Advertisement

ಕಾವಿನಮೂಲೆ: ತಂಗುದಾಣಕ್ಕೆ ಕಂಬವೇ ಆಧಾರ!

11:20 PM Apr 19, 2019 | mahesh |

ಬೆಳ್ಳಾರೆ: ಬೆಳ್ಳಾರೆ-ಸುಳ್ಯ ರಸ್ತೆಯ ಕಾವಿನ ಮೂಲೆಯಲ್ಲಿರುವ ಪ್ರಯಾಣಿಕರ ಬಸ್‌ ತಂಗುದಾಣವನ್ನು ಕಳೆದ ಮೂರು ವರ್ಷಗಳಿಂದ ಮರದ ಕಂಬವೇ ಆಧರಿಸಿ ನಿಂತಿದೆ.  ಬೆಳ್ಳಾರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆಳ್ಳಾರೆಯಿಂದ ಸುಳ್ಯ ಮುಖ್ಯ ರಸ್ತೆಯ ಒಂದು ಕಿ.ಮೀ. ದೂರದಲ್ಲಿ ಈ ಬಸ್‌ ತಂಗುದಾಣವಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಶ್ರಯಿಸುವ ತಂಗುದಾಣವಿದು. ಆದರೆ ಈಗ ತಂಗುದಾಣದೊಳಗಡೆ ಕೂತು ತಲೆ ಎತ್ತಿ ನೋಡಿದರೆ ಒಂದು ಮರದ ಕಂಬ ಮಾತ್ರ ಇಡೀ ಬಸ್‌ ನಿಲ್ದಾಣದ ಛಾವಣಿಯನ್ನು ಆಧರಿಸಿ ನಿಂತಿರುವುದು ಗೋಚರಿಸುತ್ತದೆ.

Advertisement

ಈ ಬಸ್‌ ನಿಲ್ದಾಣಕ್ಕೆ ನಾಮಫ‌ಲಕವನ್ನು ಸ್ಥಳೀಯ ಯುವಕರೇ ಕೊಡುಗೆಯಾಗಿ ನೀಡಿದ್ದರು. ಮೂರು ವರ್ಷದ ಹಿಂದೆ ಈ ಬಸ್‌ ನಿಲ್ದಾಣದ ಛಾವಣಿಯ ಮರದ ಪಕ್ಕಾಸು ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯರು ಛಾವಣಿಗೆ ಆಧಾರವಾಗಿ ಮರದ ಕಂಬವನ್ನು ಆಧರಿಸಿ ಇಟ್ಟಿದ್ದಾರೆ. ಸುಳ್ಯ ಹಾಗೂ ಬೆಳ್ಳಾರೆಗೆ ಪ್ರಯಾಣಿಸುವ ಈ ಭಾಗದ ಹಲವಾರು ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ಬಸ್ಸು ತಂಗುದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಳೆಗಾಲಕ್ಕೆ ಅಪಾಯಕಾರಿ
ಗಾಳಿ-ಮಳೆಗೆ ಛಾವಣಿ ಪೂರ್ಣವಾಗಿ ಕುಸಿದು ಬೀಳುವ ಅಪಾಯದಲ್ಲಿದ್ದು, ಮೂರು ವರ್ಷವಾದರೂ ಇದನ್ನು ಸರಿಪಡಿಸಲು ಯಾರೂ ಮುಂದೆ ಬಂದಿಲ್ಲ. ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಕಂಬ ಆಧರಿಸಿರುವುದನ್ನು ನೋಡಿ ಬಸ್‌ ನಿಲ್ದಾಣದಲ್ಲಿ ಕುಳಿತುಕೊಳ್ಳದೆ ರಸ್ತೆ ಬದಿಯೇ ಬಸ್ಸುಗಳಿಗೆ ಕಾಯುತ್ತಿದ್ದಾರೆ. ಈ ವರ್ಷದ ಮಳೆಗಾಲಕ್ಕೆ ಮೊದಲು ಸಂಬಂಧಪಟ್ಟವರು ಬಸ್‌ ನಿಲ್ದಾಣಕ್ಕೆ ಕನಿಷ್ಠ ಸಿಮೆಂಟ್‌ ಶೀಟ್‌ ಹಾಕಿಯಾದರೂ ಸರಿಪಡಿಸಿ ಪ್ರಾಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕಿದೆ.

ಅಪಾಯ ತಪ್ಪಿದ್ದಲ್ಲ
ಬೆಳ್ಳಾರೆ-ಸುಳ್ಯ ರಸ್ತೆಯಾಗಿ ಸಾಗುವ ದ್ವಿಚಕ್ರ ವಾಹನ ಸವಾರರೂ ಅಕಾಲಿಕ, ವಿಪರೀತ ಮಳೆಯ ಸಂದರ್ಭ ಇದೇ ನಿಲ್ದಾಣದೊಳಗಡೆ ನಿಲ್ಲುತ್ತಾರೆ. ಇಂತಹ ಸಂದರ್ಭ ಅವಘಡವೇನಾದರೂ ಸಂಭವಿಸಿದರೆ ಅಪಾಯ ತಪ್ಪಿದ್ದಲ್ಲ.

 ಪರಿಶೀಲಿಸಿ ಕ್ರಮ
ತಂಗುದಾಣವನ್ನು ಪರಿಶೀಲಿಸಿ, ದುರಸ್ತಿಯ ಬಗ್ಗೆ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗುವುದು. ಬೀಳುವ ಸ್ಥಿತಿಯಲ್ಲಿದ್ದರೆ ತತ್‌ಕ್ಷಣ ದುರಸ್ತಿಪಡಿಸಲಾಗುವುದು.
ಧನಂಜಯ ಕೆ.ಆರ್‌., ಪಿಡಿಒ, ಬೆಳ್ಳಾರೆ ಗ್ರಾ.ಪಂ.

Advertisement

ದುರಸ್ತಿಗೊಳಿಸಿ
ಮೂರು ವರ್ಷಗಳಿಂದ ಮರದ ಕಂಬವೇ ಆಧಾರವಾಗಿರುವುದನ್ನು ಗಮನಿಸುತ್ತಿದ್ದರೂ ಈ ತಂಗುದಾಣವನ್ನು ಯಾರೂ ದುರಸ್ತಿಗೊಳಿಸಲು ಮುಂದಾಗದೇ ಇರುವುದು ವಿಪರ್ಯಾಸ. ಈ ವರ್ಷದ ಮಳೆಗಾಲಕ್ಕೆ ಮೊದಲು ಇದನ್ನು ಸರಿಪಡಿಸಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕು.
ಪ್ರವೀಣ್‌ ಕಾವಿನಮೂಲೆ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next