ಉಡುಪಿ/ ಪಡುಬಿದ್ರಿ: ಮಂಗಳೂರು ಕಡೆಯಿಂದ ಬಂದಿದ್ದ ಆ್ಯಂಬುಲೆನ್ಸ್‌ನಲ್ಲಿದ್ದ ನಾಲ್ವರು ಶಂಕಿತ ರೋಗಿಗಳನ್ನು ಸಂಶಯಾಸ್ಪದ ರೀತಿಯಲ್ಲಿ ಇನ್ನೊಂದು ಆ್ಯಂಬುಲೆನ್ಸ್‌ಗೆ ವರ್ಗಾಯಿಸಿ ಉಡುಪಿಯತ್ತ ಸಾಗಹಾಕಲು ಯತ್ನಿಸಿದ ಘಟನೆ ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಮೇ 5ರ ರಾತ್ರಿ ನಡೆದಿದೆ.
ಮಂಗಳೂರು ಕಡೆಯಿಂದ ಬಂದ ಆ್ಯಂಬುಲೆನ್ಸ್ ಚಾಲಕ ಚೆಕ್‌ಪೋಸ್ಟ್ ನಲ್ಲಿ ವಾಹನ ಸಂಖ್ಯೆ ನೋಂದಾಯಿಸಿ ಉಡುಪಿಗೆಂದು ದಾಖಲಿಸಿದ್ದ, ಎಲ್ಲ ಔಪಚಾರಿಕ ಕ್ರಮಗಳನ್ನು ಮುಗಿಸಿ ಮುಂದಕ್ಕೆ ಬಿಡಲಾಗಿತ್ತು. ಉಡುಪಿಯತ್ತ ಹೆದ್ದಾರಿಯಲ್ಲಿ ಸುಮಾರು 100 ಮೀಟರ್ ಸಾಗಿದ ಬಳಿಕ ಅದಾ
ಗಲೇ ಉಡುಪಿಯ ಕೋವಿಡ್ -19 ಆಸ್ಪತ್ರೆಯಿಂದ ಬಂದು ನಿಂತಿದ್ದ ಆ್ಯಂಬುಲೆನ್ಸ್‌ಗೆ ರೋಗಿಗಳನ್ನು ವರ್ಗಾಯಿಸಲಾಯಿತು. ಇದನ್ನು ಕಂಡು ಚೆಕ್ ಪೋಸ್ಟ್ ಸಿಬಂದಿ ಅರುಣ್ ಕುಮಾರ್ ಪ್ರಶ್ನಿಸಿದ್ದರು ಎನ್ನಲಾಗಿದೆ. ಆಗ ಆ್ಯಂಬುಲೆನ್ಸ್ ಸಿಬಂದಿ ಅವರ ಗುರುತುಪತ್ರ ತೋರಿಸುವಂತೆ ಸೂಚಿಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ.ಅನಂತರ ಚೆಕ್‌ಪೋಸ್ಟ್ ಸಿಬಂದಿ ಜಿಲ್ಲಾಧಿಕಾರಿಗಳ ಆದೇಶ ಪತ್ರ ನೀಡುವಂತೆ ಸೂಚಿಸಿದರು ಎನ್ನಲಾಗಿದೆ.
ಈ ವೇಳೆ ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಆ್ಯಂಬುಲೆನ್ಸ್‌ನವರ ಬಳಿ ಯಾವುದೇ ಅಧಿಕೃತ ಅನುಮತಿ ಪತ್ರಗಳು ಇಲ್ಲವೆಂಬ ಕಾರಣಕ್ಕೆರೋಗಿಗಳನ್ನು ಮೊದಲಿನ ಆ್ಯಂಬುಲೆನ್ಸ್‌ಗೆ ವರ್ಗಾಯಿಸಿ ಮಂಗಳೂರಿನತ್ತ ಮರಳುವಂತೆ ಸೂಚಿಸಿದರು.ಮೂಲತಃ ಉಡುಪಿ ಜಿಲ್ಲೆಯವರಾಗಿದ್ದ ರೋಗಿಗಳು ಮಂಗಳೂರಿನಲ್ಲಿ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿ ಕ್ವಾರಂಟೈನ್‌ಗಾಗಿ ಉಡುಪಿ ಜಿಲ್ಲೆಯ ಉದ್ಯಾವರದ ಆಸ್ಪತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ತುರ್ತು ಸೇವೆಗಳಿದ್ದರೆ ಮಾತ್ರ ಮಂಗಳೂರಿನ ಆ್ಯಂಬುಲೆನ್ಸ್ ಉಡುಪಿಗೆ ಬರುತ್ತದೆ. ಆದರೆ ಇದು ಕ್ವಾರಂಟೈನ್ ಮುಗಿದಿದ್ದ ಕಾರಣ ಇನ್ನೊಂದು ಆ್ಯಂಬುಲೆನ್ಸ್‌ಗೆ ಶಿಫ್ಟ್ ಮಾಡಲಾಗುತ್ತಿತ್ತು. ಎಲ್ಲ ವೈದ್ಯಕೀಯ ದಾಖಲೆಗಳೂ ಇದ್ದವು. ಆದರೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅವರನ್ನು ಸ್ಥಳಾಂತರ ಮಾಡಲಾಗಲಿಲ್ಲ ಎನ್ನುತ್ತಾರೆ ಆ್ಯಂಬುಲೆನ್ಸ್ ಚಾಲಕರು.