ಆವತ್ತೇ ಮೊದಲ ಬಾರಿ ನಾನು ಪಿಸ್ತೂಲ್ ನೋಡಿದ್ದು. ಊರಲ್ಲಿ ದೊಡ್ಡ ಗಲಾಟೆಯಾಗಿತ್ತು. ನಮ್ಮ ಮನೆಯ ಎಲ್ಲಾ ಬೀದಿಗಳನ್ನು ಬಂದ್ ಮಾಡಿದ್ದರು. ಆಗ, ಕಪ್ಪು ಕನ್ನಡಕ ಹಾಕಿಕೊಂಡು ಬಂದಿದ್ದ ಪೊಲೀಸ್ ಅಧಿಕಾರಿಯ ಸೊಂಟದಲ್ಲಿ, ಪಿಸ್ತೂಲ್ ಕಂಡಿತ್ತು. ಅಂದಿನಿಂದಲೇ ನನಗೆ ಪಿಸ್ತೂಲ್ ಮೇಲೆ ಮೋಹ ಶುರುವಾಯಿತು. ಬೇರೆ ಊರಿಗೆ, ಜಾತ್ರೆಗೆ ಹೋದರೂ, ನನಗೆ ಪಿಸ್ತೂಲ್ ಬೇಕು ಎಂದು ಕೇಳಿ ತೆಗೆಸಿಕೊಳ್ಳುತ್ತಿದ್ದೆ.
ಮುಂದೆ, ಇನ್ಸ್‌ಪೆಕ್ಟರ್ ಆಗಬೇಕು ಅನ್ನಿಸಿದಾಗ, ಆ ಹುದ್ದೆಗೆ ಹೋಗಲು ಏನೇನೆಲ್ಲಾ ಓದಬೇಕು ಅಂತ ನಮ್ಮ ಮೇಷ್ಟ್ರ ಬಳಿ ಕೇಳಿ ತಿಳಿದುಕೊಂಡೆ. ಅಪ್ಪನಿಗೆ, ನಾನು ಲಾಯರ್ ಅಥವಾ ಅಕೌಂಟೆಂಟ್ ಆಗಬೇಕು ಅನ್ನೋ ಆಸೆ ಇತ್ತು. ಇದಕ್ಕಾಗಿ, ಅವರು ಪಿಯುಸಿಯಲ್ಲಿ ಕಾಮರ್ಸ್‌ಗೆ ಸೇರಿಸಿದ್ದರು. ಆದರೆ, ನನಗೆ ಲಾಯರ್ ಆಗಲು ಸುತಾರಾಂ ಇಷ್ಟವಿರಲಿಲ್ಲ. ಇನ್ಸ್‌ಪೆಕ್ಟರ್ ಆಗಬೇಕು ಅನ್ನುವುದಷ್ಟೇ ಮನಸಲ್ಲಿ ಇತ್ತು. ಅಪ್ಪನದು ದಿನಸಿ ಅಂಗಡಿ ಇತ್ತು.
ಡಿಗ್ರಿಯಲ್ಲಿ ಏಕೋ ಓದು ರುಚಿಸಲಿಲ್ಲ. ಡಿಗ್ರಿ ಇಲ್ಲದಿದ್ದರೆ, ಪಿಯುಸಿಯ ಆಧಾರದ ಮೇಲೆ, ಪೊಲೀಸ್ ಪೇದೆ ಆಗಬಹುದು. ಇನ್ಸ್‌ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆಯುವ ಹೊತ್ತಿಗೆ ವಯಸ್ಸಾಗಿರುತ್ತದೆ ಅನ್ನಿಸಿದಾಗ, ಇನ್ಸ್‌ಪೆಕ್ಟರ್ ಆಗುವ ಯೋಚನೆಯನ್ನೇ ಕೈ ಬಿಟ್ಟೆ. ದಿನಸಿ ಅಂಗಡಿಯಲ್ಲಿ, ಅಪ್ಪನಿಗೆ ಸಹಾಯ ಮಾಡಲು ನಿಂತೆ. ತಿಂಡಿಗೆ, ಊಟಕ್ಕೆ, ವಿಶ್ರಾಂತಿಗೆ ಅಂತ ತಂದೆಯವರು ಮನೆಗೆ ಹೋದಾಗ, ನಾನೇ ಗಲ್ಲಾ ಮೇಲೆ ಕೂರುತ್ತಿದ್ದೆ.
ಮಗ ಕಾಮರ್ಸ್ ಓದುತ್ತಿದ್ದವನು. ಅವನಿಗೆ ಚೆನ್ನಾಗಿ ಲೆಕ್ಕ ಗೊತ್ತಿದೆ ಎಂಬ ನಂಬಿಕೆ ಅಪ್ಪನಿಗಿತ್ತು. ಎದೆಯೊಳಗೇ ಉಳಿದುಹೋದ ಆಸೆಯ ಬಗ್ಗೆ ನಾನು ಯಾವತ್ತೂ ಅಪ್ಪನಿಗೆ ಹೇಳಲಿಲ್ಲ. ಕಡೆಗೆ ಒಂದು ದಿನ, ಇದು ಹೇಗೋ ಅಪ್ಪನಿಗೆ ತಿಳಿದುಹೋಯಿತು. ಅಂಗಡಿಯ ಬಾಗಿಲು ಮುಚ್ಚಿ, ನನಗೆ ಚೆನ್ನಾಗಿ ಬೈದರು. “ಇನ್ಸ್‌ಪೆಕ್ಟರ್ ಆಗಬೇಕು ಅಂತಿದ್ದರೆ ಶ್ರದ್ಧೆಯಿಂದ ಓದು. ಒಂದೇ ನಿರ್ಧಾರವನ್ನು ಮನಸಲ್ಲಿ ಇಟ್ಟುಕೊಂಡು ಗುರಿ ಸಾಧನೆಗೆ ಹೊರಡು. ಈಗ ಓದಲು ಮರೆತು, ಮುಂದೆ ಯಾವತ್ತೋ ಆ ಬಗ್ಗೆ ಪಶ್ಚಾತ್ತಾಪ ಪಟ್ಟರೆ ಪ್ರಯೋಜನವಿಲ್ಲ’ ಎಂದರು.
ಅವರ ಬುದಿಟಛಿಮಾತು ಮನಸ್ಸಿಗೆ ನಾಟಿತು. ಅವತ್ತಿಂದಲೇ ಕುಳಿತು ಓದಿದೆ. ಸಬ್ ಇನ್ಸ್‌ಪೆ³ಕ್ಟರ್ ಹುದ್ದೆಗೆ ಪರೀಕ್ಷೆ ಬರೆದು. ಎರಡು ಸಲ ಫೇಲ್ ಆದೆ. ಮತ್ತೆ ಅಪ್ಪನ ಜೊತೆ ಅಂಗಡಿ ಸೇರಿಕೊಂಡೆ. ಅಲ್ಲೇ ಬಿಡುವಿನ ವೇಳೆಯಲ್ಲಿ ಮತ್ತೆ ಪರೀಕ್ಷೆಗೆ ಓದಿಕೊಂಡು, ಮತ್ತೆ ಬರೆದೆ. ಪಾಸಾಯಿತು. ಈಗ ಅಪ್ಪ ಇಲ್ಲ. ಆದರೆ, ಗುರಿ ತಲುಪಬೇಕಾದರೆ ಏನು ಮಾಡಬೇಕು ಎಂದು ಅವರು ಹೇಳಿದ್ದ ಮಾತುಗಳು ನನ್ನ ಮನದಲ್ಲಿಯೇ ಉಳಿದುಕೊಂಡಿವೆ.