Advertisement

ಉತ್ಸವದಲ್ಲಿ ಕಾಣಲಿಲ್ಲ ರಾಷ್ಟ್ರಕೂಟರ ಭಾವಚಿತ್ರ

11:05 AM Mar 05, 2018 | Team Udayavani |

ಸೇಡಂ: ಉತ್ಸವ ಅಂದರೆ ಆ ಸ್ಥಳದ ಇತಿಹಾಸ, ವ್ಯಕ್ತಿಚಿತ್ರ, ಸಂಸ್ಕೃತಿ, ಸಂಪ್ರದಾಯಗಳನ್ನು ಅನಾವರಣಗೊಳಿಸುವುದು. ಆದರೆ ರಾಷ್ಟ್ರಕೂಟರ ಸಣ್ಣ ಭಾವಚಿತ್ರವಿಲ್ಲದೆಯೇ ಇಡೀ ಉತ್ಸವ ನಡೆದಿದೆ. ಇಂತದ್ದೊಂದು ಅಪರೂಪದ, ವಿಲಕ್ಷಣ ಘಟನೆ ತಾಲೂಕಿನ ಮಳಖೇಡ ಗ್ರಾಮದಲ್ಲಿ ಜಿಲ್ಲಾಡಳಿತ ಎರಡು ದಿನಗಳ ಕಾಲ ಹಮ್ಮಿಕೊಂಡ ರಾಷ್ಟ್ರಕೂಟರ ಉತ್ಸವದಲ್ಲಿ ಕಂಡು ಬಂದಿದೆ. ಉತ್ಸವ ಯಾರ ಹೆಸರಿನ ಮೇಲೆ ನಡೆಯುತ್ತಿವೆಯೋ ಅವರಪರಿಚಯ ಬಂದಂತಹ ಪ್ರೇಕ್ಷಕರಿಗೆ, ಯಾತ್ರಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ  ಆಗಬೇಕು. ಆದರೆ ಇಡೀ ಸಮಾರಂಭದ ಯಾವ ಮೂಲೆಯಲ್ಲಿಯೂ ನೃಪತುಂಗ ಚಕ್ರವರ್ತಿ ಕುರುಹು ಸಿಗಲಿಲ್ಲ.

Advertisement

ಬಹುನಿರೀಕ್ಷಿತ ರಾಷ್ಟ್ರಕೂಟರ ಉತ್ಸವ ಕೆಲ ಅನಾನುಕೂಲತೆಗಳಿಂದ ಮುಂದುವರಿಯಿತು. ಸಂಸದ ಮಲ್ಲಿಕಾರ್ಜುನ ಖರ್ಗೆ ಸೇರಿ ಬಹುತೇಕ ಗಣ್ಯರ ಅನುಪಸ್ಥಿತಿ ಮತ್ತು ನಿರೀಕ್ಷಿತ ಮಟ್ಟದಲ್ಲಿ ಜನ ಸೇರದೇ ಇರುವುದು ಎದ್ದು ಕಾಣುತ್ತಿತ್ತು. ಈ ಮಧ್ಯೆ ಬಹುತೇಕ ಸ್ಥಳೀಯ ಸಾಹಿತಿ ಮತ್ತು ಕನ್ನಡಪರ ಸಂಘಟನೆಗಳ ಪ್ರಮುಖರನ್ನು ಕಡೆಗಣಿಸಿರುವುದು ಅನೇಕರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತು. 

ಹಂಪಿ ಉತ್ಸವದ ಮಾದರಿಯಲ್ಲಿ ರಾಷ್ಟ್ರಕೂಟರ ಉತ್ಸವ ಆಚರಿಸಲಾಗುವುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಕೋಟೆ ಕೇವಲ ಕಲ್ಲುಗಳಿಗೆ ಮಾತ್ರ ಸೀಮಿತವಾಗಿತ್ತು. ಯಾವ ರೀತಿಯ ಅಲಂಕಾರವೂ ಅಲ್ಲಿ ಕಂಡು ಬರಲಿಲ್ಲ. ಕವಿರಾಜಮಾರ್ಗ ಕೃತಿ ಶಿಲಾಕೃತಿ ಮಾತ್ರ ಹೊಸದು ಎನಿಸಿತ್ತು.

ವಿಶೇಷ ಮತ್ತು ಸಾಮಾನ್ಯ ಎಂಬ ಎರಡು ವಿಭಾಗಗಳಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯ ಜನರಿಗಾಗಿ ನೀಡಿದ ಊಟದಲ್ಲಿ ಅನ್ನ ಮತ್ತು ತರಕಾರಿನೂ ಸರಿಯಾಗಿ ಬೇಯಿಸದಿರುವುದು ಕಂಡು ಬಂತು. ಇದರಿಂದ ನೀರು ಅನ್ನ ಮತ್ತು ಹಸಿ ತರಕಾರಿ ತಿಂದ ಅನುಭವವಾಯಿತು.. ಊಟದ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕುಡಿಯುವ ನೀರಿಗೆ ಹರಸಾಹಸ ಪಟ್ಟು ದಾಹ ನೀಗಿಸಿಕೊಳ್ಳುವಂತಾಯಿತು ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಅಳಲು ತೋಡಿಕೊಂಡರು. ಕೇವಲ ತಮ್ಮ ಪ್ರತಿಷ್ಠೆಯನ್ನು ರಾಜ್ಯಮಟ್ಟದಲ್ಲಿ ಬಿಂಬಿಸಿಕೊಳ್ಳಲು ರಾಷ್ಟ್ರಕೂಟರ ಉತ್ಸವ ಆಚರಿಸಲಾಗುತ್ತಿದೆ. ರಾಷ್ಟ್ರಕೂಟರ ನೆಲೆ ಉಳಿಸಲು ಹೋರಾಟ ನಡೆಸಿದ ಅನೇಕ ಹೋರಾಟಗಾರರನ್ನು ಕಡೆಗಣಿಸಲಾಗಿದೆ ಎಂದು ಮಳಖೇಡ ನಮೋ ಬುದ್ಧ ಸೇವಾ ಕೇಂದ್ರದ ಅಧ್ಯಕ್ಷ ರಾಜಕುಮಾರ ಕಟ್ಟಿ ಆರೋಪಿಸಿದರು.

ಶಿವಕುಮಾರ ಬಿ. ನಿಡಗುಂದಾ

Advertisement
Advertisement

Udayavani is now on Telegram. Click here to join our channel and stay updated with the latest news.

Next