Advertisement
1999 ರಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಮಣಿಪಾಲಕ್ಕೆ ಆಗಮಿಸಿ ನೆಲೆಸಿದಂದಿನಿಂ ದಲೂ ನಾನು ಈ ಭಾಗದ ಕಾರ್ಕಳ, ಮೂಡುಬಿದಿರೆ ಮತ್ತು ನಲ್ಲೂರಿನ ಜೈನ ಬಸದಿಗಳು ಮತ್ತು ಮಠಗಳನ್ನು ಆಗಾಗ ಸಂದರ್ಶಿಸುತ್ತ ಬಂದಿದ್ದೇನೆ. ಉತ್ತರ ಭಾರತೀಯ ಜೈನ ಸಮುದಾಯದಿಂದ ಬಂದಿರುವ ನನಗೆ ಉತ್ತರದ ರಾಜ್ಯಗಳ ವೈಭವೋ ಪೇತ ಜೈನ ದೇಗುಲಗಳಿಗಿಂತ ಅತ್ಯಂತ ವಿಭಿನ್ನವಾಗಿ ಕಾಣಿಸುವ ಇಲ್ಲಿನ ಸರಳ ಮತ್ತು ಪ್ರಶಾಂತ ಜೈನ ಶ್ರದ್ಧಾ ಕೇಂದ್ರಗಳು ತುಂಬ ಆಕರ್ಷಕ ಎನ್ನಿಸಿತು. ಸರಳತೆ ಮತ್ತು ಅಪರಿ ಗ್ರಹಕ್ಕೆ ಅತ್ಯಂತ ಹೆಚ್ಚು ಮೌಲ್ಯವನ್ನೀಯುವ ಜೈನ ಧರ್ಮದ ಮೂಲತತ್ತಗಳಿಗೆ ಇಲ್ಲಿಯ ಜೈನ ಬಸದಿಗಳು ಮತ್ತು ಮಠಗಳು ನೈಜ ನಿದರ್ಶನ ಎಂಬುದು ಯಾವತ್ತೂ ನನ್ನ ಅನಿಸಿಕೆ. ದಕ್ಷಿಣ ಕನ್ನಡದ ಈ ಪುರಾತನ ಪಾರಂಪರಿಕ ನಿರ್ಮಿತಿಗಳಿಗೆ ಆಧುನಿಕತೆಯ ಬಿಸಿಗಾಳಿ ಸೋಕಲಾರದು ಎಂಬ ನನ್ನ ಈ ಹಿಂದಿನ ಭಾವನೆ ಇಂದು ಸುಳ್ಳೆನಿಸಿದೆ.
Related Articles
-ಸಾವಿರ ಕಂಬದ ಬಸದಿ: ಈ ಭಾಗದ ಅತ್ಯಂತ ವೈಭವೋಪೇತ ಸ್ಮಾರಕ; ಇದೊಂದು ವಾಸ್ತುವೈಭವ ನಿಜ, ಆದರೆ ಜೈನ ಧರ್ಮದ ತಾತ್ವಿಕ ಸಾರಕ್ಕೆ ತದ್ವಿರುದ್ಧವಾಗಿರುವಂಥದ್ದು.
ಮಾನಸ್ತಂಭ:ಬಸದಿಗಳ ಮುಂಭಾಗದ ಸೂಕ್ಷ್ಮ ಕುಸುರಿ ಕೆತ್ತನೆಗಳುಳ್ಳ ಸ್ತಂಭಗಳು
ಬಸದಿಗಳು:(ಸಾವಿರ ವರ್ಷಗಳಷ್ಟು ಪುರಾತನ): ಕರಾವಳಿ ಮತ್ತು ಅದರ ಒಳನಾ ಡಿನ ಅಲ್ಲಲ್ಲಿ ಇರುವಂಥವು, ಶಿಲೆ ಅಥವಾ ದಾರುಸ್ತಂಭಗಳನ್ನು ಹಾಗೂ ಶುಭ್ರಶ್ವೇತ ವರ್ಣದ ಮಣ್ಣಿನ ಗೋಡೆಗಳನ್ನು ಹೊಂದಿರುವಂಥವು
ಮಠಗಳು (1500 ಎ.ಡಿ.): ಜೈನ ದೇಗುಲದೊಂದಿಗೆ ಸ್ವಾಮೀಜಿಗಳ ವಾಸ್ತವ್ಯಕ್ಕೆ ಇರುವಂಥವು
ಕೆರೆ ಬಸದಿಗಳು (1500 ಎ.ಡಿ.): ಈ ಭಾಗ ದಲ್ಲಿ ವಿಶಿಷ್ಟ ಎನಿಸಿರುವಂಥವು, ಸಮ್ಮಿತಿಯ ಹೆಂಚಿನ ಛಾವಣಿ ಹೊಂದಿದ್ದು, ಸರೋ ವರ ಅಥವಾ ಕೆರೆಯ ಮಧ್ಯೆ ಇವೆ – ಈ ಬಸದಿಗಳ ಪ್ರತಿಫಲನವನ್ನು ಕೆರೆಯ ನೀರಿನಲ್ಲಿ ಕಾಣಬಹುದು.
Advertisement
ಮೇಲಿನವುಗಳಲ್ಲಿ ಮೊದಲ ಮೂರು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿವೆ. ಇಲಾಖೆಯ ಅನುಮತಿ ಇಲ್ಲದೆ ಯಾವುದೇ ಬದಲಾವಣೆ ಮಾಡು ವುದು ನಿಷಿದ್ಧ ಮತ್ತು ಶಿಕ್ಷಾರ್ಹ ಅಪ ರಾಧ. ಉಳಿದ ಎಲ್ಲ ಬಸದಿಗಳು ನಲ್ಲೂರು, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿನ ಮೂರು ಪ್ರಧಾನ ಜೈನ ಮಠಗಳ ಅಧೀನಕ್ಕೆ ಒಳಪಟ್ಟವು. ಆಯಾ ಸ್ವಾಮೀಜಿಗಳಿಗೆ ಅವುಗಳ ನಿರ್ವಹಣೆ ಮತ್ತು ಕಾರ್ಯಚಟುವಟಿಕೆಗಳ ಹೊಣೆ. ಕುತೂಹಲದ ಸಂಗತಿ ಎಂದರೆ, ನವೀಕೃತ ಕಾರ್ಕ ಳದ ಆದಿನಾಥ ಸ್ವಾಮಿ ಬಸದಿಯಂತಹ ಕೆಲವು ಬಸದಿಗಳು ಖಾಸಗಿ ಕುಟುಂಬಗಳ ಅಧೀನ ಮತ್ತು ನಿರ್ವಹಣೆಗೆ ಒಳಪಟ್ಟಿವೆ. ಈ ಬಸದಿಗಳ ಆವರಣದಲ್ಲೇ ಈ ಕುಟುಂಬಗಳು ವಾಸವಿವೆ. ಇವುಗಳ ಯಾವುದೇ ನವೀಕರಣವು ಆಯಾ ನಿರ್ಮಿ ತಿಗಳ ಹೊಣೆ ಹೊತ್ತಿರುವ ಮಠಗಳು ಹಾಗೂ ಜೈನ್ ಮಿಲನ್‌ಗಳದ್ದಾಗಿರುತ್ತದೆ.
ಇತ್ತೀಚೆಗೆ ನಡೆದಿರುವುದು ಈ ಬಸದಿಗಳ ನವೀಕರಣವೇ ವಿನಾ ಪುನರ್‌ಸ್ಥಾಪನೆ ಯಲ್ಲ ಎಂಬುದು ಎಚ್ಚರಿಕೆಯ ಕರೆಘಂಟೆ. 1,500 ವರ್ಷಗಳು ಅಥವಾ ಅದಕ್ಕಿಂತಲೂ ಹಿಂದೆ ನಿರ್ಮಾಣಗೊಂಡ ಈ ರಚನೆಗಳನ್ನು ಹಾಗೆ ನವೀಕರಿಸಲು ನಮಗೆ ಅಧಿಕಾರ ಇದೆಯೇ ಎಂಬುದೇ ಇಲ್ಲಿನ ಮೂಲ ಪ್ರಶ್ನೆ. ಎರಡನೆಯದಾಗಿ, ಈ ಬಸದಿಗಳು ಹೊಂದಿದ್ದ ಐತಿಹಾಸಿಕ ವಿನ್ಯಾಸ ಭಾಷೆ ಈ ನವೀಕರಣದ ಸಂದರ್ಭದಲ್ಲಿ ನಾಶವಾಗಿದೆ ಮತ್ತು ಪ್ರತೀ ಬಸದಿಯೂ ಇನ್ನೊಂದಕ್ಕಿಂತ ಭಿನ್ನವಾಗಿ ಕಾಣಿಸುತ್ತಿದೆ. ಮೂರನೆಯದಾಗಿ, ಹೊಳೆಯುವಂತೆ ಪಾಲಿಶ್ ಮಾಡಲಾದ ಗ್ರಾನೈಟ್‌ನಂಥ ಸಾಮಗ್ರಿಗಳನ್ನು ನವೀಕರಣಕ್ಕೆ ಬಳಸಲಾಗುತ್ತಿದೆ; ಇದಕ್ಕೆ ಕೊಡಲಾಗುವ ಕಾರಣ ಎಂದರೆ ಶುಚಿಗೊಳಿಸಲು ಅನುಕೂಲ ಎಂಬುದು. ಹಿಂದೆ ಮಣ್ಣಿನಿಂದ ನಿರ್ಮಿತ ಆವರಣ ಗೋಡೆಗಳನ್ನು ಈಗ ಸಾಪಾಟಾದ ಕಾಂಕ್ರೀಟ್ ಬ್ಲಾಕ್‌ಗಳಿಂದ ನಿರ್ಮಿಸಲಾಗುತ್ತಿದೆ (ಬೇಸಗೆಯಲ್ಲಿ ಇದು ತಾಪಮಾನವನ್ನು ಹೆಚ್ಚಿಸುತ್ತದೆ ಎಂಬ ವಾಸ್ತವಿಕ ಅನನುಕೂಲವೂ ಇದೆ); ಪಾರ್ಕಿಂಗ್‌ಗೆ ಹೆಚ್ಚು ಸ್ಥಳಾವಕಾಶ ಅಗತ್ಯ ಎಂಬುದು ಇದಕ್ಕೆ ನೀಡಲಾಗುವ ಮತ್ತೂಂದು ಕಾರಣ. ಕೊನೆಯಲ್ಲಿ, ಮೂಲ ದಲ್ಲಿದ್ದ ಪುರಾತನ ಸಂರಚನೆಯನ್ನು ತುಸುವೂ ಹೋಲದ ನಿರ್ಮಾಣ ಎದ್ದು ನಿಲ್ಲುತ್ತಿ¤ದೆ ಮತ್ತು ಇದು ಸರ್ವೇ ಸಾಧಾರಣವಾದ ಹೊಸ ದೇಗುಲದಂತೆ ಕಾಣಿಸುತ್ತದೆ.ಈಗಿನ ಪೀಳಿಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯುವ ಹೊಣೆಯನ್ನು ಹೆಗಲ ಮೇಲೆ ಹೊತ್ತುಕೊಳ್ಳುತ್ತಿರುವ ಹಾಗೆಯೇ ಭವಿಷ್ಯದ ಪೀಳಿಗೆಗಳೂ ಇದೇ ಕಾರ್ಯವನ್ನು ಮುಂದುವರಿಸುತ್ತವೆ. ಹೀಗಾಗಿ ಪ್ರತೀ 50 ವರ್ಷಗಳಿಗೆ ಒಮ್ಮೆ ಪುರಾತನ ಕಟ್ಟಡವೊಂದನ್ನು ಪುನರ್‌ಸ್ಥಾಪಿಸಬೇಕಾದೀತು ಎಂದಾದರೆ ಅದು ತಪ್ಪಲ್ಲ – ಆದರೆ ಅದು ಎಷ್ಟು ಕಾಲ ಬಾಳಿಕೆ ಬರುವುದೋ ಎಂಬ ಚಿಂತೆಯಲ್ಲಿ ನಾವು ಸುಖಾಸುಮ್ಮನೆ ಅದರ ಪ್ರಾಚೀನ ವಿನ್ಯಾಸ ಭಾಷೆಯನ್ನು ಬದಲಾಯಿಸುವುದು ಸರ್ವಥಾ ಸಲ್ಲದು. ಈ ಲೇಖನವನ್ನು ಬರೆಯುವ ಹೊತ್ತಿಗೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಾರ್ಕಳ ಮಠದ ವಿನ್ಯಾಸ ನಕಾಶೆಯನ್ನು ಪಡೆಯಲು ನನಗೆ ಸಾಧ್ಯವಾಗಲಿಲ್ಲ; ಆದರೆ ಈಗ ಏನು ನಡೆಯುತ್ತಿದೆಯೋ ಅದನ್ನು ಗಮನಿಸುವುದಾದರೆ ಹಳೆಯ ಮಠದ ಸ್ಥಾನದಲ್ಲಿ ಹೊಸ ಸಾಮಾನ್ಯ ಆಧುನಿಕ ಕಟ್ಟಡವೊಂದು ತಲೆಯೆತ್ತುವ ಸಾಧ್ಯತೆಯೇ ಅಧಿಕ. ಇಲ್ಲಿನ ಜೈನ ಸಮುದಾಯ ತನ್ನ ಅಮೂಲ್ಯ ಪರಂಪರೆಯ ಬಗೆಗೆ ಹೊಸ ಅರಿವು ಮತ್ತು ನಿಲುವು ತಾಳುವ ನಿಟ್ಟಿನಲ್ಲಿ ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕು ಮತ್ತು ಕರಾವಳಿ ಕರ್ನಾಟಕದಾದ್ಯಂತ ಜೈನ ವಾಸ್ತು ಶಿಲ್ಪಕ್ಕೆ ಆಘಾತವಾಗುವುದನ್ನು ತಡೆಯಬೇಕು ಎಂಬುದೇ ಎಂಬುದೇ ನನ್ನ ಆಶಯ.
ಮೂಲ ರಚನೆಯಲ್ಲಿ ಬಳಕೆಯಾದ ಸಾಮಗ್ರಿ (ಹೆಂಚುಗಳು, ಮಣ್ಣಿನ ಗೋಡೆಗಳು)ಗಳು ಈಗಲೂ ಮಾರುಕಟ್ಟೆಯಲ್ಲಿ ಲಭ್ಯವಿರುವಾಗ ಅವುಗಳಿಗೆ ಬದಲಾಗಿ ಹೊಸ (ಕಾಂಕ್ರೀಟ್ ಮತ್ತು ಗ್ರಾನೈಟ್) ಸಾಮಗ್ರಿಗಳನ್ನು ಬಳಸುವ ಔಚಿತ್ಯವಾದರೂ ಏನು? ಹಾಗೂ ಆ ಸ್ವಾತಂತ್ರ್ಯ ನಮಗೆ ಇದೆಯೇ? ವರಂಗ ಕೆರೆ ಬಸದಿಯ ಪುರಾತನ ಸರಳ ಬಾಹ್ಯ ಗೋಡೆಗಳನ್ನು ಕೆಲವು ವರ್ಷಗಳ ಹಿಂದೆ ಗ್ರಾನೈಟ್‌ನಿಂದ ನಿರ್ಮಿಸಿದಾಗ ಅದರ ಪ್ರಾಕ್ತನ ನೋಟ ಸಂಪೂರ್ಣವಾಗಿ ನಾಶವಾಯಿತು. ವಿನ್ಯಾಸ ಕ್ಷೇತ್ರದಲ್ಲಿ “ಅಪಶ್ರುತಿ’ ಎಂಬ ಒಂದು ಪರಿಕಲ್ಪನೆ ಇದೆ – ನಿರ್ಮಿತಿಯು ಕಟು ಮತ್ತು ಕ್ಷೋಭೆಕಾರಕ ಪರಿಣಾಮ ಉಂಟು ಮಾಡಿದಾಗ ಅಪಶ್ರುತಿ ಎನ್ನುತ್ತಾರೆ. ನಿಶ್ಚಲ ನೀರು ಮತ್ತು ಅಲೆಗಳೇಳುತ್ತಿರುವ ನೀರನ್ನು ಇದಕ್ಕೆ ಉದಾಹರಿಸಬಹುದು. ಮೊದಲನೆಯದು ಕಣ್ಣುಗಳು ಮತ್ತು ಮೆದುಳಿಗೆ ಪ್ರಶಾಂತಿಯ ಅನುಭೂತಿ ಯನ್ನು ನೀಡಿದರೆ ಎರಡನೆಯದು ಗೊಂದಲಕ್ಕೀಡು ಮಾಡು ತ್ತದೆ. ದುಃಖದ ಅಂಶವೆಂದರೆ, ವರಂಗ ಬಸದಿ ಈ ಅಕ್ಷಮ್ಯ ಪ್ರಮಾದಕ್ಕೆ ಒಂದು ಉದಾಹರಣೆ. ಕೋಟೇಶ್ವರ ಮೂಲದವ ರಾದ, ಭಾರತದ ಮುಂಚೂಣಿಯ ಸಮಕಾಲೀನ ಕಲಾವಿದ ರಲ್ಲಿ ಒಬ್ಬರಾದ ಎಲ್.ಎನ್. ತಲ್ಲೂರು ಕೂಡ ವರಂಗ ಬಸದಿಗೆ ಕೆಲವು ವರ್ಷಗಳ ಹಿಂದೆ ಭೇಟಿ ನೀಡಿದಾಗ ಇದೇ ಪರಿಣಾಮವನ್ನು ಅನುಭವಿಸಿದರು. “850 ವರ್ಷಗಳಷ್ಟು ಹಳೆಯ ಸೌಂದರ್ಯ ಪ್ರಜ್ಞೆ ಇನ್ನೂ ನೂರು ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಕಾಲ ತಲೆಯೆತ್ತಿ ನಿಲ್ಲುವುದಕ್ಕಾಗಿ ಅದಕ್ಕೊಂದು ಊರುಗೋಲು ನೀಡುವಷ್ಟು ಸ್ವಾತಂತ್ರ್ಯ ಮಾತ್ರ ನಮಗಿದೆ. ಅ ಪುರಾತನವಾದ ಆ ಸೌಂದರ್ಯಪ್ರಜ್ಞೆಗೆ ಸವಾಲೆಯುವ ಕೆಚ್ಚು ಇರುವಂಥವರು ಮೂಲ ಕಟ್ಟಡವನ್ನು ಕೆಡವದೆ ಹೊಸದನ್ನು ಇನ್ನೊಂದು ಕಡೆ ನಿರ್ಮಿಸಬೇಕು. ಆ ಕಾಲದ ಸೌಂದರ್ಯಪ್ರಜ್ಞೆಯ ನೈಜ ಆರಾಧಕರು ಅದನ್ನು ಯಂತ್ರಗಳಿಂದ, ಆಧುನಿಕ ಕಟ್ಟಡ ನಿರ್ಮಾಣ ಸಾಮಗ್ರಿ ಗಳಿಂದ ಪುನಾರಚಿಸಲಾರರು. ಪುರಾತನ ಕಟ್ಟಡದ ಸುಂದರ ಸಲ್ಲಕ್ಷಣಗಳಲ್ಲಿ ಐವತ್ತು ಪ್ರತಿಶತ ಈಗಾಗಲೇ ನಷ್ಟವಾಗಿ ಹೋಗಿದೆ’ ಎನ್ನುತ್ತಾರೆ ಎಲ್. ಎನ್. ತಲ್ಲೂರು.
ದೃಷ್ಟಿಯನ್ನು ನಾವು ಗೌರವಿಸಿದ್ದೇವೆಯೇ?
ಆನೆಕೆರೆ ಕೆರೆ ಬಸದಿಯ ನವೀಕರಣ ವಿಷಯ ದಲ್ಲಿ ನೈತಿಕ ಮತ್ತು ಸೌಂದರ್ಯಪ್ರಜ್ಞೆಗೆ ಸಂಬಂಧಿ ಸಿದ ಹಲವು ಸಂಗತಿಗಳಿವೆ. ನವೀಕರಣಕ್ಕೆ ಮುನ್ನ ಅದರಲ್ಲಿ ಪಾಲ್ಗೊಳ್ಳುವ ಆಡಳಿತ, ಯೋಜನಾ ಸಮಿತಿಯಿಂದ ತೊಡಗಿ ವಾಸ್ತುಶಿಲ್ಪಿಗಳ ವರೆಗೆ ಎಲ್ಲರೂ ಮೂಲ ವಾಸ್ತುಶಿಲ್ಪಿಯ ಮಿದುಳಿ ನೊಳಕ್ಕೆ (ಚಿಂತನೆಯೊಳಗೆ) ಪರಕಾಯ ಪ್ರವೇಶ ಮಾಡಬೇಕಿದೆ. ಆ ಮೂಲ ಶಿಲ್ಪಿಯು ಈ ರಚನೆಯ ನಿರ್ಮಾಣದ ವೇಳೆ ಮಣ್ಣಿಗೆ ನಿಕಟವಾದ ಸಾಮಗ್ರಿ ಮತ್ತು ಬಣ್ಣದ, ದೂರದಿಂದಲೇ ಗೋಚರ ವಾಗುವಂತಹ, ನೋಡುಗರ ನೋಟಕ್ಕೆ ಭಂಗ ತಾರದ; ತಾಯಿಯೊಬ್ಬಳು ತನ್ನ ಮಗುವನ್ನು ತೆರೆದ ಬಾಹುಗಳಿಂದ ಸ್ವಾಗತಿಸುವಂತಹ ಕಲ್ಪನೆಯನ್ನು ಹೊಂದಿದ್ದರು ಎಂದು ಅನ್ನಿಸುವುದಿಲ್ಲವೇ? ಇದಕ್ಕೆ ತದ್ವಿರುದ್ಧವಾಗಿ ಈಗ ನಿರ್ಮಿತ ಗ್ರಾನೈಟ್ ನಿರ್ಮಿತಿಯು ಕೆರೆಯ ನೀರಿನ ಮೇಲೆ ಬಹು ಭಾರದ, ಘನ ರಚನೆಯಾಗಿ ಆಭಾಸಕರ ಎನಿಸುವು ದಿಲ್ಲವೇ? ಕಾಲ ಸರಿದಂತೆ ಗ್ರಾನೈಟ್ ಕಪ್ಪುಗಟ್ಟಿ ನಿಸರ್ಗಸಹಜ ನೋಟದೊಳಗೆ ಬೆರೆತುಹೋಗ ಬಹುದು; ಆದರೆ ಆವರೆಗೆ ಆನೆಕೆರೆ ಬಸದಿಯು ಉಗುರು ಸುತ್ತಾದ ಹೆಬ್ಬೆ ರಳಿನ ಹಾಗೆ ಕಾಣಿಸುವುದು ನಿಶ್ಚಿತ. ಈ ಬಸದಿಯಲ್ಲಿ ಬಹುವಾಗಿ ಛಾಯಾ ಗ್ರಹಣಗೊಳ್ಳುವ ಅಂಶವಾಗಿರುವ ಕೆರೆಯ ನೀರಿನಲ್ಲಿ ಬಸದಿಯ ಪ್ರತಿಫಲನದ ಬಗ್ಗೆ ಯಾರೂ ತಲೆಕೆಡಿಸಿಕೊಂಡ ಹಾಗಿಲ್ಲ. ನಿಜ ಹೇಳಬೇಕೆಂದರೆ, ಎದುರು ಭಾಗದಲ್ಲಿ ನಿರ್ಮಿಸಲಾದ ಉದ್ದವಾದ ಗೋಡೆ ದೃಷ್ಟಿಗೆ ತಡೆಯಾಗುತ್ತದೆ ಮತ್ತು ಅದರಿಂ ದಾಗಿ ಆ ಭಾಗದ ಪ್ರತಿಫಲನ ಸಾಧ್ಯವೇ ಆಗದು ! ಈ ಹಿಂದಿನ ಕಟ್ಟಡದ ಸಂಪೂರ್ಣ ಸಮ್ಮಿತಿಗೆ ಕೂಡ ಈ ಗೋಡೆ ಭಂಗ ತರುತ್ತಿದೆ.
ಒಪೊಲಿಸ್ ಆರ್ಕಿಟೆಕ್ಚರ್ ಪಾಲುದಾರರೂ ಆಗಿ ರುವ, ಪ್ರಶಸ್ತಿ ಪುರಸ್ಕೃತ ಮುಂಬಯಿಯ ವಾಸ್ತು ಶಿಲ್ಪಿ ಸೊನಾಲ್ ಸಂಚೇತಿ ಹೊಸ ವಿನ್ಯಾಸದ ಬಗ್ಗೆ ಹೀಗೆ ಹೇಳುತ್ತಾರೆ, “ಇಡೀ ದೇಗುಲದ ಮೂಲ ಸಂರಚನಾ ಪ್ರಜ್ಞೆ, ಅದರ ಸಂದರ್ಭ, ಸಾಮಗ್ರಿ ಶಾಸ್ತ್ರಜ್ಞತೆಗಳನ್ನು ಹಾಗೆಯೇ ಕಾಯ್ದುಕೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಮೂಲ ಅನುಭವ ಮತ್ತು ಸಾಮಗ್ರಿಗಳನ್ನು ಸಂರಕ್ಷಿಸಿ ಕೊಳ್ಳಲೇಬೇಕು; ಮೂಲ ಸಂರಚನೆಯ ಸಹಜ ಸೌಂದರ್ಯ ಮತ್ತು ಬೇರು ಭಾವಕ್ಕೆ ಯಾವುದೇ ಧಕ್ಕೆ ಮಾಡಬಾರದು. ನಾವು ಸಂರಕ್ಷಿಸಿ ನಿರ್ವಹಣೆಗೆ ಒಳಪಡಿಸುವ ಯಾವುದೇ ನಿರ್ಮಾಣದ ಮೂಲ ಗುಣ ಲಕ್ಷಣಗಳಿಗೆ ನಿಷ್ಠರಾಗಿರುವುದು ವಾಸ್ತು ಶಿಲ್ಪಿಗಳಾದ ನಮ್ಮ ಹೊಣೆಯೂ ಆಗಿದೆ. ಪ್ರಸ್ತಾವಿತ ಹೊಸ ರಚನೆಯು ತಾನಿರುವ ಸಂದರ್ಭ- ಪ್ರದೇಶಕ್ಕೆ ಸಂಪೂರ್ಣವಾಗಿ ಹೊರಗಿನದು ಎಂಬಂತೆ ಭಾಸವಾಗುತ್ತದೆ’.
ಕರ್ನಾಟಕದ ಕರಾವಳಿಯಲ್ಲಿರುವ ಜೈನ ಸಮುದಾಯ ತುಲನಾತ್ಮಕವಾಗಿ ಸಣ್ಣದು ಮತ್ತು ನಿಕಟವಾಗಿ ಹಾಸು ಹೊಕ್ಕಾಗಿರುವುದೂ ಆಗಿರುವುದರಿಂದ ಅದರ ಪುರಾತನ ಪರಂಪರೆಗೆ ಇನ್ನಷ್ಟು ನಷ್ಟ ಉಂಟಾಗುವುದನ್ನು ಈಗಲೂ ತಡೆಯಬಹುದು. ಜೈನ್ ಮಿಲನ್‌ನಿಂದ ನವೀಕರ ಣದ ನಿರ್ಧಾರಗಳನ್ನು ತತ್ಸಂಬಂಧಿ ಸ್ವಾಮೀಜಿಗಳ ಜತೆಗೆ ಸಮಾಲೋಚಿಸಿದ ಬಳಿಕವೇ ಕೈಗೊಳ್ಳಲಾ ಗುತ್ತದೆ; ಅವರೆಂದರೆ – ಕಾರ್ಕಳದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಅಥವಾ ಮೂಡುಬಿದಿರೆಯ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ (ನಲ್ಲೂರಿನ ಮಠವೂ ಪ್ರಸ್ತುತ ಇವರ ವ್ಯಾಪ್ತಿಯಲ್ಲಿದೆ). ಬಹುತೇಕ ಇಂತಹ ಪ್ರಮುಖ ಸಂದರ್ಭಗಳಲ್ಲಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಯವರಿಗೂ ಮಾಹಿತಿ ಇರುತ್ತದೆ ಅಥವಾ ಅವರೂ ಒಳಗೊಂಡಿರುತ್ತಾರೆ. 01ಈ ಬಸದಿಗಳು ಮತ್ತು ಮಠಗಳನ್ನು ಮೂಲಕ್ಕೆ ಎಷ್ಟು ಸಾಧ್ಯವೋ ಅಷ್ಟು ನಿಕಟವಾಗಿ ಸಂರಕ್ಷಿಸಬೇಕು ಎಂಬುದನ್ನು ಮೊತ್ತಮೊದಲನೆಯದಾಗಿ ಜೈನ್ ಮಿಲನ್ ಸ್ಪಷ್ಟವಾಗಿ ಮನದಟ್ಟು ಮಾಡಿಕೊಳ್ಳಬೇಕು. ಅವರ ಪ್ರಸ್ತುತ ಉದ್ದೇಶಗಳು ಒಳ್ಳೆಯವೇ. ಆದರೆ ಅರಿವಿನ ಕೊರತೆಯಿಂದಾಗಿ ಇತಿಹಾಸ ವನ್ನು ಹಾಳುಗೆಡವಲಾಗುತ್ತಿದೆ.
02 ಜೈನ್ ಮಿಲನ್ ತನ್ನ ನಿಯಮಿತ ಸಭೆಗಳಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಈ ಕುರಿತಾಗಿ ಅರಿವನ್ನು ವಿಸ್ತರಿಸಬೇಕು. ಸ್ವಾಮೀಜಿಗಳೂ ಸಾರ್ವಜನಿಕ ಸಭೆಗ ಳಲ್ಲಿ ತಿಳಿಹೇಳಬೇಕು. ಯಾರೇ ಆದರೂ ಅನುಮತಿ ಪಡೆಯದೆ ಯಾವುದೇ ಐತಿಹಾಸಿಕ ಕಟ್ಟಡದ ದುರಸ್ತಿ ಅಥವಾ ನವೀಕರಣಕ್ಕೆ ಮುಂದಾಗುವುದು ಇನ್ನಾದರೂ ಸ್ಥಗಿತಗೊಳ್ಳಬೇಕು.
03 ವಿನ್ಯಾಸ ಯೋಜನಾ ಸಮಿತಿಯೊಂದು ಈ ಕೂಡಲೇ ರಚನೆಯಾಗಬೇಕು. ಇದರಲ್ಲಿ ಈ ಪ್ರದೇಶದ ಜೈನ ವಾಸ್ತುಶಿಲ್ಪದ ಬಗ್ಗೆ ಆಳವಾದ ಅಧ್ಯಯನ, ಅರಿವು ಹೊಂದಿರುವ, ನುರಿತ ಕೆಲವು ವಾಸ್ತುತಜ್ಞರು ಮತ್ತು ಉತ್ತಮ ವಿನ್ಯಾಸ ಪ್ರಜ್ಞೆಯನ್ನು ಹೊಂದಿರುವ, ಇತಿಹಾಸ ದಲ್ಲಿ ನೈಜ ಆಸಕ್ತಿಯುಳ್ಳ ಗಣ್ಯರು ಈ ಸಮಿತಿಯ ಸದಸ್ಯರಾಗಿರಬೇಕು. ಸ್ಥಳೀಯ ವಾಸ್ತುಶಿಲ್ಪಿ ಗಳು ಮತ್ತು ಗುತ್ತಿಗೆದಾರರಿಗೆ ಈ ಸಮಿತಿಯು ವಿನ್ಯಾಸ ಮಾರ್ಗದರ್ಶನ ಮತ್ತು ನಿರ್ದೇಶನ ವನ್ನು ಒದಗಿಸಬೇಕು. ಉತ್ತಮ ವಿನ್ಯಾಸ ಸಹಾಯ ಒದಗಿಸು ವುದು ಸಾಧ್ಯವಾದರೆ ಭಾರತೀಯ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಟ್ಟ ಸ್ಮಾರಕಗಳ ದುರಸ್ತಿ, ಪುನರ್‌ಸ್ಥಾಪನೆ ಗಳು ಕೂಡ ಉತ್ತಮ ಅಭಿ ರುಚಿಯೊಂದಿಗೆ ನಡೆಯುವಂತೆ ಆಗಿಸಬಹುದು. ಇತ್ತೀಚೆಗೆ ಮೂಡುಬಿದಿರೆಯ ಸಾವಿರ ಕಂಬದ ಬಸದಿಯಲ್ಲಿ ಸ್ತಂಭಗಳ ಮೇಲೆ ಸ್ಪಾಟ್‌ಲೆçಟ್‌ಗಳನ್ನು ಅಳ ವಡಿಸಲಾಯಿತು. ಉತ್ತಮ ವಿನ್ಯಾಸಕಾರರೊಬ್ಬರನ್ನು ಈ ಕಾರ್ಯದಲ್ಲಿ ಬಳಸಿದ್ದರೆ ಖರೀದಿ ಸಲಾದ ತಾಮ್ರದ ದೀಪಗಳು ಅಲ್ಲಿಗೆ ಹೊಂದಿಕೊಳ್ಳವು; ಬದಲಾಗಿ ಉಕ್ಕಿನ ಅಳವಡಿಕೆ ಗಳು ಬೂದು ಬಣ್ಣದ ಸ್ತಂಭಗಳ ಜತೆಗೆ ಹೆಚ್ಚು ಚೆನ್ನಾಗಿ ಒಗ್ಗಿಕೊಳ್ಳುತ್ತವೆ ಎಂಬುದಾಗಿ ಸಲಹೆ ನೀಡುತ್ತಿದ್ದರು.
04 ಯಾವುದೇ ಪುರಾತನ ನಿರ್ಮಿತಿಯ ನವೀಕರಣಕ್ಕೆ ಮುನ್ನ ಸ್ವಾಮೀಜಿಗಳು ಮತ್ತು ಜೈನ್ ಮಿಲನ್ ಈ ಸಮಿತಿಯನ್ನು ಸಂಪರ್ಕಿಸಿ ಸಮಾಲೋಚಿಸ ಬೇಕು. ಮಾತ್ರವಲ್ಲದೆ ಸಮಿತಿಯ ಅಂಗೀಕಾರವನ್ನು ಪಡೆಯಬೇಕು. ಹೀಗಾದಾಗ ಮಾತ್ರ ಜೈನ ಪರಂಪರೆಯ ಈ ಪುರಾತನ ಕಟ್ಟಡಗಳ ಸಮಾನ ವಿನ್ಯಾಸ ಭಾಷೆ ಮತ್ತು ಘನತೆಯನ್ನು ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾದೀತು ಮತ್ತು ಆಗ ಮಾತ್ರ ಪ್ರತೀ ಕಟ್ಟಡವೂ ಸ್ವತಂತ್ರವಾಗಿ ವಿನ್ಯಾಸಗೊಂಡದ್ದು ಎಂಬಂತಹ ಆಭಾಸ ಸೃಷ್ಟಿಯಾಗುವುದು ತಪ್ಪೀತು. -ವನಿತಾ ಜೈನ್ ಪೈ