Advertisement

ಹಸುಗೂಸಿಗೆ ಹೊಸ ಬದುಕು ಕೊಟ್ಟ ಆರಕ್ಷಕ

12:56 PM Dec 14, 2017 | |

ಪೊಲೀಸರು ಎಂದ ಕೂಡಲೆ ನೆನಪಾಗುದುವು ಒರಟು ಮಾತು, ದರ್ಪ, ಲಾಠಿ ಏಟು. ಆದರೆ ಪೊಲೀಸರಿಗೂ ದಯೆ, ಕರುಣೆ, ಮಮಕಾರವಿದೆ. ಆದರೆ ಪೊಲೀಸರ ಇಂಥ ಸ್ವಭಾವದ ಬಗ್ಗೆ ವರದಿಯಾಗುವುದು ತೀರಾ ವಿರಳ. ಅನಾಥ ಮಗುವೊಂದನ್ನು ಬದುಕಿಸಲು ಇನ್ಸ್‌ಪೆಕ್ಟರ್‌ ಶಶಿಧರ್‌ ಅವರು ತೋರಿದ ಬದ್ಧತೆ, ಕಾಳಜಿ ಆ”ರಕ್ಷಕ’ ಪದದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ಬೆಂಗಳೂರು: ಅಂದು ವ್ಯಕ್ತಿಯೊಬ್ಬ ಏದುಸಿರು ಬಿಡುತ್ತಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ. ಅವರ ಕೈಲಿ ಸುತ್ತಿದ ಬಟ್ಟೆ ಇತ್ತು. ಆ ಬಟ್ಟೆಯಲ್ಲಿ ಒಂದು ದಿನ ಹಿಂದಷ್ಟೇ ಜನಿಸಿದ್ದ ಹಸುಗೂಸಿತ್ತು. ಆ ಹೆಣ್ಣು ಮಗುವಿನ ಸ್ಥಿತಿ ಉತ್ತಮವಾಗಿರಲಿಲ್ಲ. ಕ್ಷೀಣವಾಗಿ ಉಸಿರಾಡುತ್ತಿತ್ತು. ಬದುಕುಳಿಯುವುದು ಬಹುತೇಕ ಕಷ್ಟವಾಗಿತ್ತು….

ಆಗಷ್ಟೇ ಜನಿಸಿದ್ದ ಹೆಣ್ಣು ಹಸುಗೂಸೊಂದನ್ನು ಯಾರೋ ಕರುಳ ಬಳ್ಳಿ ಕತ್ತರಿಸಿ ಬಸವನಗುಡಿಯ ಆರ್ಮುಗಂ ವೃತ್ತದ ಬಳಿಯ ಫ‌ುಟ್‌ಪಾತ್‌ನಲ್ಲಿ ಎಸೆದು ಹೋಗಿದ್ದರು. ಬಹುಶಃ ಹುಟ್ಟಿದ ಗಳಿಗೆಯಿಂದಲೂ ಮಗು ಅಮ್ಮನ ಎದೆಹಾಲು ಕುಡಿದಿರಲಿಕ್ಕಿಲ್ಲ. ಹಸಿದು ರೋಧಿಸುತ್ತಿದ್ದ ಮಗುವನ್ನು ಆಗಲೇ ಇರುವೆಗಳು ಮುತ್ತಿಕೊಂಡಿದ್ದವು.

ಆದರೆ ಅದೇ ವೇಳೆಗೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಮಗುವನ್ನು ಕಂಡು, ಮರುಗಿದರು. ಹಸುಗೂಸನ್ನು ಎತ್ತಿಕೊಂಡು ಸೀದಾ ಬಸವನಗುಡಿ ಪೊಲೀಸ್‌ ಠಾಣೆಗೆ ಹೋದರು. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದುದನ್ನು ಕಂಡ ಇನ್ಸ್‌ಪೆಕ್ಟರ್‌ ಶಶಿಧರ್‌ಗೆ ಆ ಕ್ಷಣಕ್ಕೆ ಏನು ಮಾಡಬೇಕೆಂದೇ ತೋಚಲಿಲ್ಲ. ತಡ ಮಾಡಿದರೆ ಕಂದನ ಜೀವ ಉಳಿಯದು.

ತಕ್ಷಣ ಎಚ್ಚೆತ್ತ ಇನ್ಸ್‌ಪೆಕ್ಟರ್‌, ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು. “ಎಷ್ಟೇ ಖರ್ಚಾದ್ರೂ ಪರವಾಗಿಲ್ಲ ಮಗುವನ್ನು ಬದುಕಿಸಿ’ ಎಂದು ಹೇಳಿ, ತಾವೇ 20,000 ರೂ. ಮುಂಗಡ ಹಣ ಪಾವತಿಸಿದರು. ಮಗುವಿಗೆ ತೀವ್ರ ಉಸಿರಾಟದ ತೊಂದರೆ ಇತ್ತು. ಹೀಗಾಗಿ ಚಿಕಿತ್ಸೆಗೆ ಲಕ್ಷಾಂತರ ರೂ. ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದರು.

Advertisement

ಈ ನಡುವೆ ಮಗು ನೋಡಿಕೊಳ್ಳಲು ಸಿಬ್ಬಂದಿಯೊಬ್ಬರನ್ನು ನೇಮಿಸಿದ್ದ ಇನ್ಸ್‌ಪೆಕ್ಟರ್‌, ಪ್ರತಿ ದಿನ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಜತೆಗೆ ಹಣ ಹೊಂದಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಈ ವೇಳೆ ಇನ್ಸ್‌ಪೆಕ್ಟರ್‌ ಶಶಿ ಅವರಿಗೆ ನೆರವಾದ ಆಸ್ಪತ್ರೆ ವೈದ್ಯರು, “ಮಿಲಾಪ್‌’ ಸಂಸ್ಥೆ ಮೂಲಕ ಸಾರ್ವಜನಿಕರಿಂದ 4.5 ಲಕ್ಷ ರೂ. ಹಣ ಸಂಗ್ರಹಿಸಿ, ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿದರು. 

ಪ್ರಸ್ತುತ ಸಂಪೂರ್ಣ ಗುಣಮುಖವಾಗಿರುವ ಮಗುವನ್ನು ದತ್ತು ತೆಗೆದುಕೊಳ್ಳಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ಇನ್ಸ್‌ಪೆಕ್ಟರ್‌ ಶಶಿಧರ್‌ ಅವರು ತೋರಿದ ಸಮಯಪ್ರಜ್ಞೆಯಿಂದ ಒಂದು ಹೆಣ್ಣುಮಗುವಿನ ಜೀವ ಉಳಿದಿದೆ.

ಈಗ ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಅವಕಾಶ ಕೊಟ್ಟರೆ ನಾನೇ ಸಂತೋಷದಿಂದ ಕತರೆದೊಯ್ದು ಬೆಳೆಸಲು ಸಿದ್ಧನಿದ್ದೇನೆ. ಆದರೆ ಕಾನೂನು ಅದಕ್ಕೆ ಅವಕಾಶ ಕೊಡುವುದಿಲ್ಲ. ನನಗೂ ಈಗಾಗಲೇ ಒಬ್ಬ ಮಗಳಿದ್ದಾಳೆ. ನನ್ನ ಕೈ ಸೇರಿದಾಗ ಈ ಹಸುಗೂಸಿನ ಪರಿಸ್ಥಿತಿ ನೋಡಿದರೆ ಭಯವಾಗುತ್ತಿತ್ತು. ಆದರೂ ಹೇಗಾದರೂ ಮಾಡಿ ಬದುಕಿಸಲೇ ಬೇಕು ಎಂದು ದೃಢ ನಿರ್ಧಾರ ಮಾಡಿದ್ದೆ. ಈ ಪ್ರಯತ್ನದಲ್ಲಿ ತುಂಬಾ ಜನ ನನಗೆ ನೆರವಾಗಿದ್ದಾರೆ. ಮಗುವಿನ ಚಿಕಿತ್ಸೆಗೆ ಹಣ ನೀಡಿದ ಎಲ್ಲರಿಗೂ ನಾನು ಆಭಾರಿ.
-ಶಶಿಧರ್‌, ಇನ್ಸ್‌ಪೆಕ್ಟರ್‌

* ಫ‌ಕ್ರುದ್ದೀನ್‌ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next