ಗಂಗಾವತಿ: ನಗರದ ಸತ್ಯನಾರಾಯಣ ಪೇಟೆಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನು ನಗರ ಠಾಣೆಯ ಪೊಲೀಸರು 5 ಗಂಟೆಯೊಳಗೆ ಭೇದಿಸಿ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.
ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ವಹೇದ್ ಶೇಖ್ ಎನ್ನುವರು ನಿವಾಸದಲ್ಲಿ ಸುಮಾರು 5 ಲಕ್ಷ ಬೆಲೆ ಬಾಳುವ 10 ತೊಲೆ ಚಿನ್ನವನ್ನು ಕಳ್ಳರು ಕದ್ದು ಪರಾರಿಯಾಗಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ನಗರ ಪೊಲೀಸರು 5 ಗಂಟೆಯೊಳಗೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಕಳ್ಳರನ್ನು ಬಂಧಿಸಲು ಎಸ್ಪಿ ಯಶೋಧ ಒಂಟಿಗೋಡು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಹಾಗೂ ಪಿಐ ಅಡಿವೇಶ ಗುದಿಗೊಪ್ಪ ನೇತೃತತ್ವದಲ್ಲಿ ತಂಡ ರಚಿಸಿಕೊಂಡು ತನಿಖೆಯ ಮೂಲಕ ಇಬ್ಬರು ಚಿನ್ನ ಕದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ಆರೋಪದಲ್ಲಿ ಫರಹಬಾನು ಹುಸೇನ್ ಸಾಬ ಇಸ್ಲಾಂಪೂರು ಮತ್ತು ಟಿಪ್ಪುಸುಲ್ತಾನ ಮೌಲಾಸಾಬ ಮಾನ್ವಿ ಎಂಬ ಆರೋಪಿಗಳನ್ನು ಬಂಧಿಸಿ ಅವರಿಂದ ಚಿನ್ನಾಭರಣ,ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ,
ಪೊಲೀಸ್ ಸಿಬಂದಿಗಳಾದ ವಿಶ್ವನಾಥ, ಚಿರಂಜೀವಿ, ಮರಿಶಾಂತಗೌಡ,ಸುಭಾಷ್, ರಾಘವೇಂದ್ರ, ಮೈಲಾರಪ್ಪ,ಪರಸಪ್ಪ, ಹಾಗೂ ವಾಹನ ಚಾಲಕ ಶಿವಕುಮಾರ್ ತನಿಖಾ ತಂಡದಲ್ಲಿದ್ದರು.