ಚಿಕ್ಕಮಗಳೂರು: ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿಯಲು ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ನಗರದಲ್ಲಿ ಹಗಲಿರುಳೆನ್ನದೇ ದನಗಳ ಓಡಾಟದಿಂದ ಸಾಕಷ್ಟು ವಾಹನಗಳು ಅಪಘಾತವಾಗುತ್ತಿದ್ದು, ಈ ಹಿನ್ನೆಲೆ ಖುದ್ದು ಎಸ್.ಪಿ ವಿಕ್ರಮ್ ಅಮಟೆ ರಸ್ತೆಗಿಳಿದು ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯಚರಣೆಯಲ್ಲಿ ಪಾಲ್ಗೊಂಡರು.
ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್, ಕೆ.ಎಂ.ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಒಟ್ಟು 4 ಹಸುಗಳನ್ನು ಹಿಡಿದು ಗೋಶಾಲೆಗೆ ಬಿಡಲಾಗಿದೆ. ರಸ್ತೆಯಲ್ಲಿ ಹಸು ಅಡ್ಡ ಬಂದ ಕಾರಣ ಇಬ್ಬರ ಸಾವು ಸಂಭವಿಸಿದ್ದು, 60ಕ್ಕೂ ಹೆಚ್ಚು ಬೈಕ್ ಸವಾರರು ಬೈಕಿನಿಂದ ಬಿದ್ದ ಘಟನೆಯೂ ನಡೆದಿತ್ತು.
ಪೊಲೀಸರ ಜೊತೆ ಅಗ್ನಿಶಾಮಕ ದಳ, ಪಶುಸಂಗೋಪನೆ ಇಲಾಖೆ ಸಾಥ್ ನೀಡಿತ್ತು. ದಂಡ ಕಟ್ಟಿ ದನಗಳನ್ನು ಬಿಡಿಸಿಕೊಂಡು ಹೋಗಲು ಮಾಲೀಕರಿಗೆ ಸೂಚನೆ ನೀಡಲಾಗಿದ್ದು, ಇನ್ನು ಮುಂದೆ ಹಸುಗಳನ್ನು ರಸ್ತೆಗೆ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ.
ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಹತ್ತಾರು ಸಿಬ್ಬಂದಿಗಳು ಭಾಗಿ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.