Advertisement

ಹುಣಸೂರು ಜಿಲ್ಲೆಯಾಗಿಸಲು ವೇದಿಕೆ ಸಿದ್ಧವಾಗ್ತಿದೆ

08:55 PM Oct 15, 2019 | Lakshmi GovindaRaju |

ಮೈಸೂರು: ದೇಶವೇ ವಿಭಜನೆಯಾಗಿರುವಾಗ ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರು ಉಪವಿಭಾಗವನ್ನು ಕೇಂದ್ರವಾಗಿಟ್ಟುಕೊಂಡು ಡಿ.ದೇವರಾಜ ಅರಸು ಜಿಲ್ಲೆ ರಚಿಸುವುದರಲ್ಲಿ ತಪ್ಪೇನಿದೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಪ್ರತಿಪಾದಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರು ತಾಲೂಕನ್ನು ಕೇಂದ್ರವಾಗಿಟ್ಟುಕೊಂಡು ಉಪವಿಭಾಗದ ಹಿಂದಿನ ನಾಲ್ಕು ತಾಲೂಕು, ಎರಡು ಹೊಸ ತಾಲೂಕು ಸೇರಿ ಆರು ತಾಲೂಕನ್ನು ಒಟ್ಟಾಗಿಟ್ಟುಕೊಂಡು ಜಿಲ್ಲೆ ರಚನೆಗೆ ಜನರ ಆಶಯವಿತ್ತು.

ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆಗೆ ಸುದೀರ್ಘ‌ವಾಗೇನು ಮಾತನಾಡಿಲ್ಲ. ಸ್ಥಳೀಯವಾಗಿ ಜನ ನಾಯಕರು, ಜನಪತ್ರಿನಿಧಿಗಳು, ಚಿಂತಕರ ಸಭೆ ನಡೆಸಿ ಜನಾಭಿಪ್ರಾಯ ರೂಪಿಸಿಕೊಂಡು ಬರುವುದಾಗಿ ಹೇಳಿಬಂದಿದ್ದೇನೆ. ಅಷ್ಟಕ್ಕೇ ಮಾಧ್ಯಮಗಳಲ್ಲಿ ಅತೀ ಅನಿಸುವಷ್ಟು ವಿರೋಧ ವ್ಯಕ್ತವಾಗಿದೆ.

ಚುನಾವಣೆ ಗಿಮಿಕ್‌ ಅಲ್ಲ: ಚುನಾವಣೆಗಾಗಿ ಹೊಸ ಜಿಲ್ಲೆ ರಚನೆಯ ಗಿಮಿಕ್‌ ಮಾಡುತ್ತಿಲ್ಲ. ಒಂದು ವರ್ಷದಿಂದ ಇದನ್ನು ಪ್ರತಿಪಾದನೆ ಮಾಡುತ್ತಾ ಬಂದಿದ್ದೇನೆ. ಅದಕ್ಕಾಗಿ ಹುಣಸೂರು ತಾಲೂಕಲ್ಲಿ ವೇದಿಕೆ ಸಿದ್ಧಪಡಿಸುತ್ತಿದ್ದೇನೆ. ಹಿಂದಿನ ಸರ್ಕಾರದಲ್ಲಿ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ ಮಂಜೂರು ಮಾಡಿಸಿದ್ದೇನೆ. ಸೆಸ್ಕ್ನ ಕೇಂದ್ರ ಕಚೇರಿ ಇದೆ. ಡಿಡಿಪಿಐ ಕಚೇರಿಗೆ ಜಾಗ ಹುಡುಕುತ್ತಿದ್ದೇವೆ.

ಆಡಳಿತದ ದೃಷ್ಟಿಯಿಂದ ಚಿಕ್ಕ ಚಿಕ್ಕ ಜಿಲ್ಲೆಗಳಾಗಬೇಕು ಎಂದು ಹುಂಡೇಕಾರ್‌ ಮತ್ತು ವಾಸುದೇವ ರಾವ್‌ ಆಯೋಗಗಳ ಪ್ರಸ್ತಾಪವನ್ನು ಜನರ ಮುಂದೆ ಇಟ್ಟಿದ್ದೇನೆ. ಪ್ರಸ್ತಾಪ ಮಾಡಿದಾಕ್ಷಣ ನಾಳೆಯೇ ಹುಣಸೂರು ಹೊಸ ಜಿಲ್ಲೆ ಆಗಿಬಿಡುವುದಿಲ್ಲ. ಆರು ತಾಲೂಕುಗಳಲ್ಲೂ ಜನರು ಸಂಘಟಿತರಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 30 ಕಿ.ಮೀ.ಗೊಂದು ಜಿಲ್ಲೆ ಮಾಡಲಾಗಲ್ಲ ಅಂದಿದ್ದಾರೆ.

Advertisement

ಸಿದ್ದರಾಮಯ್ಯ ಪ್ರಸ್ತಾಪ ಮಾಡಿರುವಂತೆ ಭೌಗೋಳಿಕತೆ, ಕಿಲೋಮೀಟರ್‌ ಮುಖ್ಯವಲ್ಲ. ಎನರ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದರು. ಕೇವಲ ಎರಡೂವರೆ ತಾಲೂಕುಗಳನ್ನು ಒಳಗೊಂಡಿರುವ ಉಡುಪಿ, ಯಾದಗಿರಿ ಜಿಲ್ಲೆಯಾಗಿಲ್ಲವೇ?, ಯಾವ ಸಮಿತಿಯ ವರದಿಯೂ ಇಲ್ಲದೆ ಚಿಕ್ಕ ಬಳ್ಳಾಪುರ, ರಾಮನಗರ ಜಿಲ್ಲಾಗಳಾಗಲಿಲ್ಲವೇ?

ಮುಖ್ಯಮಂತ್ರಿ ಜೆ.ಎಚ್‌.ಪಟೇಲರು ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆ ಮಾಡಿದಾಗ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇಕೆ ವಿರೋಧ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ವಿಶ್ವನಾಥ್‌ ಮೈಸೂರು ಜಿಲ್ಲೆಯನ್ನು ವಿಭಜನೆ ಮಾಡಲು ಹೊರಟಿದ್ದಾರೆ ಎನ್ನುವ ಸಾ.ರಾ.ಮಹೇಶ್‌ ಅವರೇ ಕೆ.ಆರ್‌.ನಗರ ತಾಲೂಕನ್ನು ಒಡೆದು ಸಾಲಿಗ್ರಾಮ ತಾಲೂಕು ಮಾಡಿಸಿದ್ದಾರೆ. ಹೊಸ ಜಿಲ್ಲೆ ಪ್ರಸ್ತಾಪವನ್ನು ಟೀಕಿಸುವ ನಾಯಕರು ಹುಂಡೇಕಾರ್‌ ಮತ್ತು ವಾಸುದೇವ ರಾವ್‌ ಸಮಿತಿಗಳ ವರದಿಯನ್ನು ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ನಾಯಕರ ಹೆಸರು: ಹೊಸ ಜಿಲ್ಲೆಗೆ ದೇವರಾಜ ಅರಸರ ಹೆಸರಿಡುವ ಅಗತ್ಯವಿಲ್ಲ. ಯಾವ ಜಿಲ್ಲೆಗೆ ವ್ಯಕ್ತಿಯ ಹೆಸರಿಟ್ಟಿದ್ದಾರೆ ಎನ್ನುವ ನಾಯಕರು ಕೂಪ ಮಂಡೂಕಗಳಿದ್ದಂತೆ ಎಂದು ಜರಿದ ವಿಶ್ವನಾಥ್‌, ಆಂಧ್ರಪ್ರದೇಶದಲ್ಲಿ ರಂಗಾರೆಡ್ಡಿ ಜಿಲ್ಲೆ, ಪ್ರಕಾಶಂ ಜಿಲ್ಲೆ, ಅಲ್ಲೂರಿ ಸೀತಾರಾಂರಾವ್‌ ಜಿಲ್ಲೆಗಳಿಲ್ಲವೆ? ತಮಿಳುನಾಡಲ್ಲಿ ಪೆರಿಯಾರ್‌, ಎಂಜಿಆರ್‌ ಹೆಸರಲ್ಲಿ ಜಿಲ್ಲೆಗಳಿದೆ.

ದೇವರಾಜ ಅರಸು ವ್ಯಕ್ತಿಯಾಗಿರಲಿಲ್ಲ, ಅವರೊಂದು ಶಕ್ತಿಯಾಗಿದ್ದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡ ಅಭಿಮಾನದ ಕಿಚ್ಚು ಹಚ್ಚಿ ಕರ್ನಾಟಕದ ಸುಧಾರಣೆಗೆ ದುಡಿದ ಅರಸರ ಹೆಸರನ್ನು ಹೊಸ ಜಿಲ್ಲೆಗೆ ನಾಮಕರಣ ಮಾಡಲು ಪ್ರಸ್ತಾಪಿಸಿದ್ದೇನೆಯೇ ಹೊರತು ನನ್ನ ಹೆಸರಿಡಿ ಎಂದಿಲ್ಲ. ಮಾಜಿ ಶಾಸಕ ಮಂಜುನಾಥ್‌ಗೆ ಕಲ್ಲಹಳ್ಳಿಯ ದೇವರಾಜ ಅರಸ್‌ ಇಷ್ಟ ಆಗಲಿಲ್ವ ಎಂದು ಪ್ರಶ್ನಿಸಿದರು.

ತಿರುಗೇಟು: ಹಾಸನದ ಕೆಲಸ ಜೆಡಿಎಸ್‌ ಮುಖಂಡರು ನನಗೆ ಬುದ್ಧಿ ಭ್ರಮಣೆಯಾಗಿದೆ, ಚಪ್ಪಲಿಯಲ್ಲಿ ಹೊಡೆಯಬೇಕು ಎಂದೆಲ್ಲಾ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ದೇವರಾಜ ಅರಸರಿಗೋಸ್ಕರ ನಾನು ಯಾವುದರಲ್ಲಾದರೂ ಹೊಡೆಸಿಕೊಳ್ಳಲು ಸಿದ್ಧ ಎಂದು ಅವರು, ನನ್ನ ಬುದ್ಧಿ ಚೆನ್ನಾಗಿಯೇ ಇದೆ. ಅಧಿಕಾರ ಹೋಗಿದ್ದರಿಂದ ನಿಮ್ಮ ಬುದ್ಧಿ ಭ್ರಮಣೆಯಾಗಿದೆ ಎಂದು ತಿರುಗೇಟು ನೀಡಿದರು.

ಸಾ.ರಾ.ಮಹೇಶ್‌ ತಾಲೂಕುಗಳ ಮಾಲೀಕನಲ್ಲ: ಹುಣಸೂರು ಜಿಲ್ಲೆಯಾಗಬೇಕೆಂದು ರೈಲು ಮಾರ್ಗ ಬರುತ್ತಿದೆ. ಎಂಟು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗುತ್ತಿದೆ. ಜಿಲ್ಲೆಯಲ್ಲಿ ಕೃಷಿ, ಹೈನುಗಾರಿಕೆ, ರೈತರು, ಉದ್ಯೋಗ ಸೇರಿದಂತೆ ಎಲ್ಲಾ ವಲಯವನ್ನು ಸಿದ್ಧಗೊಳಿಸುತ್ತಿದ್ದೇವೆ. ಇದೆಲ್ಲ ರಿಯಲ್‌ ಎಸ್ಟೇಟ್‌ ಮಾಡುವವರಿಗೆ ಗೊತ್ತಾಗುವುದಿಲ್ಲ ಎಂದು ಸಾರಾ.ಮಹೇಶ್‌ಗೆ ಎಚ್‌.ವಿಶ್ವನಾಥ್‌ ತಿರುಗೇಟು ನೀಡಿದರು.

ಕೆ.ಆರ್‌.ನಗರ ಮತ್ತು ಸಾಲಿಗ್ರಾಮ ತಾಲೂಕುಗಳನ್ನು ಹುಣಸೂರು ಜಿಲ್ಲೆಗೆ ಸೇರಿಸಲು ಬಿಡುವುದಿಲ್ಲ ಎನ್ನಲು ಈ ಎರಡೂ ತಾಲೂಕುಗಳಿಗೆ ಸಾ.ರಾ.ಮಹೇಶ್‌ ಮಾಲೀಕನಲ್ಲ. ಅಲ್ಲಿನ ಜನರು ನಮ್ಮ ಮಾಲೀಕರು ಅವರ ಹತ್ತಿರ ಹೋಗಿ ಜನಾಭಿಪ್ರಾಯ ಪಡೆಯುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next