Advertisement

ಶಾಂತಿಪಾಲನೆಗಾಗಿ ಸಜ್ಜಾಗಿ ನಿಂತಿತ್ತು ಪೊಲೀಸರ ಪಡೆ

12:00 PM Sep 06, 2017 | Team Udayavani |

ಬೆಂಗಳೂರು: ಅನುಮತಿ ನಿರಾಕಾರಣೆಯ ನಡುವೆಯೂ ಬಿಜೆಪಿ ಮುಖಂಡರು ನಗರದಲ್ಲಿ ನಡೆಸಿದ ರ್ಯಾಲಿ ತಡೆಯಲು ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪಶಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಡಾ ಚಂದ್ರಗುಪ್ತಾ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿತ್ತು.

Advertisement

ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನಿಯಮ ಮೀರಿ ಪ್ರತಿಭಟನೆ ನಡೆಸುತ್ತಿದ್ದೀರಿ, ರ್ಯಾಲಿ ಸ್ಥಗಿತಗೊಳಿಸುವಂತೆ ಮನವಿ ಮಾಡಲಾಗಿತ್ತು. ಆದರೂ ಮುಖಂಡರು, ಕಾರ್ಯಕರ್ತರು ಬೈಕ್‌ ಸ್ಟಾರ್ಟ್‌ ಮಾಡಿದರು. ಈ ವೇಳೆ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ಬಂಧಿಸಿದ್ದರು.

ಜತೆಗೆ ಬೈಕ್‌ಗಳನ್ನು ಕೊಂಡೊಯ್ಯಲು ಹೈಗ್ರೌಂಡ್ಸ್‌ ಸಂಚಾರ ಠಾಣೆ ವ್ಯಾಪ್ತಿಯ 10ಕ್ಕೂ ಅಧಿಕ ಟೋಯಿಂಗ್‌ ವಾಹನಗಳನ್ನು ನಿಯೋಜಿಸಲಾಗಿತ್ತು. ಅದರಂತೆ ಸಿಬ್ಬಂದಿ ಸುಮಾರು 40 ಬೈಕ್‌ಗಳನ್ನು ಟೋಯಿಂಗ್‌ ಮಾಡಿ, ಫ್ರೀಡಂ ಪಾರ್ಕ್‌ ಬಳಿಯೇ ಪಾರ್ಕಿಂಗ್‌ ಮಾಡಲಾಗಿತ್ತು. ಬಳಿಕ ದಾಖಲೆಗಳನ್ನು ಪರಿಶೀಲಿಸಿ ಬಿಡುಗಡೆ ಮಾಡಲಾಯಿತು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಆರ್‌ಎಎಫ್ ಮತ್ತು ಜಲಫಿರಂಗಿ 
ಸಾವಿರಾರು ಬಿಜೆಪಿ ಕಾರ್ಯತರ್ತರು ರ್ಯಾಲಿಯಲ್ಲಿ ಭಾಗವಹಿಸುವ ಮಾಹಿತಿ ಪಡೆದಿದ್ದ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ತಮಿಳುನಾಡಿನ ಕೊಯಿಮತ್ತೂರಿನಿಂದ ಒಂದು ಆರ್‌ಎಎಫ್(ಕ್ಷಿಪ್ರ ಕಾರ್ಯ ಪಡೆ) ತುಕಡಿ ಹಾಗೂ ಜಲಫಿರಂಗಿ(ಅಶ್ರುವಾಯು) ವಾಹನವನ್ನು ನಿಯೋಜಿಸಿದ್ದರು. ಒಂದು ವೇಳೆ ಎಚ್ಚರಿಕೆಯ ಮಧ್ಯೆಯೂ ರ್ಯಾಲಿ ಮುಂದುವರಿಸಿದರೆ ಕಾರ್ಯಕರ್ತರನ್ನು ಬಂಧಿಸಲು ಮೊದಲೇ ಸುಮಾರು 10ಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳನ್ನು ಫ್ರೀಡಂ ಪಾರ್ಕ್‌ ಬಳಿ ತಂದು ನಿಲ್ಲಿಸಿಕೊಳ್ಳಲಾಗಿತ್ತು. ಜತೆಗೆ ಎಲ್ಲಿಯೂ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗದ್ದಂತೆ ಸಂಚಾರ ಪೊಲೀಸರು ನಿರ್ವಹಿಸಿದರು.

ಇದಕ್ಕೂ ಮೊದಲು ಕೋಮು ಗಲಭೆ ಸೃಷ್ಟಿಸುವ ವ್ಯಕ್ತಿಗಳ ಮೇಲೆ ನಿಗಾವಹಿಸಿದ್ದ ಅಧಿಕಾರಿಗಳು, ಸುಮಾರು 100ಕ್ಕೂ ಅಧಿಕ ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿದ್ದರು. ಇದರೊಂದಿಗೆ ಹಲಸೂರು, ಎಲೆಕ್ಟ್ರಾನಿಕ್‌ ಸಿಟಿ, ಎಚ್‌ಎಸ್‌ಆರ್‌ ಲೇಔಟ್‌, ದೊಬ್ಬಲೂರು, ಯಲಹಂಕ, ಕೆಂಗೇರಿ, ರಾಜಾಜಿನಗರ ಸೇರಿದಂತೆ ನಗರದ ಎಲ್ಲೆಡೆ ರ್ಯಾಲಿಗೆ ಸಜ್ಜಾಗಿದ್ದ ಕಾರ್ಯಕರ್ತರನ್ನು ಅಲ್ಲಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಪೊಲೀಸರ ಮೇಲೆ ಹಲ್ಲೆ ಮಾಡಿದ ಬಿಜೆಪಿಗರು 
ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ವೇಳೆ ಪಶಿrಮ ವಿಭಾಗದ ಡಿಸಿಪಿ ಅನುಚೇತ್‌ ಅವರ ಬಟ್ಟೆ ಎಳೆದಾಡಿದ ದೃಶ್ಯ ಕಂಡು ಬಂತು. ಈ ವೇಳೆ ಕೆಲ ಕಾರ್ಯಕರ್ತರು ಅವರ ಸಮವಸ್ತ್ರದ ಮೇಲೆ ಕೈ ಹಾಕಿ ಅವರ ನಾಮ ಫ‌ಲಕಗಳನ್ನು ಕಿತ್ತರು. ಇದೇ ವೇಳೆ ಒಬ್ಬ ಪೊಲೀಸ್‌ ಪೇದೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ರ್ಯಾಲಿ ನಡೆಸುವ ವಿಚಾರವಾಗಿ ಆಯೋಜಕರಿಂದ ಕೆಲ ಮಾಹಿತಿಗಳನ್ನು ಪೊಲೀಸರು ಕೇಳಿದ್ದರು. ಆದರೆ, ಆಯೋಜಕರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ರ್ಯಾಲಿಗೆ ಅನುಮತಿ ನೀಡಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ 40 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ನಗರಾದ್ಯಂತ 15 ಸಾವಿರ ಪೊಲೀಸರ ನಿಯೋಜಿಸಲಾಗಿತ್ತು. ಗುಂಪು-ಗುಂಪಾಗಿ ಬೈಕ್‌ ಚಲಾಯಿಸುವವರ ಮೇಲೆ ನಿಗಾವಹಿಸಲಾಗಿತ್ತು. ಒಟ್ಟಾರೆ ನಗರದ ಯಾವುದೇ ಕಡೆ ಬೈಕ್‌ ರ್ಯಾಲಿಗೆ ಅವಕಾಶ ನೀಡಿಲ್ಲ.
-ಟಿ.ಸುನೀಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next