ಹುಟ್ಟಿನಿಂದ ತೊಡಗಿ ಸಾಯುವವರೆಗೂ ಯಾರಾದರೊಬ್ಬರಿಗೆ ನಮ್ಮನ್ನು ನಾವು ಹೋಲಿಸಿಕೊಂಡೇ ಬದುಕಿಬಿಡುತ್ತೇವೆ. ನಾವು ಹೋಲಿಕೆಯ ಗುಣವನ್ನು ರೂಢಿಸಿಕೊಳ್ಳದಿದ್ದರೂ, ನಮ್ಮ ಸುತ್ತಲಿನ ಮಂದಿ, ಸಂದರ್ಭಗಳು ಆ ಮನಸ್ಥಿತಿಯನ್ನು ಬೆಳೆಸಿಬಿಡುತ್ತವೆ. ಮನಸ್ಸಿನ ಮೇಲೆ ಎಷ್ಟೇ ಹಿಡಿತವಿದ್ದರೂ, ಒಂದಲ್ಲ ಒಂದು ಕ್ಷಣದಲ್ಲಿ ಅವರೆಲ್ಲ ಹಾಗಿದ್ದಾರೆ, ನಾನು ಮಾತ್ರ ಯಾಕೆ ಹೀಗೆ ಎಂದಂದುಕೊಂಡು ಬಿಡುತ್ತೇವೆ. ಈ ರೀತಿಯ ತುಲನೆಗಳೇ ನಮ್ಮೊಳಗೆ ನಿರಾಸೆಯನ್ನು ತುಂಬಲು, ಆತ್ಮವಿಶ್ವಾಸವನ್ನು ಕುಗ್ಗಿಸಲು ಕಾರಣವಲ್ಲವೇ?
ಶಾಲಾಕಾಲೇಜುಗಳಲ್ಲಿ ಶಿಕ್ಷಕರು, ಮನೆಯಲ್ಲಿ ಹೆತ್ತವರು, ಹೀಗೆ ಎಲ್ಲ ವರ್ತುಲಗಳಲ್ಲಿ ಹೆಚ್ಚಾಗಿ ಹಿರಿಯರೇ ಹೋಲಿಸಿಕೊಳ್ಳುವ ಮನೋಭಾವವನ್ನು ಮಕ್ಕಳೊಳಗೆ ಬಿತ್ತಿಬಿಡುತ್ತಾರೆ. ಎಲ್ಲರಿಗೂ ತನ್ನ ಮಗು ಉತ್ಕೃಷ್ಟನಾಗಿರಬೇಕೆಂಬ ಸ್ವಾರ್ಥವಿರುವುದು ಸಹಜ. ಆದರೆ ಆ ಸ್ಫರ್ಧಾ ಮನೋಭಾವ ಯಾವ ರೀತಿ ಮತ್ತು ಹೇಗೆ ಮಕ್ಕಳ ಮನಸ್ಸಿನ ಮೇಲೆ ಹಾನಿಯನ್ನುಂಟುಮಾಡುತ್ತದೆ ಎಂಬುದು ನಿಜಕ್ಕೂ ವೈಜ್ಞಾನಿಕವಾಗಿ, ಸಾಮಾಜಿಕವಾಗಿ ಚಿಂತನೀಯ; ಅಧ್ಯಯನಯೋಗ್ಯ ವಿಚಾರ.
ಯಾವುದೋ ಒಂದು ಸಣ್ಣ ಸ್ಪರ್ಧೆಯಲ್ಲಿ ಸೋತಾಗ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಹೀಗೆ ಹಲವಾರು ವಿಷಯಗಳಲ್ಲಿ ಸೋತವನು ಗೆದ್ದವನಿಗೆ ತನ್ನರಿವಿಗೆ ಬಾರದೆಯೇ ಹೋಲಿಸಿಬಿಡುತ್ತಾನೆ. ಎಲ್ಲ ವಿಷಯಗಳಲ್ಲೂ, ಎಲ್ಲವನ್ನೂ ಹೋಲಿಸಬಹುದೇ? ಎಲ್ಲ ಮಕ್ಕಳು ಒಂದೇ ತೆರನಾಗಿರಲು ಹೇಗೆ ಸಾಧ್ಯ? ಪ್ರತಿಭೆ ಎನ್ನುವುದು ಜನ್ಮಾಂತರದಿಂದ ಪ್ರಾಪ್ತವಾದ ಸಂಸ್ಕಾರದಿಂದಲೇ ಒದಗಿಬರುತ್ತದೆ. ಇದನ್ನು ಭಗವದ್ಗೀತೆಯೂ ಸ್ಪಷ್ಟಪಡಿಸುತ್ತದೆ. ಹಾಗಾಗಿ ಒತ್ತಾಯಪೂರ್ವಕವಾಗಿ ಯಾವುದೇ ಕ್ಷೇತ್ರದಲ್ಲಿ ಇನ್ನೊಬ್ಬರಂತಾಗಲು ಬಯಸುವುದು ಮೂರ್ಖತನ.
ಸೂಕ್ಷ¾ವಾಗಿ ಗಮನಿಸಿದರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶಿಷ್ಟವಾಗಿರುತ್ತಾರೆ. ಇಂದು ಬಡವನಾದವನು ನಾಳೆ ಶ್ರೀಮಂತನಾಗಲೂಬಹುದು ಎಂಬ ಊಹಾನಾಲಹರಿಯಂತೆ, ಇಂದು ಸಾಮಾನ್ಯನಾಗಿರುವವನು ಮುಂದೆ ಸಾಧಕನಾಗಲೂಬಹುದು ಎಂಬ ವಿಶಾಲ ಮನಸ್ಥಿತಿ ನಮ್ಮದಾಗಿರಬೇಕೇ ವಿನಃ ಒಂದು ಸಲ ಕಂಡಾಕ್ಷಣ ತೀರ್ಮಾನಕ್ಕೆ ಬರುವುದು ಎಷ್ಟು ಸರಿ? ಇದೆಲ್ಲವನ್ನು ಬಿಟ್ಟು, ಸಾಮೂಹಿಕವಾಗಿ ಹೋಲಿಸಿಕೊಳ್ಳುವುದು ಅಪ್ರಬುದ್ಧತನವಲ್ಲದೆ ಮತ್ತೇನು?
ಯಾರ ಜತೆಗೆ, ಯಾರ ಹೋಲಿಕೆ ಎನ್ನುವುದರ ಹಿಂದೆ ಪ್ರಪಂಚ ಬಿದ್ದಿದೆ. ಒಬ್ಬ ಒಂದು ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದರೆ, ಮತ್ತೂಬ್ಬ ಅದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಸಮಾಜ ಒಬ್ಬರಿಗೊಬ್ಬರನ್ನು ಹೋಲಿಸಿಬಿಡುತ್ತದೆ. ಜನರ ಈ ಮನಸ್ಥಿತಿಯನ್ನು ಬದಲಾವಣೆ ಮಾಡುವುದು ಕಷ್ಟ. ಆದರೆ ಸಮಾಜದಲ್ಲಿ ನಮ್ಮ ಸ್ಥಾನಮಾನದ ಕುರಿತು, ನಮ್ಮ ಕೆಲಸಕಾರ್ಯದ ಕುರಿತು ಮಾತುಗಳೆ¨ªಾಗ, ಅದನ್ನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವ ಪ್ರೌಢಿಮೆ ನಮ್ಮಲ್ಲಿದ್ದರೆ, ಯಶಸ್ಸಿನತ್ತ ಚಿತ್ತವಿರಿಸಿದ್ದೇವೆ ಎಂದರ್ಥ!
ಹೋಲಿಕೆ ಎಂಬುದು ಬೇಡವೇ ಬೇಡ ಎಂದಲ್ಲ. ಅದಕ್ಕೂ ಒಂದು ಮಿತಿಯಿರಲಿ. ನಮ್ಮನ್ನು ನಾವು ನಮಗೆಯೇ ಹೋಲಿಸಿಕೊಳ್ಳುವುದಕ್ಕೂ, ನಮ್ಮನ್ನು ಇತರರ ಜತೆಗೆ ತುಲನೆ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಪ್ರತೀ ಹಂತದಲ್ಲೂ ನಮ್ಮ ವರ್ತಮಾನವನ್ನು, ನಮ್ಮ ಭೂತಕಾಲದ ಸನ್ನಿವೇಶಗಳ ಜತೆಗೆ ತುಲನೆ ಮಾಡಬೇಕು. ತಾನು ಹಿಂದಿನ ವೇದಿಕೆಗಿಂತ ಇಂದಿನ ವೇದಿಕೆಯಲ್ಲಿ ಎಷ್ಟು ಪರಿಪೂರ್ಣನಾದೆ ಎಂಬ ಬೆಳವಣಿಗೆಯನ್ನು ಗಮನಿಸಿ, ಯಾರನ್ನೂ ಮಧ್ಯವರ್ತಿಯನ್ನಾಗಿಸದೆ, ನಮ್ಮ ಉನ್ನತಿಯನ್ನು ನಾವೇ ಅಳತೆ ಮಾಡಬೇಕು ಅಷ್ಟೇ.
-ಪಂಚಮಿ ಬಾಕಿಲಪದವು
ಅಂಬಿಕಾ ವಿದ್ಯಾಲಯ ಪುತ್ತೂರು