ಚಿಕ್ಕಮಗಳೂರು: ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮುಜಾಮಿಲ್‌ಗೆ ನಗರದಲ್ಲಿ ಕರ್ತವ್ಯ ನಿರ್ವಹಿಸಿ ಮಂಗಳೂರಿಗೆ ವರ್ಗಾವಣೆಗೊಂಡಿರುವ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಅಯ್ಯಪ್ಪನಗರದಲ್ಲಿ ಬಾಡಿಗೆ ಮನೆ ನೀಡುವಂತೆ ಮನೆ ಮಾಲಕರಿಗೆ ಶಿಫಾರಸು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:Liquor Policy Case: ಕೇಜ್ರಿವಾಲ್ಗೆ 15 ದಿನ ನ್ಯಾಯಾಂಗ ಬಂಧನ, ತಿಹಾರ್ ಜೈಲಿಗೆ ಶಿಫ್ಟ್
ಎರಡು ವರ್ಷಗಳ ಹಿಂದೆ ಅಯ್ಯಪ್ಪ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ ಮುಜಾಮಿಲ್‌ಗೆ ಬಾಡಿಗೆ ಮನೆ ನೀಡುವಂತೆ ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಮನೆ ಮಾಲಕನಿಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.
ಇಲ್ಲಿ ಮುಜಾಮಿಲ್ ತಾಯಿ ಮತ್ತು ತಂಗಿ ವಾಸವಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ಮುಜಾಮಿಲ್ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ತನಿಖಾಧಿಕಾರಿಗಳು ಈ ಸಂಬಂಧ ಆರೋಪಿ ಪಡೆದಿದ್ದ ಬಾಡಿಗೆ ಮನೆಗೆ ಭೇಟಿ ನೀಡಿದ್ದರು.
ಆದರೆ ಸದ್ಯ ಮನೆ ಖಾಲಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇಡೀ ಬೆಳವಣಿಗೆ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮುಜಾಮಿಲ್ ಸಂಬಂಧಿಯೊಬ್ಬರು ಚಿಕ್ಕಮಗಳೂರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಮುಜಾಮಿಲ್ ಪೊಲೀಸ್ ಇಲಾಖೆ ಜತೆಗೆ ಸಂಪರ್ಕ ಹೊಂದಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.