Advertisement

ಪುತ್ತೂರು ತಾಲೂಕಿನಲ್ಲಿ  18 ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಣೆಪೂರ್ಣ

04:43 PM Nov 25, 2017 | Team Udayavani |

ಪುತ್ತೂರು: ಬೇಸಗೆ ಕಾಲದಲ್ಲಿ ನೀರಿನ ಕೊರತೆಯಿಂದ ತತ್ತರಿಸುವ ಪ್ರಮೇಯ ಪುತ್ತೂರಿಗೆ ತಪ್ಪಿಲ್ಲ. ಬಿಸಿಲು ತೀವ್ರಗೊಳ್ಳುತ್ತಿರುವ ಹೊತ್ತಲ್ಲೇ ಹೊಳೆ, ತೋಡಿನಲ್ಲಿ ಉಳಿದಿರುವ ನೀರನ್ನು ಸಂರಕ್ಷಿಸಲು, ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ಆರಂಭಗೊಂಡಿದ್ದು, ಈಗಾಗಲೇ 18 ಕಿಂಡಿ ಅಣೆಕಟ್ಟಿನ ಹಲಗೆ ಜೋಡಣೆ ಪೂರ್ಣಗೊಂಡಿದೆ.

Advertisement

198 ಕಡೆ ಸ್ಥಳ ಪರಿಶೀಲನೆ
ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಲಕ್ಷ ರೂ. ವೆಚ್ಚದೊಳಗೆ ಕಿಂಡಿ ಅಣೆಕಟ್ಟು ನಿರ್ಮಿಸಬಹುದಾಗಿದೆ. ಕಳೆದ ಬಾರಿ 41 ಗ್ರಾ.ಪಂ. ವ್ಯಾಪ್ತಿಯಲ್ಲಿ 198 ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲಾಗಿತ್ತು. ಅದರಲ್ಲಿ 64 ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಈ ಬೇಸಗೆ ಕಾಲದಲ್ಲಿ 59 ಕಿಂಡಿಕಟ್ಟ ಪೂರ್ಣಗೊಂಡಿದ್ದು, 5 ಕಿಂಡಿ ಅಣೆಕಟ್ಟಿನ ಕಾಮಗಾರಿ ಪ್ರಗತಿ ಹಂತದಲ್ಲಿದೆ.

18 ಕಡೆಗಳಲ್ಲಿ ಪೂರ್ಣ
ತಾಲೂಕಿನ ಶಿರಾಡಿ, ನೆಲ್ಯಾಡಿ, ಅರಿಯಡ್ಕ, ಬನ್ನೂರು, ಕಡಬ, ಕಬಕ, ಕೊಡಿಪ್ಪಾಡಿ, ಕೆದಂಬಾಡಿ, ಬಿಳಿನೆಲೆ, ಪೆರಾಬೆ, ಐತ್ತೂರು, ಕೊಣಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಒಂದು ಹಾಗೂ ಬಲ್ನಾಡು-3, ಆರ್ಯಾಪು-2, ರಾಮಕುಂಜದಲ್ಲಿ 2 ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸಲಾಗಿದೆ. ಐದು ಲಕ್ಷ ರೂ. ವೆಚ್ಚದಲ್ಲಿ ಗ್ರಾ.ಪಂ. ವ್ಯಾಪ್ತಿಯ ತೋಡುಗಳಲ್ಲಿ ಜಲ ಇಂಗಿಸುವ ನಿಟ್ಟಿನಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಲ್ಲಿ ಈಗ ನೀರು ತುಂಬಿದೆ.

ಅವಕಾಶ ಅಧಿಕ
ಜಿಲ್ಲೆಯ ಉಳಿದ ತಾಲೂಕುಗಳನ್ನು ಗಮನಿಸಿದರೆ, ಪುತ್ತೂರಿಗೆ ಅಂತರ್‌ ಜಲದ ಸಂರಕ್ಷಣೆಗೆ ಅವಕಾಶ ಹೆಚ್ಚು. ಬೇಸಗೆ ಕಾಲದಲ್ಲಿ ಸಣ್ಣ ಹೊಳೆ, ತೋಡಿಗೆ ಮಾನವ ನಿರ್ಮಿತ ಪರಿಕರ ಬಳಸಿ, ನೀರಿಗೆ ತಡೆವೊಡ್ಡಿ ಅದನ್ನು ಇಂಗಿಸಲು ಸಾಧ್ಯವಿದೆ. ಕುಮಾರಾಧಾರೆ, ನೇತ್ರಾವತಿ, ಗೌರಿ ಹೊಳೆಯ ಜತೆಗೆ ಸಣ್ಣ-ಪುಟ್ಟ ತೋಡುಗಳು ಇಲ್ಲಿವೆ. ಕಳೆದೆರಡು ವರ್ಷದಲ್ಲಿ ಕುಡಿಯಲು ಮತ್ತು ಕೃಷಿಗೆ ನೀರಿನ ಅಭಾವ ಕಂಡು ಬಂದು, ಸಾವಿರಕ್ಕೂ ಮಿಕ್ಕಿ ಕೊಳವೆಬಾವಿ ಕೊರೆಯಲಾಗಿತ್ತು. ಆದರೆ ಅವುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗದ ಕಾರಣ, ಪರಿಸರ ಸ್ನೇಹಿ ಜಲ ಸಂರಕ್ಷಣೆಗೆ ಉದ್ಯೋಗ ಖಾತರಿ ಯೋಜನೆ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಎರಡು
ವರ್ಷಗಳಿಂದ ಆ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದು, ಈ ಬೇಸಗೆಯಲ್ಲಿ ಅದು ಫಲ ಕೊಡಲಿದೆ.

ಡಿ. 10ಕ್ಕೆ ಗಡುವು
ಆಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಡಿ. 10ರೊಳಗೆ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸುವಂತೆ ತಾ.ಪಂ. ವತಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಹಿಂದೆ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್‌ ಅಧಿಕಾರಿಗಳ ಸಭೆಯಲ್ಲಿ ಅಕ್ಟೋಬರ್‌ ಅಂತ್ಯದೊಳಗೆ ಹಲಗೆ ಜೋಡಣೆ ಕೆಲಸ ಪೂರ್ಣವಾಗಬೇಕು ಎಂದು ಸೂಚಿಸಲಾಗಿತ್ತು. ಈಗ ದಿನಾಂಕ ವಿಸ್ತರಣೆಗೊಂಡಿದೆ.

Advertisement

30 ಕಿಂಡಿ ದುರಸ್ತಿ ಇಲ್ಲ
ತಾಲೂಕಿನಲ್ಲಿ ಅಂಕಿ-ಅಂಶದ ಆಧಾರದಲ್ಲಿ 30 ಅಣೆಕಟ್ಟುಗಳು ನಾದು ರಸ್ತಿಯಲ್ಲಿದೆ. ವರ್ಷಂಪ್ರತಿ ಮಳೆಗಾಲದ ಪೂರ್ವ ಮತ್ತು ಅನಂತರ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡಬೇಕು. ಹಲಗೆ ನಿರ್ವಹಣೆ, ಕಸ ಕಡ್ಡಿ ವಿಲೇವಾರಿ ಇವೆಲ್ಲವೂ ಕಡ್ಡಾಯ. ಹಲಗೆಯಲ್ಲಿ ಸಣ್ಣ ಸಮಸ್ಯೆ ಬಂದರೂ, ಹೊಸ ಹಲಗೆ ಜೋಡಿಸಬೇಕು. ಇಲಾಖೆಯ ಲೆಕ್ಕಾಚಾರದ ಪ್ರಕಾರ ಅಣೆಕಟ್ಟಿನ 1 ಚದರ ಮೀ.ಗೆ ವಾರ್ಷಿಕ 1,300 ರೂ. ಖರ್ಚು ಬೀಳುತ್ತದೆ. ಆದರೆ ಸರಕಾರದಿಂದ ದೊರೆಯುವುದು 800 ರೂ. ಮಾತ್ರ. ಜನರು ಹಲಗೆ ಹಾಕುವುದು, ತೆಗೆಯುವ ಕೆಲಸ ಮಾಡಿದ್ದರೂ, ವರ್ಷಂಪ್ರತಿ ಅದರ ಬಗ್ಗೆ ಆಸಕ್ತಿ ಇಳಿಮುಖದತ್ತ ಸಾಗಿದೆ. ಹಾಗಾಗಿ ಕಿಂಡಿ ಅಣೆಕಟ್ಟು ಇದ್ದರೂ ಹಲಗೆ ಹಾಕಲು, ತೆಗೆಯಲು, ಹಾಳಾದಾಗ ದುರಸ್ತಿ ಮಾಡಲು ಹೆಣಗಾಡುವ ಸ್ಥಿತಿ. ಹಾಗಾಗಿ ಸಣ್ಣ ನೀರಾವರಿ ಇಲಾಖೆ, ಜಿ.ಪಂ. ಮೂಲಕ
ಹೊಳೆ, ನದಿಗಳಲ್ಲಿ ನಿರ್ಮಾಣಗೊಂಡು ಶಿಥಿಲವಾಗಿರುವ ಅಣೆಕಟ್ಟಿಗಳು ದುರಸ್ತಿ ಆಗದೆ ಪಾಳು ಬಿದ್ದವೂ ಇವೆ.

ಪ್ರಸ್ತಾವನೆ ಏನಾಗಿದೆ?
2016-17ನೇ ಸಾಲಿನಲ್ಲಿ ಅವಿ ಭಜಿತ ಜಿಲ್ಲೆಯಲ್ಲಿ ಹೊಸ ಅಣೆ ಕಟ್ಟು ನಿರ್ಮಾಣಕ್ಕೆ 20 ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿತ್ತು. ಒಂದು ಅಣೆ ಕಟ್ಟಿಗೆ 50ರಿಂದ 70 ಲಕ್ಷ ಖರ್ಚು ಆದಲ್ಲಿ, ಪ್ರಸ್ತಾ ವನೆಯ ಮೊತ್ತದಲ್ಲಿ 40 ಅಣೆಕಟ್ಟು ನಿರ್ಮಿಸಬಹುದು. ಇವೆಲ್ಲವೂ ಈ ವರ್ಷದಲ್ಲಿ ಅನುದಾನ ಲಭ್ಯಗೊಂಡು ಅನುಷ್ಠಾನಿಸುವ ಯೋಜನೆ. ಈಗ ಅವು ಯಾವ ಹಂತದಲ್ಲಿ ಇದೆ ಅನ್ನುವುದು ಸ್ಥಳೀಯಾಡಳಿತದ ಗಮನಕ್ಕೆ ಬಂದಿಲ್ಲ.

ಸೂಚನೆ ನೀಡಲಾಗಿದೆ 
ಈಗಾಗಲೇ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. 18 ಪೂರ್ಣಗೊಂಡಿದೆ. ಉಳಿದ 41 ಕಟ್ಟಕ್ಕೆ ಜೋಡಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಡಿ.10ರೊಳಗೆ ಹಲಗೆ ಜೋಡಿಸುವಂತೆ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗಿದೆ.
ಜಗದೀಶ್‌ ಎಸ್‌.,
   ತಾ.ಪಂ. ಇ.ಒ., ಪುತ್ತೂರು

  ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next