ಮಹದೇವಪುರ: ಹಾಡ ಹಾಗಲೇ ಪೋಲಿಸರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದು, ವರ್ತೂರು ಪೋಲಿಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಸಿದ್ದಾಪುರ ಗ್ರಾಮದ ನಿವಾಸಿಗಳಾದ ಕುಮಾರ್(30), ಮುರಳಿಮೋಹನ್( 30), ಸಂದೀಪ್(27), ಮೂರ್ತಿ(21) ಬಂಧಿತರು.
ಮಾರತ್ತಹಳ್ಳಿ ವರ್ತೂರು ಮುಖ್ಯರಸ್ತೆಯಲ್ಲಿರುವ ಸಿದ್ದಾಪುರದಲ್ಲಿ ಭಾನುವಾರ ಯುಗಾದಿ ಹಬ್ಬದಂದು ಜೂಜು ಅಡ್ಡೆಗಳ ಮೇಲೆ ಪೋಲಿಸ್ ಪೇದೆಗಳು ದಾಳಿ ನಡೆಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ವೈಟ್‌ಪೀಲ್ಡ್ ಪೋಲಿಸ್ ಠಾಣೆಯ ಪೇದೆಗಳಾದ ಬಸಪ್ಪಗಾಣೆಗಾರ, ಶರಣಬಸಪ್ಪ ಎನ್ನುವರ ಮೇಲೆ ಕೈ ಮಾಡಿದ್ದಾರೆ ಅಲ್ಲದೆ ಸಾರ್ವಜನಿಕರ ಮುಂದೆ ಅವರನ್ನು ಅಟ್ಟಾಡಿಸಿಕೊಂಡು ಹೊಡೆದಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ರಾಜಕೀಯ ಟ್ವಿಸ್ಟ್: ಸಾರ್ವಜನಿಕರ ಮುಂದೆ ಹಾಡಹಾಗಲೇ ಪೋಲಿಸ್ ಪೇದೆಗಳ ಮೇಲೆ ಹಲ್ಲೆ ಮಾಡಿರುವುದು ಬಿಜೆಪಿ ಕಾರ್ಯಕರ್ತನೆಂದು ಹೇಳುವ ಮೂಲಕ ಗೃಹ ಸಚಿವ ರಾಮಲಿಂಗರೆಡ್ಡಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಪೊಲೀಸರ ಮೇಲಿನ ಹಲ್ಲೆ ಖಂಡನೀಯ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲ್ಲಿ.
ಅದರೆ ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಎಳೆದು ತಂದಿರುವುದು ರಾಜಕೀಯ ಪ್ರೇರಿತ. ಕಾಂಗ್ರೆಸ್ ಪಕ್ಷದಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿರುವ ಕಾರ್ಯಕರ್ತರು ಹಲ್ಲೆ ಮಾಡಿರುವ ಪ್ರಕರಣಗಳು ಕಣ್ಣ ಮುಂದಿವೆ. ಇದನ್ನು ತಿಳಿಯದೆ ಗೃಹ ಸಚಿವರು ಬಿಜೆಪಿಗೆ ಧಕ್ಕೆ ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅನುಮಾನ: ವೈಟ್‌ಪೀಲ್ಡ್ ಪೋಲಿಸ್ ಠಾಣೆಯ ಪೇದೆಗಳು ವರ್ತೂರು ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ಸಿದ್ದಾಪುರಕ್ಕೆ ಯಾತಕ್ಕಾಗಿ ಹೋಗಿದ್ದರು? ಇದರ ಹಿಂದೆ ಯಾರಿದ್ದಾರೆ ? ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ.