Advertisement

ಬಯಲು ಸೀಮೆಯಲ್ಲೊಂದು ಪುಟ್ಟ ಮಲೆನಾಡು!

10:39 AM Jun 20, 2018 | |

ಕೂಡ್ಲಿಗಿ: ಏಷ್ಯಾದ ಎರಡನೇ ಕರಡಿಧಾಮವನ್ನಾಗಿ ಸರ್ಕಾರ ಘೋಷಣೆ ಮಾಡಿದ ಬಳಿಕ ತಾಲೂಕಿನ ಗುಡೇಕೋಟೆ ಅರಣ್ಯ ಪ್ರದೇಶವೀಗ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. 

Advertisement

ಗುಡೇಕೋಟೆ ಅರಣ್ಯ ಪ್ರದೇಶ ಎಂದರೆ ಸಾಕು, ಬರೀ ಬಯಲು ಸೀಮೆ. ಬಿಸಿಲಿನ ಪ್ರಖರ, ಎಲ್ಲಿ ನೋಡಿದರೂ ಕಲ್ಲು ಬಂಡೆ, ಬರೀ ಒಣ ಹವೆ, ಕುರುಚಲು ಕಾಡು ಎಂಬ ಖ್ಯಾತಿ ಪಡೆದಿತ್ತು. ಇತ್ತೀಚಿಗೆ ಸುರಿದ ಮಳೆಯಿಂದಾಗಿ ಗಿಡಮರಗಳು ಚಿಗರೊಡೆದು ಗುಡೇಕೋಟೆ ಅರಣ್ಯ ಪ್ರದೇಶವೀಗ ಹಚ್ಚ ಹಸಿರಿನಿಂದ ಕಂಗೋಳಿಸುತ್ತಿದ್ದು, ಬಯಲು ಸೀಮೆಯಲ್ಲೂ ಮಲೆನಾಡನ್ನೂ ನಾಚಿಸುವಂತಾಗಿದೆ.

ಗುಡೇಕೋಟೆ ಸುತ್ತಮುತ್ತ ಅಂದಾಜು 3848.84 ಹೆಕ್ಟೇರ್‌ನಷ್ಟು ಮಲೆನಾಡು ನಾಚಿಸುವ ದಟ್ಟಾರಣ್ಯ ಪ್ರದೇಶವಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅಲ್ಲದೇ, ಇಲ್ಲಿ ಹಲವಾರು ವೈಶಿಷ್ಟಗಳನ್ನು ಕಾಣಬಹುದು. ಪ್ರತಿನಿತ್ಯ ಕರಡಿ, ಚಿರತೆ, ನವಿಲು, ಸಾರಂಗ, ಮುಳ್ಳಹಂದಿ, ನರಿ, ಕಾಡು ಬೆಕ್ಕು, ಸಿವೆಟ್‌, ಸಸ್ತನಿ ಜಾತಿಗೆ ಸೇರಿದ ವನ್ಯಪ್ರಾಣಿ ಹೀಗೆ ನೂರಾರು ಪ್ರಾಣಿ, ವಿವಿಧ ಜಾತಿಯ ಪಕ್ಷಿಗಳು ಸ್ವಚ್ಚಂದವಾಗಿ ಕಾಲ ಕಳೆಯುತ್ತವೆ.

ಮಾತ್ರವಲ್ಲ, ಮಳೆಗಾಲದಲ್ಲಿ ಬೆಟ್ಟ-ಗುಡ್ಡಗಳ ಮೇಲೆ ನೀರಿನ ಝರಿ.. ಪ್ರಪಾತ, ಬೇಸಿಗೆಯಲ್ಲೂ ಬತ್ತದ ಜಂಬುನೇರಳೆ ಹಳ್ಳ ನಿಮ್ಮನ್ನು ಮಲೆನಾಡಿಗೆ ಕರೆದೊಯ್ಯುತ್ತವೆ. ಈ ಅರಣ್ಯ ಪ್ರದೇಶದಲ್ಲಿ ನೂರಾರು ಜಾತಿಯ ಗಿಡ, ಮರಗಳು, ಔಷಧ ಸಸ್ಯಗಳು ಎಂತವರನ್ನು ಬೆರಗುಗೊಳಿಸುತ್ತವೆ. ಹೀಗಾಗಿ ಬಯಲು ಸೀಮೆಯ ಮಲೆನಾಡು ನೋಡಲು ಮಳೆಗಾಲದಲ್ಲಂತೂ ಮತ್ತಷ್ಟು ಸೊಬಗು. ಈಗ ಜಂಬುನೇರಳೆ ಹಣ್ಣಿನ ಸುಗ್ಗಿ. ಎಲ್ಲಿ ನೋಡಿದರೂ ನೇರಳೆ, ಜಾನಿ, ಕವಳೆ ಹಣ್ಣುಗಳು ಕಾಣ ಸಿಗುತವೆ. ನೀವು ಈ ಹಣ್ಣುಗಳನ್ನು ಸವಿಯಬಹುದು.

ಕರಡಿಧಾಮಕ್ಕೆ ಬರುವ ಮಾರ್ಗ

Advertisement

ನೀವು ಚಿಲುಮೆಹಳ್ಳಿ ಸುತ್ತಮುತ್ತಲ ಅರಣ್ಯ, ಬೆಟ್ಟಗುಡ್ಡ ನೋಡಬೇಕೆಂದರೆ ಕೂಡ್ಲಿಗಿ ಮೂಲಕ ಗುಡೇಕೋಟೆ ಮಾರ್ಗವಾಗಿ ರಾಂಪುರಕ್ಕೆ ಹೋಗುವ ಮಾರ್ಗದಲ್ಲಿ ಅಪ್ಪೇನಹಳ್ಳಿ ತಾಂಡಾಕ್ಕೆ ಬಂದು ಅಲ್ಲಿಂದ ಎಡಗಡೆಗೆ ಹೋಗುವ ರಸ್ತೆಯಲ್ಲಿ 4 ಕಿ.ಮೀ. ಕ್ರಮಿಸಿ ಚಿಲುಮೆಹಳ್ಳಿ ತಾಂಡಾಕ್ಕೆ ಬರಬೇಕು. ಅಲ್ಲಿಂದ ಕಾಣುವ ಬೆಟ್ಟಗುಡ್ಡಗಳ ಅರಣ್ಯ ಪ್ರದೇಶವೇ ನಿಮ್ಮನ್ನು ಪುಟ್ಟ ಮಲೆನಾಡು ನೋಡಬಹುದು. ಬಳ್ಳಾರಿ ಮೂಲಕ ರಾಂಪುರದಿಂದ ಗುಡೇಕೋಟೆ ಹೋಗುವ ಮಾರ್ಗದಲ್ಲಿ ಬಂದರೆ ನೀವು ಕೂಡ್ಲಿಗಿ ತಾಲೂಕಿನ ಮಲೆನಾಡು ನೋಡಬಹುದು. ಇಲ್ಲಿ ಕರಡಿಗಳ ಘರ್ಜನೆಯನ್ನು ಕೇಳಬಹುದು. ಆದರೆ ಅರಣ್ಯದೊಳಕ್ಕೆ ಹೋಗುವ ಸಾಹಸ ಮಾಡಿದರೆ, ಕರಡಿಗಳು ದಾಳಿ ಮಾಡುವ ಸಂಭವವೇ ಹೆಚ್ಚು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಅವಶ್ಯ. 

ನಮ್ಮೂರ ಸುತ್ತಮುತ್ತ ಸಾಕಷ್ಟು ಚಿರತೆ, ಕರಡಿಗಳು, ದಟ್ಟಾರಣ್ಯವಿದೆ. ಈಗ ಕರಡಿಧಾಮವಾಗಿರೋದ್ರಿಂದ ಅರಣ್ಯ ಉಳಿಯೋದ್ರ ಜೊತೆಗೆ ಪ್ರಾಣಿ-ಪಕ್ಷಿಗಳಿಗೂ ನೆಲೆ ಸಿಕ್ಕಿದ್ದು, ನಮ್ಗೆ ಸಂತಸ ತಂದಿದೆ. ಈ ಅರಣ್ಯ ಪ್ರದೇಶಕ್ಕೆ ಶಾಲಾ ಮಕ್ಕಳನ್ನು ಕರೆತಂದು ಇಲ್ಲಿನ ಪರಿಸರ ತೋರಿಸಬೇಕು.ಮಕ್ಕಳಿಗೂ ಪ್ರಾಣಿ-ಪಕ್ಷಿ, ಗಿಡಮರಗಳ ಪರಿಚಯ ಮಾಡಬೇಕು. ಆದ್ರೆ ಕಾಡಿನಲ್ಲಿ ಪ್ರವಾಸಿಗರು ಹೋಗಲು ಸುರಕ್ಷಿತ ಕ್ರಮವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು.
ಸುರೇಶ್‌, ಗುಡೇಕೋಟೆ ಗ್ರಾಮ

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯಲ್ಲಿ ಮತ್ತೂಂದು ಕರಡಿಧಾಮಕ ಸರ್ಕಾರ ಮುಂದಾಗಿದ್ದು, ಇಲ್ಲಿ ಅಂದಾಜಿನ ಪ್ರಕಾರ 200ಕ್ಕೂ ಹೆಚ್ಚು ಕರಡಿಗಳಿವೆ. ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಸಹಸ್ರಾರು ಹೆಕ್ಟೇರ್‌
ಅರಣ್ಯ ಪ್ರದೇಶದಲ್ಲಿ ಕರಡಿಧಾಮ ನಿರ್ಮಿಸಲು ಸರ್ಕಾರ ಘೋಷಿಸಿದ್ದು, ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದೆ. ಈ ಭಾಗದಲ್ಲಿ ಅರಣ್ಯ ನಾಶ ಮಾಡಲು ಬಿಡುವುದಿಲ್ಲ. ಸ್ಥಳೀಯರು ಉರುವಲುಗಾಗಿ ಅರಣ್ಯನಾಶ ಮಾಡಬಾರದೆಂದು ಪರ್ಯಾಯ ಯೋಜನೆಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಉಳಿಸಲು ಜನರ ಸಹಕಾರ ಅತಿ ಮುಖ್ಯವಾಗಿದೆ.
ಮಂಜುನಾಥ್‌, ಗುಡೇಕೋಟೆಯ ವಲಯ ಅರಣ್ಯಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next