Advertisement

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ

04:16 PM Jul 10, 2019 | Team Udayavani |

ಸಿದ್ದಾಪುರ: ತಾಲೂಕಿನ ಕಾನಸೂರಲ್ಲಿ ಕೆಲವು ಖಾಸಗಿ ಹಿತಾಸಕ್ತಿಯುಳ್ಳವರು ಇಂಗ್ಲಿಷ ಮಾಧ್ಯಮ ಶಾಲೆ ಪ್ರಾರಂಭಿಸಲು ಹೊರಟಿದ್ದು, ಇದರಿಂದ ಸ್ಥಳೀಯ ಸರಕಾರಿ ಶಾಲೆಗಳನ್ನು ಮುಗಿಸುವ ಸಂಚು ರೂಪಿಸಲಾಗುತ್ತಿದೆ ಎಂದು ಕಾನಸೂರು ಸರಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸುಭಾಷ್‌ ನಾಯ್ಕ ಆರೋಪಿಸಿದರು.

Advertisement

ಅವರು ತಾಲೂಕಿನ ಕಾನಸೂರು ಪ್ರಾಥಮಿಕ ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾನಸೂರನಲ್ಲಿ ಒಂದು ಮನೆಯಲ್ಲಿ ಸುಮಾರು 10-12 ವಿದ್ಯಾರ್ಥಿಗಳನ್ನು ಸೇರಿಸಿ ಶಾಲೆ ನಡೆಸಲಾಗುತ್ತಿದೆ. ಇದಕ್ಕೆ ಸರಕಾರದ ಅನುಮತಿ ಇರುವುದಿಲ್ಲ. ಅಲ್ಲದೆ ಇದನ್ನು ನಡೆಸಲು ಯಾವುದೇ ನಿಯಮ ಪಾಲನೆಯಾಗಿಲ್ಲ. ಶಿಕ್ಷಣ ಇಲಾಖೆಯವರು ಇದನ್ನು ನಡೆಸದಂತೆ ಸೂಚಿಸಿದೆ. ಆದರೂ ಇದಕ್ಕೆ ಸಂಬಂಧಿಸಿದವರು ರಾಜಕೀಯ ಹಾಗೂ ಹಣದ ಪ್ರಭಾವ ಬಳಸಿ ನಾವು ಅನುಮತಿ ತರುತ್ತೇವೆ. ನೀವು ನಿಮ್ಮ ಮಕ್ಕಳನ್ನು ಕಳುಹಿಸಿ ಎಂದು ಪಾಲಕರನ್ನು ಒತ್ತಾಯಿಸುತ್ತಿದ್ದಾರೆ.

ನಮ್ಮ ಶಾಲೆಯ 8 ವಿದ್ಯಾರ್ಥಿಗಳು ಈಗಾಗಲೇ ಶಾಲೆಗೆ ಬರುತ್ತಿಲ್ಲ, ಗ್ರಾಮದ ಸುತ್ತಲಿನ ಶಾಲೆಯ ಕೆಲವು ವಿದ್ಯಾರ್ಥಿಗಳನ್ನೂ ಒತ್ತಾಯ ಪೂರ್ವಕವಾಗಿ ಕರೆಸಲಾಗುತ್ತಿದೆ. ಈ ಬಗ್ಗೆ ಸುಮಾರು 5-6 ಸರಕಾರಿ ಶಾಲೆಯ ಎಸ್‌ಡಿಎಂಸಿಯವರು ಹಳೆಯ ವಿದ್ಯಾರ್ಥಿಗಳು, ಕೆಲವು ಸಂಘಟನೆಗಳವರು ಸೇರಿ ಖಾಸಗಿ ಇಂಗ್ಲಿಷ ಶಾಲೆ ತೆರಯಲು ಅನುಮತಿ ಕೊಡಬಾರದು ಎಂದು ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ, ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಮನವಿ ಸಲ್ಲಿಸಿದ್ದೇವೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೂ ಮನವಿ ನೀಡಿದ್ದೇವೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಧಾರವಾಡದ ಶಿಕ್ಷಣ ಆಯುಕ್ತರನ್ನು ಖುದ್ದು ಭೇಟಿ ಮಾಡಿ ಖಾಸಗಿ ಶಾಲೆಗೆ ಅನುಮತಿ ಕೊಡದೆ ಸರಕಾರಿ ಶಾಲೆಯನ್ನು ಉಳಿಸಬೇಕು ಎಂದು ಮನವಿ ಮಾಡಿದ್ದೇವೆ. ಅವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಆದರೆ ಸರಕಾರಿ ಶಾಲೆ ಉಳಿಸಬೇಕಾದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರು ತನ್ನ ಮಕ್ಕಳನ್ನು ಈ ಖಾಸಗಿ ಶಾಲೆಗೆ ಸೇರಿಸಿರುವುದಲ್ಲೇ ಬೇರೆಯವರನ್ನೂ ಸೇರುವಂತೆ ಪ್ರೇರೇಪಿಸುತ್ತಿದ್ದಾರೆ. ಅಲ್ಲದೆ ಶಾಲೆ ನಡೆಸುವ ಖಾಸಗಿ ವ್ಯಕ್ತಿಗಳು ತಾವು ಎಲ್ಲವನ್ನು ಸರಿಮಾಡಿದ್ದೇವೆ, ಸದ್ಯದಲ್ಲೆ ನಮಗೆ ಅನುಮತಿ ದೊರೆಯುತ್ತದೆ ಎಂದು ಪಾಲಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದರು.

ನಮ್ಮ ಶಾಲೆಯಲ್ಲಿ ಈಗಾಗಲೇ ಒಂದನೇ ತರಗತಿಯಿಂದ ಇಂಗ್ಲಿಷ ಪಠ್ಯ ಕಲಿಸುವುದು ಬಂದಿದೆ. ಇದನ್ನು ನಮ್ಮ ಶಾಲೆ ಬೋರ್ಡ್‌ಲ್ಲಿ ಬರೆಯಲು ಸರಕಾರ ಅನುಮತಿ ನೀಡಬೇಕು. ಸ್ಥಳೀಯ ಬಿಇಒ ವರದಿ ನೀಡಲು ಖಾಸಗಿ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಆದರೆ ಎಸ್‌ಡಿಎಂಸಿಯವರನ್ನಾಗಲಿ, ಪಾಲಕರನ್ನಾಗಲಿ ಭೇಟಿ ಮಾಡಿಲ್ಲ. ಒಂದು ವೇಳೆ ನಮ್ಮ ಮನವಿ ತಿರಸ್ಕರಿಸಿ ಇಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆ ತೆರಯಲು ಅನುಮತಿ ನೀಡಿದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಚೇತನಾ ನಾಯ್ಕ, ಗ್ರಾಪಂ ಸದಸ್ಯೆ ಸವಿತಾ ಕಾನಡೆ, ಸದಸ್ಯರಾದ ಮಹೇಶ ನಾಯ್ಕ, ವಿನಾಯಕ ಹೆಗಡೆ, ಶಾಲಿನಿ ನಾಯ್ಕ, ದಿನೇಶ ಶಾನಭಾಗ, ವರಲಕ್ಷ್ಮೀ ವರ್ಣೇಕರ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next