ಕಲಬುರಗಿ: ಕಳೆದ ವಾರ ನಗರದಲ್ಲಿ ನಡೆದ ಕೊಲೆ ಯತ್ನ ಪ್ರಕರಣವೊಂದರ ಆರೋಪಿಯೊಬ್ಬ ಪೊಲೀಸ್ ಮುಖ್ಯ ಪೇದೆ ಹಾಗೂ ವಾಹನದ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ನಗರದ ಹೊರ ವಲಯ ಕಾರಭೋಸಗಾದಲ್ಲಿ ನಡೆದಿದೆ.
ರೌಡಿಶೀಟರ್ ವಿಕ್ರಂದಾಸ್ ಮೂಲಿಮನಿ (24) ಎಂಬಾತ ಡಿಸಿಆರ್‌ಬಿ ಮುಖ್ಯಪೇದೆ ಅಂಬಾದಾಸ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಪೊಲೀಸರು ಮೊದಲು ಗಾಳಿಯಲ್ಲಿ, ಬಳಿಕ ರೌಡಿಶೀಟರ್ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿ ಕಾಲಿಗೆ ಗಾಯವಾಗಿದ್ದು, ವಿಕ್ರಂದಾಸ್ ನನ್ನು ಜಿಲ್ಲಾಸ್ಪತ್ರೆಗೆ ಹಾಗೂ ಗಾಯಾಳು ಮುಖ್ಯಪೇದೆ ಅಂಬಾದಾಸ್ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾರಕಾಸ್ತ್ರ ತೋರಿಸುವ ನೆಪದಲ್ಲಿ ದಾಳಿ: ಕಳೆದ ವಾರ ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪ್ಲೆಕ್ಸ್ ಹತ್ತಿರ ಶ್ರೀಕಾಂತ ರೆಡ್ಡಿ ಹತ್ಯೆಗೆ ಯತ್ನ ನಡೆದಿತ್ತು. ಈ ಸಂಬಂಧ ಪ್ರಮುಖ ಆರೋಪಿ ಚಿತ್ತಾಪುರ ತಾಲೂಕಿನ ಮಾಲಗತ್ತಿ ನಿವಾಸಿ, ರೌಡಿಶಿಟರ್ ವಿಕ್ರಮದಾಸ್ ಮೂಲಿಮನಿ, ರಘು ಸಾಗರ್, ಮಲ್ಲಿಕಾರ್ಜುನ ಶಿವಾನಂದ ಬಡಿಗೇರ (ಕರಿಚಿರತಾ), ಶಿವರಾಜ್ ಚಂದ್ರಕಾಂತ ಬಡಿಗೇರ ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ಕೆರೆಭೋಸಗಾದ ಅಡಗುತಾಣದಲ್ಲಿ ಮಾರಕಾಸ್ತ್ರಗಳನ್ನು ಇಟ್ಟಿದ್ದಾಗಿ ತಿಳಿಸಿದ್ದರಿಂದ ರೌಡಿಶೀಟರ್ ವಿಕ್ರಮದಾಸ್ ಮೂಲಿಮನಿಯನ್ನು ಪೊಲೀಸರು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಕೂಡಿಟ್ಟಿರುವ ಮಾರಕಾಸ್ತ್ರಗಳನ್ನು ತೋರಿಸಿದ ವಿಕ್ರಂ, ಒಂದು ಖಡ್ಗದಿಂದ ಮುಖ್ಯಪೇದೆಯ ಎಡಗೈ ಮೇಲೆ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.
ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗುವಂತೆ ಪೊಲೀಸರು ಸೂಚಿಸಿದರೂ ಸ್ಪಂದಿಸದೇ ಇದ್ದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ. ಗ್ರಾಮೀಣ ಡಿಎಸ್‌ಪಿ ಎಸ್.ಎಸ್. ಹುಲ್ಲೂರ್ ಅವರ ನೇತೃತ್ವದಲ್ಲಿ ಸಿಪಿಐ ಕಪಿಲದೇವ್, ಪಿಎಸ್‌ಐ ಚಂದ್ರಶೇಖರ್ ತಿಗಡಿ, ಸಿಬ್ಬಂದಿ ಕಮಾಂಡೋ ಶಿವಪ್ಪ, ಆನಂದ, ಪುಂಡಲೀಕ ಮತ್ತು ಮುಖ್ಯ ಪೇದೆ ಅಂಬಾದಾಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆಸ್ಪತ್ರೆಗೆ ಭೇಟಿ: ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕಕುಮಾರ, ಎಸ್ಪಿ ಎನ್. ಶಶಿಕುಮಾರ ಹಾಗೂ ಅಂಬಾದಾಸ್ ಕುಟುಂಬಸ್ಥರು ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಆರೋಗ್ಯ ವಿಚಾರಿಸಿದರು.