ಬೆಂಗಳೂರು: ಪುಟ್ಟೇನಹಳ್ಳಿ ಕೆರೆಯ 500 ಮೀಟರ್ ವ್ಯಾಪ್ತಿಯೊಳಗೆ “ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ’ ಸ್ಥಾಪನೆಗೆ ನೀಡಿರುವ “ಪರಿಸರ ಪರವಾನಗಿ’ಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ಯಲಹಂಕ ಪುಟ್ಟೇನಹಳ್ಳಿ ಲೇಕ್ ಆ್ಯಂಡ್ ಬರ್ಡ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎಸ್.ಸಂಗುಣ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರವಿ ಮಳಿಮಠ ಹಾಗೂ ನ್ಯಾ.ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ, ಈ ಕರಿತು “ರಾಷ್ಟ್ರೀಯ ಹಸಿರು ನ್ಯಾಯಪೀಠ’ಕ್ಕೆ (ಎನ್‌ಜಿಟಿ) ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಿತು.
ವಿದ್ಯುತ್ ಸ್ಥಾವರ ಸ್ಥಾಪನೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಮನವಿ ಪರಿಗಣಿಸಬೇಕು ಹಾಗೂ ವಿದ್ಯುತ್ ಸ್ಥಾವರ ಸ್ಥಾಪನೆಗೆ “ರಾಜ್ಯ ಮಟ್ಟದ ಪರಿಸರ ಪರಿಣಾಮ ನಿರ್ಧಾರಣಾ ಪ್ರಾಧಿಕಾರ’ವು 2015ರ ಸೆ.1ರಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ (ಕೆಪಿಸಿಎಲ್) ನೀಡಿರುವ ಪರಿಸರ ಪರವಾನಗಿಯನ್ನು ರದ್ದುಗೊಳಿಸುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು.
ಪುಟ್ಟೇನಹಳ್ಳಿ ಕೆರೆ ಸಂರಕ್ಷಣೆಗೆ ಅಗತ್ಯ ಆರ್ಥಿಕ ನೆರವು ಒದಗಿಸಲು ರಾಜ್ಯ ಅರಣ್ಯ ಇಲಾಖೆಗೆ ಸೂಚನೆ ನೀಡಬೇಕು. ಅರ್ಜಿ ಇತ್ಯರ್ಥ ಆಗುವವರೆಗೆ ಪರಿಸರ ಪರವಾನಗಿ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಪುಟ್ಟೇನಹಳ್ಳಿ ಕೆರೆಯನ್ನು “ಪಕ್ಷಿ ಸಂರಕ್ಷಣಾ ಮೀಸಲು’ ಎಂದು ಘೋಷಿಸಿ ರಾಜ್ಯ ಅರಣ್ಯ ಇಲಾಖೆ 2015ರ ಎ.29ರಂದು ಅಧಿಸೂಚನೆ ಹೊರಡಿಸಿದೆ. ವಿವಿಧ ಪ್ರಭೇದದ 127 ಪಕ್ಷಿಗಳು ಇಲ್ಲಿವೆ.
ಒಂದು ವೇಳೆ ಈ ಕೆರೆಯ 500 ಮೀ. ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸದರೆ ಪಕ್ಷಿ ಸಂಕುಲ ನಾಶವಾಗಲಿದೆ. ಇದರಿಂದ ಕೇವಲ ಪುಟ್ಟೇನಹಳ್ಳಿ ಅಥವಾ ಯಲಹಂಕ ಕೆರೆ ಅಷ್ಟೇ ಅಲ್ಲ, ನಗರದ ಇಡೀ ರಾಜಕಾಲುವೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ, ವಿದ್ಯುತ್ ಸ್ಥಾವರ ಸ್ಥಾಪನೆಗೆ ನೀಡಲಾಗಿರುವ ಪರಿಸರ ಪರವಾನಗಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.