ಮೈಸೂರು: ಇತ್ತೀಚಿನ ದಿನಗಳಲ್ಲಿ ಕಾವ್ಯವನ್ನು ಸಮಾಜದಂಚಿಗೆ ತಳ್ಳಲ್ಪಟ್ಟಿದೆ ಎಂದು ಭಾಸವಾಗುತ್ತಿದ್ದರೂ, ಕವಿಯನ್ನು ಕಡೆಗಣಿಸುವುದು ಅಷ್ಟು ಸುಲಭವಲ್ಲ ಎಂದು ಮೈಸೂರು ವಿವಿ ಪ್ರಸಾರಾಂಗ ನಿವೃತ್ತ ನಿರ್ದೇಶಕ ಡಾ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ “ಚಕೋರ-101, ಕವಿತೆ: ಓದು – ಸಂವಾದ’ದಲ್ಲಿ ಮಾತನಾಡಿದ ಅವರು, ಕಾವ್ಯ ಎಂಬುದು ನೋವನ್ನು ನುಂಗಿ ಜಗತ್ತಿಗೆ ಸುಖವನ್ನು ನೀಡಬೇಕಿದ್ದು,
ಆ ಮೂಲಕ ಎಲ್ಲಾ ಕಾಲದ ಗೊಂದಲಗಳಿಂದ ಬಿಡುಗಡೆಗೊಂಡು ಆಲೋಚನೆಯ ದಿಕ್ಕನ್ನು ಸತ್ಪಥಗಳಲ್ಲಿ ಕರೆದೊಯ್ಯಬೇಕು. ಇಂದಿನ ಕಾಲಘಟ್ಟದ ಕಾವ್ಯ ಬರಹಗಳು ಹಳೆಯ ಕಾಲಘಟ್ಟಗಳನ್ನು ಮೀರಿ ಬರೆಯುತ್ತಿದ್ದು, ಹೊಸ ತಲೆಮಾರಿನ ಬರಗಾರರಿಗೆ ಪ್ರೀತಿ, ಆಸೆ, ಕನಸು, ಬುದ್ಧ, ಬಸವ, ಅಂಬೇಡ್ಕರ್ ಜತೆಗೆ ಧರ್ಮ, ಬೆಳಕುಗಳು ಕಾವ್ಯದ ವಸ್ತುಗಳಾಗುತ್ತಿವೆ ಎಂದರು.
ಕರ್ನಾಟಕ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ಕಾವ್ಯಕ್ಕೆ ಯಾವುದೇ ನಿರ್ದಿಷ್ಟ ಆಯಾಮಗಳಿಲ್ಲ, ವಾಸ್ತವದ ಸಮಸ್ಯೆಗಳನ್ನು ಕಾವ್ಯದ ವಸ್ತುವನ್ನಾಗಿಸಿಕೊಂಡು ಕವಿ ಸಮಾಜದ ಜತೆ ಮುಖಾಮುಖೀಯಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಗೋವಿಂದರಾಜು ತಮ್ಮ “ನಾವೆಲ್ಲರೂ ದುಃಖದ ಮಕ್ಕಳು’ ಎಂಬ ಕವಿತೆಯನ್ನು ಓದಿದರು. ಇದಕ್ಕೆ ಡಾ.ಬಿ.ಸಿ.ದೊಡ್ಡೇಗೌಡ ಪ್ರತಿಕ್ರಿಯೆ ನೀಡಿದರು. ಚಕೋರ ಬಳಗದ ನೀ.ಗು. ರಮೇಶ್ ಇನ್ನಿತರರು ಹಾಜರಿದ್ದರು.