ಬೆಂಗಳೂರು: ಅವಧಿ ಮೀರಿದ ಬಳಿಕವೂ ಜೆಟ್‌ಲಾಗ್ ಪಬ್‌ನಲ್ಲಿ ಕಾಟೇರ ಸಿನಿಮಾ ತಂಡ ಪಾರ್ಟಿ ಮಾಡಿದ ಪ್ರಕರಣದಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪೊಲೀಸರ ವಿರುದ್ಧ ನೀಡಿದ್ದ ಹೇಳಿಕೆ ಬೆನ್ನಲ್ಲೇ ನಗರ ಪೊಲೀಸರು ಪಬ್‌ನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿದ್ದು, ಈ ವೇಳೆ ಎರಡು ಬಾರಿ ಪೊಲೀಸರು ಪಬ್‌ಗ ಬಂದು ಮುಚ್ಚುವಂತೆ ಎಚ್ಚರಿಕೆ ನೀಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸುಬ್ರಹ್ಮಣ್ಯನಗರ ಠಾಣೆಗೆ ವಿಚಾರಣೆಗೆ ಬಂದು ಬಳಿಕ ಚಿತ್ರತಂಡದ ಪರ ಮಾತನಾಡಿದ್ದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಪಬ್ ಮುಚ್ಚುವ ಸಂದರ್ಭದಲ್ಲಿ ನಾವು ಮನವಿ ಮಾಡಿಕೊಂಡು ಊಟದ ವ್ಯವಸ್ಥೆ ಮಾಡಿದ್ದು ನಿಜ. ಆದರೆ, ಮದ್ಯಪಾನ ಮಾಡಿರಲಿಲ್ಲ. ಜತೆಗೆ ಯಾವ ಪೊಲೀಸರೂ ಸಹ ನಮ್ಮ ಬಳಿ ಬಂದು ಪಬ್ ಮುಚ್ಚುವಂತೆ ಸೂಚನೆ ನೀಡಿರಲಿಲ್ಲ ಎಂದು ಪೊಲೀಸರ ವಿರುದ್ಧವೇ ಆರೋಪಿಸಿದ್ದರು. ಆದರೆ, ಪಾರ್ಟಿ ಆಯೋಜನೆಯಾಗಿದ್ದ ಜ.3ರಂದು ರಾತ್ರಿ ಎರಡು ಬಾರಿ ಪೊಲೀಸರು ಜೆಟ್ ಲಾಗ್ ಪಬ್‌ಗ ಭೇಟಿ ನೀಡಿರುವುದು ಅಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳಿಂದ ಬಹಿರಂಗವಾಗಿದೆ.
ಜ.3ರ ರಾತ್ರಿ 12:40 ರಿಂದ ಜ.4ರ ಮುಂಜಾನೆ 3.30ರ ನಡುವೆ ಎರಡು ಬಾರಿ ಪೊಲೀಸರು ಜೆಟ್‌ಲಾಗ್ ಪಬ್‌ಗ ಭೇಟಿ ನೀಡಿರುವ ದೃಶ್ಯಗಳು ಪಬ್‌ನ ಸಿಸಿ ಕ್ಯಾಮೆ ರಾಗಳಲ್ಲಿ ಸೆರೆಯಾಗಿದೆ. ಸುಬ್ರಹ್ಮಣ್ಯ ನಗರ ಪೊಲೀಸರು ದಾಖಲಿಸಿಕೊಂಡಿರುವ ಎಫ್ ಐಆರ್‌ನಲ್ಲಿ ಉಲ್ಲೇಖೀಸಿರುವಂತೆ 12:49ಕ್ಕೆ ಸ್ಥಳಕ್ಕೆ ತೆರಳಿದ್ದ ಪೊಲೀಸರು ಗ್ರಾಹಕರನ್ನು ಹೊರಗಡೆ ಕಳಿಸಿ ಪಬ್ ಮುಚ್ಚಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಚಿತ್ರ ತಂಡದ ಕುರಿತು ಪ್ರಶ್ನಿಸಿದಾಗ “ಸಿನಿಮಾ ಮೀಟಿಂಗ್ ನಡೆಸುತ್ತಿದ್ದಾರೆ. 20 ನಿಮಿಷಗಳ ಬಳಿಕ ಎಲ್ಲರೂ ಹೋಗುತ್ತಾರೆ. ಬಾರ್ ಕೌಂಟರ್ ಕ್ಲೋಸ್ ಮಾಡಲಾಗಿದೆ.’ ಎಂದು ಪಬ್ ಸಿಬ್ಬಂದಿ ಪೊಲೀಸರಿಗೆ ಸಮಾಜಾಯಿಸಿ ನೀಡಿದ್ದಾರೆ.
ಹೀಗಾಗಿ, ಪಬ್ ಗೇಟ್ ಮುಚ್ಚಿಸಿದ್ದ ಪೊಲೀಸರು ಅಲ್ಲಿಂದ ಗಸ್ತು ಕರ್ತವ್ಯಕ್ಕೆ ತೆರಳಿದ್ದಾರೆ. ನಂತರ ರಾತ್ರಿ 2:51ರ ಸುಮಾರಿಗೆ ವಾಪಾಸ್ ಪಬ್ ಬಳಿ ಬಂದಾಗ ಹೊರಗಡೆ ಜನ ಸೇರಿರುವುದನ್ನು ಕಂಡ ಪೊಲೀಸರು, ಸಾರ್ವಜನಿಕರನ್ನು ಕಳುಹಿಸಿ ಪಬ್ ಒಳಗೆ ಪ್ರವೇಶಿಸಿದ್ದಾರೆ. ನಂತರ ಪಬ್ ಮುಚ್ಚಿಸಿ ಅದರ ಮಾಲೀಕರಾದ ಶಶಿರೇಖಾ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ಧ ಪೊಲೀಸ್ ನಿಯಮ ಉಲ್ಲಂಘನೆ ಹಾಗೂ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಪೊಲೀಸರ ವಿಚಾರಣೆ ಬಳಿಕ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಪೊಲೀಸರು ಸ್ಥಳಕ್ಕೆ ಬಂದಿಲ್ಲ, ಪಬ್ ಮುಚ್ಚುವಂತೆಯೂ ಹೇಳಲಿಲ್ಲ ಎಂದು ಉತ್ತರಿಸಿದ್ದರು.