ಬೆಂಗಳೂರು: ಭಾರತದಲ್ಲಿ ಅನೇಕ ಭಾಷೆ, ಧರ್ಮ, ಸಂಸ್ಕೃತಿ, ಸಾಂಸ್ಕೃತಿ ವೈವಿಧ್ಯತೆ ಇದೆ. ಇಂದಿನ ರಾಜಕೀಯ ಪರಿಸ್ಥಿತಿ ದೇಶದ ವಿಭಿನ್ನತೆ, ಏಕತೆಗೆ ದೊಡ್ಡ ಸವಾಲಾಗಿದೆ. ಇದನ್ನು ಎದುರಿಸದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರಿರಾಮರೆಡ್ಡಿ ಕಳವಳ ವ್ಯಕ್ತಪಡಿಸಿದರು.
ರಷ್ಯನ್ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ಭಾರತ ಕಮ್ಯೂನಿಸ್ಟ್ ಪಕ್ಷ ಮತ್ತು ನವ ಕರ್ನಾಟಕ ಪ್ರಕಾಶನದ ವತಿಯಿಂದ ಭಾನುವಾರ ವಯ್ನಾಲಿಕಾವಲ್ ಘಾಟೆ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಜಗವ ನಡುಗಿಸಿದ ಹತ್ತು ದಿನ’ ಹಾಗೂ “ಕುಟುಂಬ, ಸ್ನೇಹಿತರು ಮತ್ತು ದೇಶ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಪ್ರಗತಿಪರ ಸಾಹಿತಿಗಳಿಗೆ ಮತ್ತು ಸಾಹಿತ್ಯಕ್ಕೆ ದೇಶದಲ್ಲಿ ಉಳಿಗಾಲ ಇಲ್ಲ ಎಂಬುದು ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳು ಸ್ಪಷ್ಟ ಸೂಚನೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿಯವರು ಇನ್ನೊಂದು ಅವಧಿಗೆ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದರು.
ಮಾನವನ ಉನ್ನತಿಯ ಅತ್ಯುನ್ನತ ಘಟ್ಟವೇ ಸಮಾಜವಾದ. ಇದು ಬುರುಡೆಯ ಕಥೆಯಲ್ಲ, ವಿಜ್ಞಾನ. ಕ್ರಾಂತಿಯ ವಿಜ್ಞಾನ ಎಂದು ಲೇನಿನ್ ಸ್ಪಷ್ಟವಾಗಿ ತಿಳಿಸಿದ್ದರು. ಯಾರೋ ಮುರ್‍ನಾಲ್ಕು ಮಂದಿ ಕುಳಿತು ಕ್ರಾಂತಿಯ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಐತಿಹಾಸಿಕ, ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಕ್ಕೆ ಅನುಗುಣಮವಾಗಿ ಕ್ರಾಂತಿ ನಿಶ್ಚಯವಾಗುತ್ತದೆ ಎಂದು ವಿವರಿಸಿದರು.
ಶಿಕ್ಷಣ ತಜ್ಞ ಡಾ.ಜಿ.ರಾಮಕೃಷ್ಣ ಮಾತನಾಡಿ, ತುಪಾಕಿ ಹಿಡಿದು ಸರ್ಕಾರವನ್ನು ಬದಲಾಯಿಸುವುದು ಕ್ರಾಂತಿಯಲ್ಲ. ಸಮಾಜದಲ್ಲಿ ರಚನಾತಕ್ಮ ಪರಿವರ್ತನೆ ತರುವುದು ಕ್ರಾಂತಿ. ಸೋವಿಯತ್ ರಷ್ಯಾದ ಕ್ರಾಂತಿ ಒಂದು ಕ್ಷೇತ್ರ, ವರ್ಗಕ್ಕೆ ಸೀಮಿತವಾಗಿರಲಿಲ್ಲ. ಕ್ರಾಂತಿಯ ಬದಲಾವಣೆಯ ವಿಭಿನ್ನ ಮುಖಗಳನ್ನು ಅರ್ಥೈಸಿಕೊಂಡು ಅಧ್ಯಯನ ಮಾಡಬೇಕು. ಶಸ್ತ್ರಾಸ್ತ್ರದ ಮೂಲಕ ಟೀಕೆಗೆ ಉತ್ತರ ನೀಡಿಬೇಕೆನ್ನುವ ಪ್ರಧಾನಿ ಮೋದಿಯವರ ನಡೆ ಸರಿಯಲ್ಲ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ಕುಟುಂಬ, ಸ್ನೇಹಿತರು ಮತ್ತು ದೇಶ ಕೃತಿಯ ಪರಿಚಯ ಮಾಡಿಕೊಟ್ಟರು. ಕೃತಿಯ ಅನುವಾದಕರಾದ ಡಾ.ಬಿ.ಆರ್.ಮಂಜುನಾಥ್, ಜಿ.ಎಸ್.ನಾಗೇಂದ್ರನ್, ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಮೊದಲಾದವರು ಉಪಸ್ಥಿತರಿದ್ದರು.