Advertisement

ಸುಖ ನಿದ್ರೆಯಲ್ಲಿದ್ದವರ ಪ್ರಾಣ ತೆಗೆದ ವಿಷ

10:01 AM May 08, 2020 | mahesh |

ಬುಧವಾರ ಮಧ್ಯರಾತ್ರಿ ಆರ್‌.ಆರ್‌. ವೆಂಕಟಾಪುರಂ ಎಂಬ ಆ ಹಳ್ಳಿಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಬುಧವಾರ ತಡ ರಾತ್ರಿ ಸುಮಾರು 2.30 ಆಗಿರಬಹುದು. ಇಡೀ ಹಳ್ಳಿಯಲ್ಲಿ ಅದೇನೋ ದಟ್ಟ ಹೊಗೆಯಂಥ ಧೂಮ ಆವರಿಸಿತ್ತು. ನಿದ್ರೆಯಲ್ಲಿದ್ದ ಯಾರಿಗೂ ಇದರ ಅರಿವಾಗಿರಲಿಲ್ಲ.

Advertisement

ನಿತ್ಯಕರ್ಮಕ್ಕಾಗಿ ಎದ್ದು ಮನೆಗಳಲ್ಲಿ ಲೈಟ್‌ ಆನ್‌ ಮಾಡಿಕೊಂಡು ನೀರು ಕುಡಿಯಲೋ, ನಿತ್ಯ ಕರ್ಮಕ್ಕಾಗಿಯೋ ಮನೆಯಲ್ಲಿ ಓಡಾಡಿದವರಿಗೆ ತಮ್ಮ ಓಣಿಯಲ್ಲೆಲ್ಲಾ ಏನೋ ಹೊಗೆ ತುಂಬಿಕೊಂಡಂಥ ವಾತಾವರಣ ಕಂಡುಬಂದಿತ್ತು. ಹಲವಾರು ಜನರು ಯಾರಧ್ದೋ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ ಆಗಿರಬಹುದು ಅಥವಾ ದೂರದಲ್ಲೆಲ್ಲೋ ಹುಲ್ಲಿನ ಬಣವೆಗೆ ಬೆಂಕಿ ಏನಾದರೂ ಹೊತ್ತಿಕೊಂಡಿರಬಹುದು. ಹಾಗಾಗಿಯೇ, ಹಳ್ಳಿಯಲ್ಲೆಲ್ಲಾ ಹೊಗೆ ತುಂಬಿಕೊಂಡಿದೆ ಎಂದು ಭಾವಿಸಿ ಮತ್ತೆ ಮುಸುಕು ಹಾಕಿಕೊಂಡು ಮಲಗಿಬಿಟ್ಟರು.

ಕೆಲವೇ ನಿಮಿಷಗಳಲ್ಲಿ ತಡೆಯಲಾರದಂಥ ಘಾಟು ವಾಸನೆ ಆವರಿಸಿತು. ಒಂದೆರಡು ಬಾರಿ ಆ ಘಾಟು ವಾಸನೆಯನ್ನು ಉಸಿರಾಡಿದ ಬೆನ್ನಲ್ಲೇ ಏಕೋ ಶ್ವಾಸಕೋಶಗಳು ಬಿಗಿದುಕೊಂಡ ಅನುಭವ, ಉಸಿರಾಟಕ್ಕೆ ತೊಂದರೆ… ಅದರ ಮರುಕ್ಷಣದಲ್ಲೇ ಅಕ್ಕಪಕ್ಕದ ಮನೆಗಳಿಂದ ಚೀತ್ಕಾರ… ನೋವಿನ ಕೂಗಾಟಗಳು.

ಎಲ್ಲರೂ ಇದ್ದಕ್ಕಿದ್ದಂತೆ ತಡಬಡಾಯಿಸಿ ಹೊರಗೆ ಬಂದು ನೋಡಿದರೆ ತಮ್ಮ ಮನೆಗಳಿಂದ ಹೊರಗಡೆ ಬರುತ್ತಿದ್ದವರಲ್ಲಿ ಹಲವಾರು ಮಂದಿ ಬೀದಿಗಳಲ್ಲೇ ಕುಸಿದು ಬೀಳುತ್ತಿದ್ದರು. ಇದನ್ನು ನೋಡಿದ ಹಲವಾರು ಜನರು ಏನಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಇವರಿಗೂ ತಲೆ ಸುತ್ತು ಬಂದು ಅವರೂ ಕುಸಿದುಬಿದ್ದರು.

ಅಲ್ಲಿದ್ದವರಿಗೆ ಅದು ಹಳ್ಳಿಗೆ ತುಸು ದೂರದಲ್ಲೇ ಇರುವ ಎಲ್‌ಜಿ ಪಾಲಿಮರ್ಸ್‌ ಕಂಪೆನಿಯಿಂದ ಏನೋ ಅವಘಡ ಆಗಿದೆ ಎಂಬುದು ನಿಧಾನವಾಗಿ ಅರಿವಾಗುತ್ತಿದ್ದಂತೆ, ಓಡಿ… ಎಲ್ಲರೂ ದೂರ ಓಡಿ ಹೋಗಿ ಎಂದು ಕೂಗುಗಳು ಕೇಳಲಾರಂಭಿಸಿದವು. ಎಲ್ಲರೂ ಸಿಕ್ಕ ಸಿಕ್ಕ ಕಡೆಗೆ ಓಡಿ ಹೋಗಲೆತ್ನಿಸಿದರು. ಆದರೆ, ಓಡಲೂ ಶಕ್ತಿಯಿಲ್ಲದೆ ಹಲವಾರು ಜನರು ಕೆಳಗೆ ಬಿದ್ದು ಉಸಿರಾಟದ ತೊಂದರೆಯಿಂದ ವಿಲವಿಲನೆ ಒದ್ದಾಡುತ್ತಾ ಪ್ರಾಣ ಬಿಟ್ಟರು. ಮಕ್ಕಳು, ಹೆಂಗಸರು, ಯುವಕರು, ವೃದ್ಧರು ಎಲ್ಲರೂ ಹಿಡಿಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಓಡಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಅದರ ಪರಿಣಾಮವಾಗಿ, ಹಳ್ಳಿಯ ಓಣಿಗಳಲ್ಲಿ, ರಸ್ತೆಗಳಲ್ಲಿ, ಚರಂಡಿಗಳಲ್ಲಿ ಎಲ್ಲೆಂದರಲ್ಲಿ ಜನರು ಬಸವಳಿದು ಬಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next