ಬೆಂಗಳೂರು: ಸಾಕಿದ್ದ ಪ್ರೀತಿಯ ಪಾರಿವಾಳ ಹಾರಿ ಬಿಟ್ಟಿದಕ್ಕೆ ಕೋಪಗೊಂಡ ನೆರೆಮನೆಯ ಬಾಲಕ ಕಾಲಿನಿಂದ ಎರಡು ವರ್ಷದ ಮಗುವಿನ ಕುತ್ತಿಗೆ ತುಳಿದು ಕೊಂದಿರುವ ಘಟನೆ ಸೋಲದೇವನಹಳ್ಳಿಯಲ್ಲಿ ನಡೆದಿದೆ. ರಾಯಚೂರು ಮೂಲದ ಬಸವರಾಜು, ವೆಂಕಮ್ಮ ದಂಪತಿ ಪುತ್ರ ವೆಂಕಟೇಶ್ ಕೊಲೆಯಾದ ಮಗು. ಈ ಸಂಬಂಧ ನೆರೆ ಮನೆಯ 14 ವರ್ಷದ ಬಾಲಕನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಂಪಾಪುರ ಗ್ರಾಮದ ಬಸವೇಶ್ವರ ಲೇಔಟ್‌ನಲ್ಲಿ ಒಂದೇ ಕಾಂಪೌಂಡ್‌ನಲ್ಲಿರುವ ಎರಡು ಬಾಡಿಗೆ ಮನೆಗಳಲ್ಲಿ 8 ತಿಂಗಳಿಂದ ಬಸವರಾಜು ದಂಪತಿ ಹಾಗೂ ಬಾಗಲಕೋಟೆ ಮೂಲದ ಈರಣ್ಣ ದಂಪತಿ ವಾಸವಾಗಿದ್ದಾರೆ. ಬಸವರಾಜು ದಂಪತಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದು, ಈರಣ್ಣ ದಂಪತಿ ಟೀ ವ್ಯಾಪಾರ ಮಾಡುತ್ತಿದ್ದರು.
ಈರಣ್ಣ ದಂಪತಿ ಪುತ್ರ, ಆರೋಪಿ 8ನೇ ತರಗತಿ ಓದುತ್ತಿದ್ದು, ಹತ್ತಾರು ಪಾರಿವಾಳಗಳು ಹಾಗೂ ಒಂದು ನಾಯಿ ಸಾಕಿದ್ದಾನೆ. ಎರಡು ದಿನಗಳ ಹಿಂದೆ ನಾಯಿಗೆ ಹಾಲು ಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಅಲ್ಲದೇ ಮೃತ ಮಗು ವೆಂಕಟೇಶ್, ಈರಣ್ಣ ನ ಪುತ್ರ ಸಾಕಿದ್ದ ಪಾರಿವಾಳಗಳನ್ನು ಆಗಾಗ್ಗೆ ಹಾರಿ ಬಿಡುತ್ತಿದ್ದ. ಇದರಿಂದ 3-4 ಪಾರಿವಾಳಗಳು ಸತ್ತಿದ್ದವು. ಇದಕ್ಕೆ ಈರಣ್ಣ ಪುತ್ರ ಅಸಮಾಧಾನ ಗೊಂಡಿದ್ದ.
ಪಾರಿವಾಳ ಹಾರಿ ಬಿಟ್ಟ ವೆಂಕಟೇಶ್: ಬುಧವಾರ ಮಧ್ಯಾಹ್ನ ಕೂಡ 12 ಗಂಟೆ ಸುಮಾರಿಗೆ ಮನೆ ಮುಂದೆ ವೆಂಕಟೇಶ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದವ ಒಟ್ಟಿಗೆ ಆಟವಾಡುತ್ತಿದ್ದರು. ಇದೇ ವೇಳೆ ವೆಂಕಟೇಶ್ ಗೂಡಿನಲ್ಲಿದ್ದ ಪಾರಿವಾಳವೊಂದನ್ನು ಹಾರಿ ಬಿಟ್ಟಿದ್ದಾನೆ. ಅದು ಬಹಳ ಎತ್ತರಕ್ಕೆ ಹಾರಿ ಹತ್ತಿರದ ನೀಲಗಿರಿ ತೋಪಿನಲ್ಲಿ ನಾಪತ್ತೆಯಾಗಿದೆ. ಇದಕ್ಕೆ ಕೋಪಗೊಂಡ ಕಾನೂನು ಸಂಘರ್ಷಕ್ಕೊಳಗಾದವ ವೆಂಕಟೇಶ್‌ಗೆ ನಿಂದಿಸಿದ್ದು, ಬಳಿಕ ನೀಲಗಿರಿ ತೋಪಿನಲ್ಲಿ ಪಾರಿವಾಳ ಹುಡುಕಾಟಕ್ಕೆ ಕರೆದೊಯ್ದಿದ್ದಾನೆ.
ಕಾಲಿನಿಂದ ಕುತ್ತಿಗೆ ತುಳಿದು ಹತ್ಯೆ: ಹುಡುಕಾಟಕ್ಕೆ ಹೋಗಿದ್ದ ಇಬ್ಬರಿಗೂ ಪಾರಿವಾಳ ಪತ್ತೆಯಾಗಿಲ್ಲ. ಆದರೆ, ತೋಪಿನ ಒಂದು ಭಾಗದಲ್ಲಿ ಪಾರಿವಾಳ ಸತ್ತು ಬಿದ್ದಿತ್ತು. ಇದರಿಂದ ಕೋಪಗೊಂಡ ಆತ ವೆಂಕಟೇಶ್‌ಗೆ ಕಪಾಳ ಹೊಡೆದಿದ್ದಾನೆ. ಇದರ ರಭಸಕ್ಕೆ ವೆಂಕಟೇಶ್ ಕುಸಿದು ಬಿದ್ದಿದ್ದಾನೆ. ಬಳಿಕ ಮಗುವಿನ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ಅಪರಿಚಿಯತರು ಬರುತ್ತಿರುವ ಶಬ್ಧ ಕೇಳಿ ಅಲ್ಲೇ ಬಿದ್ದಿದ್ದ ತರಗೆಲೆಗಳನ್ನು ವೆಂಕಟೇಶ್ ಮೇಲೆ ಮುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೋಷಕರೊಂದಿಗೆ ಹುಡುಕಾಡಿದ ಬಾಲಕ: ಇತ್ತ ಆತಂಕದಿಂದಲೇ ತೋಪಿನಿಂದ ಹೊರಬಂದ ಈರಣ್ಣ ಮಗ ಸೀದಾ ಮನೆಯೊಳಗೆ ಸೇರಿಕೊಂಡಿದ್ದಾನೆ. ಬಳಿಕ ಬಸವರಾಜು ದಂಪತಿ ಸಂಜೆಯಾದರೂ ವೆಂಕಟೇಶ್ ಕಾಣದ್ದಕ್ಕೆ ಭಯಗೊಂಡು ವಿಚಾರಣೆ ನಡೆಸಿದ್ದಾರೆ. ಆಗ ಬಾಲಕ ಸುಳ್ಳು ಹೇಳಿದ್ದು, ನಂತರ ಅವರೊಂದಿಗೂ ಕೆಲ ಹೊತ್ತು ಹುಡುಕಾಟ ನಡೆಸಿ ಮನೆಗೆ ಹಿಂದಿರುಗಿದ್ದಾನೆ. ತೋಪಿನಲ್ಲಿ ಹುಡುಕಾಡುತ್ತಿದ್ದ ಸಾರ್ವಜನಿಕರಿಗೆ ಸಂಜೆ 5 ಗಂಟೆ ಸುಮಾರಿಗೆ ವೆಂಕಟೇಶ್‌ನ ಮೃತ ದೇಹ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ಕೆರದೊಯ್ದಿದ್ದಾರೆ. ಆದರೆ ಮೃತವಾಗಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಈರಣ್ಣ ದಂಪತಿ ವಿರುದ್ಧ ದೂರು: ಎರಡು ದಿನಗಳ ಹಿಂದೆ ನಡೆದಿದ್ದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿ ವೆಂಕಟೇಶ್ ಪೋಷಕರು ಈರಣ್ಣ ದಂಪತಿ ಹಾಗೂ ಪುತ್ರನ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.