ನಡೆಯುತ್ತಿದೆ. ದಾಳಿಂಬೆ ಬೆಳೆಗೆ ಕಳೆದ ಬಾರಿ ಬೆಲೆಯೂ ಕಡಿಮೆ ಇತ್ತು. ಅದರಂತೆ ರೋಗವು ಕಡಿಮೆಯಿತ್ತು. ಆದರೆ ಎಲ್ಲ ರೋಗ ಎದುರಿಸಿ ದಾಳಿಂಬೆ ರಕ್ಷಣೆ ಮಾಡಿರುವ ರೈತರು ಪ್ರತಿ ಎಕರೆಗೆ ಅಧಿಕ ಇಳುವರಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
300 ಕೋಟಿ ರೂ. ವಹಿವಾಟು: ತಾಲೂಕಿನಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆ ಬೆಳೆಲಾಗಿದೆ. ಈ ಭಾರಿ ಒಂದು ಕೆಜಿಗೆ 60 ರೂ.ವರೆಗೆ ಬೆಲೆ ಇದೆ. ಇನ್ನೂ ಮುಂದಿನ ತಿಂಗಳು ಬೆಲೆ ಏರಿಕೆಯಾಗುತ್ತಿದ್ದರಿಂದ ತಾಲೂಕಿನಲ್ಲಿ ಒಟ್ಟು 280-300 ಕೋಟಿ ರೂ.ವರೆಗೆ ವಹಿವಾಟುವಾಗುವ ನಿರೀಕ್ಷೆಯಿದೆ.
ಮುಖ್ಯಾಂಶಗಳು
• 2500 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಕೃಷಿ
• 14 ಟನ್ ವರಿಗೆ ಇಳುವರಿ ತಂದ ಭಗವಾ ತಳಿ
• 300 ಕೋಟಿ ರೂ. ವಹಿವಾಟು
• ಬಾಂಗ್ಲಾದೇಶ, ಕತಾರ್, ಕುವೈತ್ ದೇಶಗಳಿಗೆ ರಪ್ತು
• ಮಾರುಕಟ್ಟೆ ಸೆಳೆಯುತ್ತಿದೆ ಆಕರ್ಷಕ ಬಣ್ಣ